ನವದೆಹಲಿ, ಅ 17: ದೇಶದ ಬ್ಯಾಂಕುಗಳ ಪ್ರಸ್ತುತ ಎದುರಿಸುತ್ತಿರುವ ದುಸ್ಥಿತಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತು ಅಂದಿನ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಕಾರಣ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಡಾ. ಮನಮೋಹನ್ ಸಿಂಗ್, ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು, ಸರ್ಕಾರ ತನ್ನ ವಿರೋಧಿಗಳ ಮೇಲೆ ಆರೋಪ ಹೊರಿಸುವಲ್ಲಿ ನಿರತವಾಗಿದೆ ಎಂದು ಹೇಳಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿಕೆಯನ್ನು ಈಗಷ್ಟೇ ಗಮನಿಸಿದ್ದೇನೆ. ಆರ್ಥಿಕತೆಯನ್ನು ಸರಿಪಡಿಸಲು ಯಾರಾದರೂ ಪ್ರಯತ್ನಿಸಿದರೆ ಮೊದಲು ಸಮಸ್ಯೆ, ಸಮಸ್ಯೆಯ ಮೂಲ ಏನು ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು, ವಿರೋಧ ಪಕ್ಷಗಳು ಎಲ್ಲದಕ್ಕೂ ಕಾರಣ ಎಂದು ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಮೆರಿಕಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಪ್ರಧಾನಿ ಡಾ. ಮನಮೋಹನ್ ಸಿಂಗ್, ರಘುರಾಮ್ ರಾಜನ್ ಆರ್ ಬಿ ಐ ಗರ್ವನರ್ ಆಗಿದ್ದಾಗ ಕೈಗೊಂಡ ಕ್ರಮಗಳು ಪ್ರಸ್ತುತ ದೇಶದ ಬ್ಯಾಂಕುಗಳು ಎದುರಿಸುತ್ತಿರುವ ಸಮಸ್ಯೆಗೆ ಕಾರಣ ಎಂದು ದೂರಿದ್ದರು. ಅವರ ಅಧಿಕಾರಾವಧಿಯಲ್ಲಿ ಕೇವಲ ದೂರವಾಣಿ ಕರೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲಗಳನ್ನು ಮಂಜೂರು ಮಾಡಲಾಗಿತ್ತು ಎಂದು ಆಕೆ ಆರೋಪಿಸಿದ್ದರು.