2024-25ರಲ್ಲಿ 1.19 ಕೋಟಿ ಮೀರಿ ನಿವ್ವಳ ಲಾಭ : ರಾಜಶೇಖರ ಪಾಟೀಲ

2024-25ರಲ್ಲಿ 1.19 ಕೋಟಿ ಮೀರಿ ನಿವ್ವಳ ಲಾಭ : ರಾಜಶೇಖರ ಪಾಟೀಲ Net profit to exceed Rs 1.19 crore in 2024-25: Rajashekar Patil

ಜನತಾ ಸಹಕಾರ ಬ್ಯಾಂಕಿನ 48ನೇ ವಾರ್ಷಿಕ ಮಹಾಸಭೆ 

ಹಾರೂಗೇರಿ, 02 : ಜನತೆಯ ವಿಶ್ವಾಸವೇ ಜನತಾ ಬ್ಯಾಂಕಿನ ಮೂಲ ಬಂಡವಾಳವಾಗಿದ್ದು, ಆಡಳಿತ ಮಂಡಳಿಯ ಪ್ರಾಮಾಣಿಕತೆಯಿಂದ ಜನತೆಯ ಪ್ರೀತಿ ವಿಶ್ವಾಸ ಗಳಿಸಿ, 2024-25ನೇ ಆರ್ಥಿಕ ವರ್ಷದಲ್ಲಿ ಜನತಾ ಸಹಕಾರ ಬ್ಯಾಂಕ 1.19 ಕೋಟಿ ಮೀರಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ ಹೇಳಿದರು. 

ಪಟ್ಟಣದ ಜನತಾ ಸಹಕಾರ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆದ 48ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರು ಹಾಗೂ ಸಣ್ಣಪುಟ್ಟ ವ್ಯಾಪಾರಸ್ತರಿಗೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಿ, ಅವರ ಆರ್ಥಿಕ ಸಭಲತೆಗೆ ಜನತಾ ಬ್ಯಾಂಕು ಸಾಕ್ಷಿಯಾಗಿದೆ. ಬ್ಯಾಂಕಿನ ಎಲ್ಲಾ ಶೇಅರುದಾರರಿಗೆ ಶೇ 16 ರಷ್ಟು ಲಾಭಾಂಶ ನೀಡಲಾಗಿದೆ ಎಂದು ರಾಜಶೇಖರ ಪಾಟೀಲ ಹೇಳಿದರು. 

ವೃತ್ತಿಪರ ನಿರ್ದೇಶಕ ಸಿ.ಡಿ.ಮುಂಗುರವಾಡಿ ಮಾತನಾಡುತ್ತ ಭಾರತ ಜಾಗತಿಕವಾಗಿ ಆರ್ಥಿಕ ಪ್ರಗತಿಯಲ್ಲಿ 4ನೇ ಸ್ಥಾನದಲ್ಲಿದೆ. ಪ್ರತಿ ತಿಂಗಳ ಜಿಎಸ್‌ಟಿ 2ಲಕ್ಷ ಕೋಟಿರೂ ಮೀರಿದ್ದು, ಜಿಡಿಪಿ ಆಧಾರದಲ್ಲಿ 2027ಕ್ಕೆ ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಲಿದೆ. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಬ್ಯಾಂಕುಗಳ ಕೊಡುಗೆ ಅನನ್ಯವಾಗಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸಹಕಾರ ಬ್ಯಾಂಕು, ಸಂಘ ಸಂಸ್ಥೆಗಳು ಜನಸಾಮಾನ್ಯರಿಗೆ ತೀರ ಹತ್ತಿರವಾಗಿವೆ ಎಂದು ಹೇಳಿದರು. 

ಆಡಳಿತ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಸಿ.ಆರ್‌.ಗುಡಸಿ ಮಾತನಾಡುತ್ತ ಬ್ಯಾಂಕಿನಲ್ಲಿ ಠೇವಣಿ ಮಾಡಿರುವ ಗ್ರಾಹಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಗ್ರಾಹಕರ ಹಿತದೃಷ್ಠಿಯಿಂದ ರಿಸರ್ವ ಬ್ಯಾಂಕಿನಲ್ಲಿ ಹೆಚ್ಚಿನ ಠೇವು ಮಾಡಲಾಗಿದೆ ಎಂದರು. 

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್‌.ಎಸ್‌.ಅಮರಶೆಟ್ಟಿ ಅಡಾವೆ ಪತ್ರಿಕೆ ಮತ್ತು ವರದಿ ವಾಚನ ಮಾಡುತ್ತ 4747 ಸದಸ್ಯರಿದ್ದು, 211.61 ಕೋಟಿರೂ ದುಡಿಯುವ ಬಂಡವಾಳ ಹೊಂದಿದೆ. 184.27 ಕೋಟಿ ರೂ ಠೇವು ಸಂಗ್ರಹಿಸಿದ್ದು, 109 ಕೋಟಿ ರೂ ಸಾಲ ವಿತರಿಸಿ, 2024-25ನೇ ಆರ್ಥಿಕ ವರ್ಷದಲ್ಲಿ 1.19 ಕೋಟಿರೂ ಮೀರಿ ನಿವ್ವಳ ಲಾಭ ಹೊಂದಿದೆ ಎಂದು ವಿವರಿಸಿದರು. 

ಈ ವೇಳೆ ಬೆಳಗಾವಿ ಜಿಲ್ಲಾ 17ನೇ ಕಸಾಪ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಡಾ.ವಿ.ಎಸ್‌.ಮಾಳಿ, ಸೇವಾ ನಿವೃತ್ತಿ ಹೊಂದಿದ ಎಸ್‌.ಕೆ.ಕಂಬಾರ, ಇ.ಎಚ್‌.ಠಕ್ಕಳಕಿ ಅವರನ್ನು ಆಡಳಿತ ಮಂಡಳಿ ವತಿಯಿಂದ ಸತ್ಕರಿಸಲಾಯಿತು. 

ಬ್ಯಾಂಕ್ ಉಪಾಧ್ಯಕ್ಷರಾದ ತಮ್ಮಣ್ಣಪ್ಪ ತೇಲಿ, ನಿರ್ದೇಶಕರಾದ ಪ್ರಕಾಶ ಕಶೆಟ್ಟಿ, ಸಂಜೀವ ಅವಕ್ಕನವರ, ಜಯಶ್ರೀ ಪಾಟೀಲ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಪಾಲಭಾವಿ, ಭೀಮಗೊಂಡ ಕರ್ಣವಾಡಿ, ಹಣಮಂತ ಮಡಿವಾಳ, ರಾಮಪ್ಪ ನಾಯಿಕ, ಬಸಗೌಡ ಪಾಟೀಲ, ಎಂ.ಬಿ.ಮಠಪತಿ, ಎಸ್‌.ಟಿ.ತೇಲಿ ಮತ್ತು ರಾಯಬಾಗ, ಉಗಾರಖುರ್ದ, ಅಥಣಿ ಶಾಖೆಗಳ ಸಿಬ್ಬಂದಿ ಹಾಗೂ ಸದಸ್ಯರು ಮಹಾಸಭೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಆನಂದ ಗುರವ ಸ್ವಾಗತಿಸಿದರು. ಸುನೀಲ ಕಬ್ಬೂರ ನಿರೂಪಿಸಿದರು.