ಪಡಿತರ ವಿತರಣೆಯಲ್ಲಿ ನಿರ್ಲಕ್ಷ್ಯ: ಏಳು ನ್ಯಾಯ ಬೆಲೆ ಅಂಗಡಿಗಳ ಅಮಾನತು

ಬೆಂಗಳೂರು, ಏ.11,ಕೊರೋನಾ ಸೋಂಕಿನ ಸಂದರ್ಭದಲ್ಲಿ ಯಾರು ಕೂಡ ಹಸಿದಿರಬಾರದು ಎಂಬ ಉದ್ದೇಶದಿಂದ ಸರ್ಕಾರ ಎರಡು ತಿಂಗಳ ಪಡಿತರವನ್ನು ನೀಡಿ ಅದನ್ನು ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದ್ದರೂ ಪಡಿತರ ವಿತರಣೆಯನ್ನು ನಿರ್ಲಕ್ಷ್ಯ ತೋರಿದ, ಹಣಕ್ಕಾಗಿ ಬೇಡಿಕೆ ಇಟ್ಟ ಕಾರಣದಿಂದ ರಾಜ್ಯದ ವಿವಿಧ ಜಿಲ್ಲೆಗಳ 7ಕ್ಕೂ ಅಧಿಕ ಪಡಿತರ ಅಂಗಡಿಗಳನ್ನು ಅಮಾನತುಗೊಳಿಸಲಾಗಿದೆ.ನಿನ್ನೆಯಷ್ಟೇ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಗೋಪಾಲಯ್ಯ ಅವರು ಬೆಂಗಳೂರಿನ ಹಲವು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಧಿಕಾರಿಗಳು ಪರಿಶೀಲನೆಗೆ ಆಗಮಿಸಿದಾಗ ಸರಿಯಾಗಿ ಉತ್ತರಿಸಿದೆ, ಪಡಿತರ ವಿತರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಅಧಿಕಾರಿಗಳ ಪರಿಶೀಲನೆಗೆ ಅಡ್ಡಿ ಪಡಿಸಿದ ಆರೋಪದಲ್ಲಿ ಬೆಂಗಳೂರು ಉತ್ತರ ತಾಲೂಕು ನ್ಯಾಯ ಬೆಲೆ ಅಂಗಡಿ ಸಂಖ್ಯೆ 15, ಎನ್. ಕಾರ್ತಿಕ್  ಚನ್ನನಾಯಕನಹಳ್ಳಿ ಅವರನ್ನು ಅಮಾನತುಪಡಿಸಲಾಗಿದೆ. ಈ ನ್ಯಾಯ ಬೆಲೆ ಅಂಗಡಿಯ ಪಡಿತರ ಚೀಟಿದಾರರಿಗೆ ಚಿಕ್ಕಬಿದರಕಲ್ಲು ಜ್ಞಾನಜ್ಯೋತಿ ಮಹಿಳಾ ಸಂಘದ 243ನೇ ನ್ಯಾಯಬೆಲೆ ಅಂಗಡಿಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ. ಅಳತೆಯಲ್ಲಿ ಮೋಸ ಮಾಡಿದ ಹಾಗೂ ಹಣ ಪಡೆದ ಆರೋಪದಲ್ಲಿ ಲಿಂಗಸುಗೂರು ತಾಲೂಕಿನ ಆಶಿಹಾಳ ತಾಂಡಾ ನ್ಯಾಯ ಬೆಲೆ ಅಂಗಡಿಯ ಪರವಾನಿಗೆ ರದ್ದುಪಡಿಸಲಾಗಿದೆ. ಅಲ್ಲಿನ ಪಡಿತರದಾರರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಪಡಿತರ ವಿತರಿಸಿದ ಹಾಗೂ ಹಣ ಪಡೆದ ಆರೋಪದಲ್ಲಿ ಸಿರಿವಾರ ತಲೂಕಿನ ಎನ್‌.ಹೊಸೂರು ಗ್ರಾಮದ ಹನುಮಯ್ಯ ಅವರ ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ.
ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸಿದ, ಹಣ ಪಡೆದ ಆರೋಪದಲ್ಲಿ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದ ನ್ಯಾಯಬೆಲೆ ಅಂಗಡಿಯ ಪಡಿತರ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ. ಅಕ್ರಮವಾಗಿ ಪಡಿತರದಾರರಿಂದ 20 ರೂ.ಪಡೆಯುತ್ತಿದ್ದ ಹಾಗೂ ವಹಿವಾಟಿನಲ್ಲಿ ನ್ಯೂನ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ ಗೌರಿಬಿದನೂರು ತಾಲೂಕಿನ ಕಸಬಾ ಹೋಬಳಿ ಇಡಗೂರು ನ್ಯಾಯಬೆಲೆಯ ಅಂಗಡಿಯನ್ನು ಅಮಾನತುಗೊಳಿಸಲಾಗಿದೆ.ಅದೇ ರೀತಿ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ಅಜ್ಜವಾರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಜಿಲ್ಲಾ ನೋಡೆಲ್‌ ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಕಂಡುಬಂದ ನ್ಯೂನ್ಯತೆ ಹಿನ್ನೆಲೆಯಲ್ಲಿ ಅಂಗಡಿಯನ್ನು ಅಮಾನತುಪಡಿಸಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಕೇಶವಾರ ಗ್ರಾಮದ ನ್ಯಾಯಬೆಲೆ ಅಂಗಡಿಯನ್ನು ಕೂಡ ಅಮಾನತುಗೊಳಿಸಲಾಗಿದೆ.