ನವರಾತ್ರಿ ಕನ್ನಡಿಗರ ಪಾಲಿಗೆ ನಾಡಹಬ್ಬ

ನವರಾತ್ರಿ ಕನ್ನಡಿಗರ ಪಾಲಿಗೆ ನಾಡಹಬ್ಬ   Navratri is a national festival for Kannadigas.

ತಾಂಬಾ   19 :  ಆಶ್ವಿಜ, ಶುಕ್ಲ, ಪಾಡ್ಯ (22-09-2025 ರಿಂದ ಆಶ್ವಿಜ, ಶುಕ್ಲ, ದಶಮಿ 02-10-2025 ರ ವರೆಗೆ) ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಚಳಿಗಾಲ ಮತ್ತು ಬೇಸಿಗೆ ಕಾಲದ ಆರಂಭಗಳು  ಹವಾಮಾನಕ್ಕೆ ಸಂಬಂಧಿಸಿದ ಎರಡು ಮುಖ್ಯವಾದ ವಿದ್ಯಮಾನಗಳು. ದೇವದೇವತೆಗಳನ್ನು ಪರಿ ಶುದ್ದತೆಯಿಂದ ಪೂಜಿಸಲು ಈ ಎರಡೂ ಕಾಲಗೂ ಸೂಕ್ತವಾಗಿವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. 

ಬೇಸಿಗೆಯ ಆರಂಭದಲ್ಲಿ ಪೂಜಿಸುವುದು ರಾಮನವರಾತ್ರಿ (ಚೈತ್ರ, ಶುಕ್ಲ ಪಾಡ್ಯದಿಂದ ಪ್ರಾರಂಬವಾಗುತ್ತದೆ.) ಮತ್ತು ಇನ್ನೊಂದು ದುರ್ಗಾ ನವರಾತ್ರಿ ಅಥವಾ ಶರನ್ನವರಾತ್ರಿ, ಇದು ಅಶ್ವ ಯುಜ ಶುಕ್ಲ ಪಾಡ್ಯದಿಂದ ಪ್ರಾರಂಭವಾಗುತ್ತದೆ. ಇದು ಮೊದಲನೆಯದಕ್ಕಿಂತ ಹೆಚ್ಚು ಪ್ರಸಿದ್ದ ಹಾಗೂ ವಾಡಿಕೆಯಲ್ಲಿರುವುದು.  

ಶಕ್ತಿದೇವತೆಯ ಆರಾಧನೆ: ನವರಾತ್ರಿಯ ಸಮಯದಲ್ಲಿ ಮಾತೃ ಸ್ವರೂಪಿ ದೇವಿಯನ್ನು ವಿವಿಧ ಶೈಲಿ ಮತ್ತು ರೂಪ(ಸಂಪ್ರದಾಯ)ಗಳಲ್ಲಿ ಪೂಜಿಸುತ್ತಾರೆ. ಶಕ್ತಿದೇವತೆಯ ಆರಾಧನೆ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ವೇದಗಳಲ್ಲಿರುವ ದೇವೀಸೂಕ್ತ, ದುರ್ಗಾ ಸೂಕ್ತ ಮೊದಲಾದವು ಶಕ್ತಿ ದೇವತೆಯ ಮಹತ್ವವನ್ನು ಸಾರುತ್ತದೆ.ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಇತರ ದೇಶಗಳಲ್ಲೂ ಶಕ್ತಿ ದೇವತೆಯನ್ನು ಒಂದಲ್ಲ ಒಂದು ರೂಪದಲ್ಲಿ ಆರಾಧಿಸುತ್ತ ಬಂದಿದ್ದಾರೆ. ಅನಾದಿ ಕಾಲದಿಂದ ಮೂಲ ಪ್ರಕೃತಿಯನ್ನು ಮಾತೆಯಂತೆ ಮಾನವ ಆರಾಧಿಸುತ್ತಿದ್ದ ಪ್ರಕೃತಿಯೆಂದರೆ, ಕಲ್ಲು,ಮರ,ನೀರು, ಹೂ,ಹಣ್ಣು,ಪ್ರಾಣಿ ಮುಂತದವು. ನಾವು ಭಾರತೀಯರು ಪ್ರಕೃತಿಯನ್ನು ಮಾತೃ ಸ್ವರೂಪಿಯನ್ನಾಗಿ ಆರಾಧಿಸುತ್ತೇವೆ. 

