ಕಾಡು ಅಣಬೆ ಸಾಂಬಾರು ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ

ಕಾಡು ಅಣಬೆ ಸಾಂಬಾರು ಸೇವಿಸಿ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ  Nine members of the same family fall ill after consuming wild mushroom curry

ಬ್ಯಾಡಗಿ, ಜು. 31: ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಕಾಡು ಅಣಬೆಯಿಂದ ತಯಾರಿಸಿದ ಸಾಂಬಾರು ಸೇವಿಸಿದ ಪರಿಣಾಮ ಒಂದೇ ಕುಟುಂಬದ ಒಂಬತ್ತು ಮಂದಿ ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.  

ಗ್ರಾಮದ ಬಂಗೇರ ಕುಟುಂಬದ ಸದಸ್ಯರು ಶನಿವಾರ ಹೊಲಕ್ಕೆ ತೆರಳಿದ್ದ ವೇಳೆ ಹೊಲದ ಬದಿಯಲ್ಲಿ ಬೆಳೆದಿದ್ದ ಕಾಡು ಅಣಬೆಗಳನ್ನು ಸಂಗ್ರಹಿಸಿ ಮನೆಗೆ ತಂದಿದ್ದರು. ಬಳಿಕ ಅದರಿಂದ ಸಾಂಬಾರು ತಯಾರಿಸಿ ರಾತ್ರಿ ಊಟ ಮಾಡಿದ್ದರು.  

ಊಟ ಮಾಡಿದ ಕೆಲವೇ ಗಂಟೆಗಳಲ್ಲಿ ಕುಟುಂಬದ ಒಂಬತ್ತು ಮಂದಿಗೆ ಹೊಟ್ಟೆನೋವು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಬ್ಯಾಡಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಬಳಿಕ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.  

ಘಟನೆಯ ಮಾಹಿತಿ ತಿಳಿದು ಬಿಜೆಪಿ ಯುವ ಮುಖಂಡ ಎಂ.ಎಸ್‌. ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದರು. ಅಲ್ಲದೆ ವೈದ್ಯರೊಂದಿಗೆ ಚರ್ಚಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು.