ನಿರಾಣಿ ಸಕ್ಕರೆ ಕಾರ್ಖಾನೆಯ ಇಂಜಿನಿಯರಿಂಗ್ ಸಿಬ್ಬಂದಿಗೆ ಸನ್ಮಾನ

ನಿರಾಣಿ ಸಕ್ಕರೆ ಕಾರ್ಖಾನೆಯ ಇಂಜಿನಿಯರಿಂಗ್ ಸಿಬ್ಬಂದಿಗೆ ಸನ್ಮಾನ Nirani Sugar Factory Engineering Staff Honored

                                                      ಏಕ್ಕಲಮರಡಿ ಏತ ನೀರಾವರಿ ಪಂಪ್ ವರ್ಕ್‌ ಕಾಮಗಾರಿ ಪೂರ್ಣ 

ಲೋಕದರ್ಶನ ವರದಿ 

ಜಮಖಂಡಿ 07: ಉತ್ತರ ಕರ್ನಾಟಕದ ರೈತರ ಬಹುಕಾಲದ ನೀರೀಕ್ಷೆಯಾಗಿದ್ದ ತಾಲೂಕಿನ ಜನವಾಡ ಗ್ರಾಮದ ಹತ್ತಿರದ ಏಕ್ಕಲಮರಡಿ ಏತ ನೀರಾವರಿ ಯೋಜನೆಯ ಪಂಪ್ ವರ್ಕ್‌ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಕಾಮಗಾರಿಯಲ್ಲಿ ಶ್ರಮಿಸಿದ ನಿರಾಣಿ ಸಕ್ಕರೆ ಕಾರ್ಖಾನೆಯ ತಾಂತ್ರಿಕ ವಿಭಾಗದ ಇಂಜಿನಿಯರಿಂಗ್ ಸಿಬ್ಬಂದಿಯನ್ನು ಏಕ್ಕಲಮರಡಿ ಏತ ನೀರಾವರಿ ಹೋರಾಟ ಸಮಿತಿ ಹಾಗೂ ವಿವಿಧ ಗ್ರಾಮಗಳ ರೈತರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. 

ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರು, ಯೋಜನೆಯ ಯಶಸ್ಸಿಗೆ ತಾಂತ್ರಿಕ ಸಿಬ್ಬಂದಿಯ ಶ್ರಮ, ಬದ್ಧತೆ ಹಾಗೂ ಕಾರ್ಯನಿಷ್ಠೆಯೇ ಪ್ರಮುಖ ಕಾರಣವಾಗಿದೆ. ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿರುವುದು ಶ್ಲಾಘನೀಯ ಸಾಧನೆಯಾಗಿದ್ದು, ಈ ಯೋಜನೆ ಸಾವಿರಾರು ರೈತ ಕುಟುಂಬಗಳ ಬದುಕಿಗೆ ಹೊಸ ಭರವಸೆ ಮೂಡಿಸಿದೆ ಎಂದರು. 

ಯೋಜನೆ ಪೂರ್ಣಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಕೃಷಿಭೂಮಿಗಳಿಗೆ ಸಮರ​‍್ಕ ನೀರಾವರಿ ಸೌಲಭ್ಯ ದೊರೆಯಲಿದ್ದು, ಬೆಳೆ ಉತ್ಪಾದನೆ ಹೆಚ್ಚುವ ಜೊತೆಗೆ ರೈತರ ಆರ್ಥಿಕ ಸ್ಥಿತಿಗೂ ಬಲ ಸಿಗಲಿದೆ. ಈ ಯೋಜನೆ ಈ ಭಾಗದ ಕೃಷಿ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯಲಿದೆ ಎಂಬ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದರು. 

ಸನ್ಮಾನ ಸ್ವೀಕರಿಸಿದ ನಿರಾಣಿ ಸಕ್ಕರೆ ಕಾರ್ಖಾನೆಯ ಇಂಜಿನಿಯರಿಂಗ್ ಸಿಬ್ಬಂದಿ ಮಾತನಾಡಿ, ಸಂಸ್ಥೆಯ ಆಡಳಿತ ಮಂಡಳಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ತಂಡದ ಪ್ರತಿಯೊಬ್ಬ ಸದಸ್ಯರ ಸಮರ​‍್ಿತ ಸೇವೆಯಿಂದ ಈ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ರೈತರ ಹಿತದೃಷ್ಟಿಯಿಂದ ಅಗತ್ಯ ತಾಂತ್ರಿಕ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದರು. 

ಯೋಜನೆಗೆ ಶ್ರಮಿಸಿದ ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿಗೆ ರೈತರು ಹೂಮಾಲೆ ಹಾಕಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಏಕ್ಕಲಮರಡಿ ಏತ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳು, ವಿವಿಧ ಗ್ರಾಮಗಳ ರೈತ ಮುಖಂಡರು, ರೈತರು ಹಾಗೂ ನಿರಾಣಿ ಸಕ್ಕರೆ ಕಾರ್ಖಾನೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.