ಯಾರೂ ಭಯಪಡುವ ಅವಶ್ಯಕತೆ ಇಲ್ಲ : ಜನರ ಸುರಕ್ಷತೆಯೇ ನಮ್ಮ ಆದ್ಯತೆ
No one needs to be afraid: People's safety is our priority
ವಿಜಯಪುರ, ಸೆಪ್ಟೆಂಬರ್, 28 : ಯಾರೂ ಭಯಪಡುವ ಅವಶ್ಯಕತೆ ಇಲ್ಲ, ಸರ್ಕಾರ-ಜಿಲ್ಲಾಡಳಿತ ನಿಮ್ಮೊಂದಿಗಿದೆ. ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸಿ, ಪರಿಹಾರ ಕಲ್ಪಿಸಲಿದೆ. ಪ್ರವಾಹದಿಂದ ಹಾನಿಗೊಳಗಾದ ಬೆಳೆ ನಾಶ- ಮನೆ ಹಾನಿಯನ್ನು ಸಂಪೂರ್ಣವಾಗಿ-ಸಮಗ್ರವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ತಿಳಿಸಿದರು.
ಪ್ರವಾಹ ಪೀಡಿತ ಜಿಲ್ಲೆಯ ಸಿಂದಗಿ ಹಾಗೂ ಇಂಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ ಪರೀಶೀಲನೆ ನಡೆಸಿದ ಸಚಿವರು, ಪ್ರವಾಹಕ್ಕೊಳಗಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಸಂತ್ರಸ್ತರ ಅಹವಾಲುಗಳನ್ನು ಆಲಿಸಿದರು.
ದೇವರನಾವದಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಸಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಚಿವರು, ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರೀಶೀಲನೆ ನಡೆಸಿ, ಅಲ್ಲಿನ ಸಂತ್ರಸ್ಥರೊಂದಿಗೆ ಮಾತನಾಡಿ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಯಾವದೇ ಜನ ಜಾನುವಾರಗಳ ಪ್ರಾಣ ಹಾನಿಯಾಗದಂತೆ ಎಲ್ಲಾ ರೀತಿಯ ಸಕಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರವಾಹಕ್ಕೊಳಗಾಗಿ ಹಾನಿಗೊಳಗಾದ ಕೃಷಿ, ತೋಟಗಾರಿಕೆ ಸೇರಿದಂತೆ ಬೆಳೆಗಳ ಸಮಗ್ರ ಸಮೀಕ್ಷೆಗೆ ಈಗಾಗಲೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಹಾನಿಗೊಳಗಾದವರನ್ನು ಸೂಕ್ತವಾದ ಪರಿಹಾರ ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಕ್ಷೇತ್ರದ ಶಾಸಕರ ಸಹಯೋಗದೊಂದಿಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಉಜನಿ ಡ್ಯಾಂನಿಂದ ಸೀನಾ ನದಿಯ ಮೂರುವರೆ ಲಕ್ಷ ಕ್ಯೂಸೆಕ್ ನೀರು ಹರಿಬಿಡುವುದರಿಂದ ಸ್ವಾಭಾವಿಕವಾಗಿ ಜಿಲ್ಲೆಯ ಇಂಡಿ ಹಾಗೂ ಸಿಂದಗಿ ತಾಲೂಕಿನ ವಿವಿಧ ಭಾಗದಲ್ಲಿ ತೀವ್ರವಾದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕುಮಸಿಯ 100 ಮನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಈ ಕುಟುಂಬಗಳಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಿ, ಊಟೋಪಚಾರ, ಓಷಧ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಕುಟುಂಬಗಳಿಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುಮತಿ ಪಡೆದು, ಬೇರೆ ಜಾಗವನ್ನು ನೇರವಾಗಿ ಖರೀದಿಸಿ ಈ ಕುಟುಂಬಗಳಿಗೆ ನೀಡಿ ಸ್ಥಳಾಂತರ ಮಾಡಲು ಕ್ರಮ ವಹಿಸಲಾಗುವುದು. ಜನರ ನೋವುಗಳಿಗೆ ಸ್ಪಂದಿಸಲಾಗುವುದು. ನಾನೂ ಕೂಡ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರನ್ನು ಈ ಕುರಿತು ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಪ್ರವಾಹ ಪರಿಸ್ಥಿತಿಯಿಂದ ಈ ಭಾಗದ ಹತ್ತಿ, ಈರುಳ್ಳಿ, ತೊಗರಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಈ ಭಾಗದಲ್ಲಿ ಕಬ್ಬು ಬೆಳೆ ಕೂಡ ಶೇ.50 ರಷ್ಟು ನಾಶವಾಗಿದೆ. ಕ್ಷೇತ್ರದ ಶಾಸಕರಾದಿಯಾಗಿ, ಜಿಲ್ಲಾಡಳಿತ ಜನರ ಕಷ್ಟ-ನೋವುಗಳಿಗೆ ಸ್ಪಂದಿಸಿ, ಕಾಳಜಿಪೂರ್ವಕವಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳು ಸಹ ಶೀಘ್ರದಲ್ಲೇ ಪ್ರವಾಹಕ್ಕೊಳಗಾಗಿ ಹಾನಿಗೊಳಗಾದ ಪ್ರದೇಶಗಳನ್ನು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಯ ಆಲಮೇಲ ತಾಲೂಕಿನ ದೇವರ ನಾವದಗಿ ಗ್ರಾಮದ ರೈತ ಬಸಪ್ಪ ನಿಂಗಪ್ಪ ಪೂಜಾರಿ ಅವರ ಜಮೀನಿನಲ್ಲಿ ಈತುಳ್ಳಿ ಬೆಳೆ ಹಾನಿ ವೀಕ್ಷಣೆ, ಜಿಲ್ಲೆಯ ಆಲಮೇಲ ತಾಲೂಕಿನ ದೇವರ ನಾವದಗಿ ಗ್ರಾಮದ ಶರಣಪ್ಪ ಯರಗಲ ಅವರ ಕಬ್ಬು ಹಾನಿ ಹಾಗೂ ದೇವಣಗಾಂವ ಗ್ರಾಮದ ಬಳಿ ಹೊಲದಲ್ಲಿ ನಿಂತಿರುವ ನೀರನ್ನು ಸಚಿವರು ವೀಕ್ಷಣೆ ಮಾಡಿದರು.
ಜಿಲ್ಲೆಯ ದೇವಣಗಾಂವ ಗ್ರಾಮದ ಬಳಿ ಸೇತುವೆಗೆ ಭೇಟಿ ನೀಡಿ, ವೀಕ್ಷಿಸಿದ ಸಚಿವರು, ನಂತರ. ದೇವಣಗಾಂವದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ. ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಅಧಿಕಾರಿಗಳು ಅಧಿಕಾರಿಗಳು ಉಪಸ್ಥಿತರಿದ್ದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 