ಪೌರಾಣಿಕ ಹಿನ್ನೆಲೆ : ಪರ್ವತರಾಜ ಹಿಮವಂತ ತನ್ನ ಮಗಳು ಪಾರ್ವತಿಯನ್ನು ಶಿವನಿಗೆ ಕೊಟ್ಟು ಮದುವೆ ಮಾಡಿದ. ಗೃಹಸ್ಥನಾದ ಶಿವನು ಪತ್ನಿ ಪಾರ್ವತಿಗೆ ವರ್ಷದಲ್ಲಿ ಒಂಬತ್ತು ದಿನ ಮಾತ್ರ ತವರುಮನೆಗೆ ಹೋಗಿ ಬರಲು ಅನುಮತಿ ನೀಡಿದ. ಹೀಗೆ ಜಗನ್ಮಾತೆ ದುರ್ಗೆ ತವರುಮನೆಗೆ ಹೋದ ಹಬ್ಬ ನವರಾತ್ರಿ ಹಾಗೂ ಪಾರ್ವತಿಯು ದುರ್ಗೆಯಾಗಿ ಲೋಕ ಕಂಟಕನಾದ ಮಹಿಷಾಸುರನನ್ನು ಸಂಹರಿಸಿ ವಿಜಯದಶಮಿಯೆಂದು ಕೈಲಾಸಕ್ಕೆ ಹಿಂತಿರುಗುತ್ತಾಳೆ ಎಂದು ಪುರಾಣಗಳಲ್ಲಿ ಹೇಳಿದೆ. ಈಗಲೂ ಮದುವೆಯಾದ ಹೆಣ್ಣಮಕ್ಕಳನ್ನು ನವರಾತ್ರಿಯ ದಿನಗಳಲ್ಲಿ ತವರಿಗೆ ಆಹ್ವಾನಿಸಿ, ಅವರನ್ನು ಸುಮಂಗಲಿಯರೆಂದು ಪೂಜಿಸುವುದು ವಾಡಿಕೆಯಾಗಿದೆ. ದುರ್ಗಾಪೂಜೆ,ಲಲಿತಾ ಪಂಚಮಿ, ಸರಸ್ವತಿ ಪೂಜೆ, ದುರ್ಗಾಷ್ಟಮಿ (ಆಯುಧ ಪೂಜೆ), ಕುಮಾರಿ ಪೂಜೆಯನ್ನು ನವತಾತ್ರಿಯಲ್ಲಿ ಆಚರಿಸಲಾಗುತ್ತದೆ. 

ವಿಜಯದಶಮಿ : ಆಶ್ವೀಜ ಶುದ್ದ ದಶಮಿ ವಿಜಯದಶಮಿಯೆಂದು ಪ್ರಸಿದ್ದಿಯಾಗಿದೆ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ದುಷ್ಟ ರಾಕ್ಷಸ ರಾವಣನನ್ನು ವಧಿಸಿ. ಇದು ಪಾಂಡವರು ಅಜ್ಞಾತವಾಸ ಮುಗಿಸಿ ವಿಜಯದಶಮಿಯಂದು ಶಸ್ತ್ರಾಸ್ತ್ರಗಳನ್ನು ಹೊರ ತೆಗೆದು ಕೌರವರ ಮೇಲೆ ಯುದ್ದ ಮಾಡಿ ಜಯಗಳಿಸಿದರೆಂದು ಮಹಾ ಭಾರತದಲ್ಲಿ ಹೇಳಿದೆ. ಜಗನ್ಮಾತೆಯ ಮಹಿಷಾಸುರನನ್ನು ಸಂಹರಿಸಿದ ದಿನವೂ ಇದೇ ಆಗಿದೆ. ಇವೆಲ್ಲದರ ಒಟ್ಟು ಸಾರಾಂಶವೇನೆಂಧರೆ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯದರ ಜಯದ ಸಂಕೇತವೇ ವಿಜಯದಶಮಿ. ಈ ದಿನದಂದು ಯಾವುದೆ ಹೊಸ ಕೆಲಸವನ್ನು ಪ್ರಾರಂಭಮಾಡಿದರೆ ಎಲ್ಲ ರೀತಿಯಿಂದಲೂ ಜಯ ಮತ್ತು ಲಾಭ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಜನರು ಒಬ್ಬರಿಗೊಬ್ಬರು ಶಮೀ ವೃಕ್ಷ ಎಲೆಯನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದು ಸ್ನೇಹ ಭಾಂದ್ಯವದ ಸಂಕೇತವೇಂಬ ನಂಬಿಕೆ ಇದೆ. ದಕ್ಷಿಣ ಭಾರತದಲ್ಲಿ ನವರಾತ್ರಿ ವೇಳೆ ಮನೆಯಲ್ಲಿ ಬೊಂಬೆಗಳನ್ನು ಕೂಡಿಸುವ ಸಂಪ್ರದಾಯವಿದೆ. ಸಣ್ಣ ಕಲಶ ವನ್ನಿಟ್ಟು ಪೂಜಿಸುತ್ತಾರೆ. 

ನಾಡಹಬ್ಬ : ಕನ್ನಡಿಗರ ಪಾಲಿಗೆ ನವರಾತ್ರಿ ನಾಡಹಬ್ಬವಾಗಿದೆ. ಮೈಸೂರಿನಲ್ಲಿ ನಡೆಯುವ ದಸರಾ ಜಗತ್ಪ್ರಸಿದ್ದವಾಗಿದೆ. ಈ ದಿನಗಳಲ್ಲಿ ಕರ್ನಾಟಕದಾದ್ಯಂತ ನಾಡು-ನುಡಿಗೆ ಸಂಬಂಧಿಸಿದ ಕಾರ್ಯಕ್ರಮ ನಡೆಯುತ್ತಲೇ  ಇರುತ್ತದೆ. ನವರಾತ್ರಿಯ ಸಂದೇಶವೇನೆಂದರೇ ದುಷ್ಟಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ, ನಾಡಿನ ನಾಡಿ ಮಿಡಿಯುವ ಕಲೆ-ಸಂಸ್ಕೃತಿಯ ಪ್ರಚಾರಸಾಧನವಾಗಿ, ಅಧ್ಯಾತ್ಮಿಕ ವೃದ್ದಿಯ ಕುರುಹಾಗಿ ನಿಲ್ಲಬಲ್ಲ ಹಬ್ಬವಾಗಿದೆ ಎನ್ನಬಹುದು.