ವೈದ್ಯಕೀಯ ಚಿಕಿತ್ಸೆಗಾಗಿ ನವಾಜ್ ಶರೀಫ್ ಲಂಡನ್ಗೆ ಪ್ರಯಾಣ

 ಇಸ್ಲಾಮಾಬಾದ್, ನ.19 :      ವೈದ್ಯಕೀಯ ಚಿಕಿತ್ಸೆಗಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಮಂಗಳವಾರ ಏರ್ ಆಂಬುಲೆನ್ಸ್ ಮೂಲಕ ಲಂಡನ್ಗೆ ಕರೆದೊಯ್ಯಲಾಗಿದೆ. ಅವರ ಸಹೋದರ ಶೆಹಬಾಝ್ ಶರೀಫ್, ವೈದ್ಯ ಅದ್ನಾನ್ ಖಾನ್ ಸೇರಿದಂತೆ ಏಳು ಮಂದಿ ಅವರೊಂದಿಗೆ ತೆರಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಇಂದು ಬೆಳಗ್ಗೆ ದೋಹಾದಿಂದ ಏರ್ ಆಂಬುಲೆನ್ಸ್ ಲಾಹೋರ್ ವಿಮಾನ ನಿಲ್ದಾಣದ ಹಜ್ ಟರ್ಮಿನಲ್ಗೆ ಬಂದಿಳಿಯಿತು. ವಿಮಾನದಲ್ಲಿ ತೀವ್ರ ನಿಗಾ ಘಟಕ ಮತ್ತು ಆಪರೇಷನ್ ಥಿಯೇಟರ್  ಸ್ಥಾಪಿಸಲಾಗಿದ್ದು, ತಜ್ಞ ವೈದ್ಯರ ತಂಡವೂ ಇದೆ. ವಿಮಾನ ತೆರಳುವ ಮೊದಲು ವೈದ್ಯರು ಶರೀಫ್ ಅವರ ರಕ್ತ ಪರೀಕ್ಷೆ ನಡೆಸಿದರು. ಶರೀಫ್ ಅವರಿಗೆ ವಿದೇಶಕ್ಕೆ ತೆರಳಲು ಆಂತರಿಕ ಸಚಿವಾಲಯವು ಅಧಿಸೂಚನೆ ಹೊರಡಿಸಿದ ಒಂದು ದಿನದ ನಂತರ ಮಾಜಿ ಪ್ರಧಾನ ಮಂತ್ರಿಯವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್ಗೆ ಕರೆದೊಯ್ಯಲಾಗಿದೆ.