ಬೆಳಗಾವಿ 07: ಕೆ.ಎಲ್.ಇ. ಸೊಸೈಟಿಯ ಬಿ.ವಿ. ಬೆಲ್ಲದ ಕಾನೂನು ಕಾಲೇಜು, ಬೆಳಗಾವಿ, ಉತ್ತಮ ಕಾನೂನು ಶಿಕ್ಷಣವನ್ನು ನೀಡುತ್ತಿರುವ 50 ವರ್ಷಗಳ ಗಣನೀಯ ಸೇವೆಯನ್ನು ಪೂರೈಸಿದ ಅಂಗವಾಗಿ, ಮೇ 10ರಂದು ಭಾರತದ ಸಂವಿಧಾನ ಅ75: ಸಂವಿಧಾನಾತ್ಮಕತೆಯನ್ನು ಪುನರ್ ಆವಿಷ್ಕರಿಸುವುದು ಎಂಬ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಬೆಳಗಾವಿಯ ಜೆ.ಎನ್.ಎಂ.ಸಿ.ಯ ಡಾ.ಕೊಡ್ಕಣಿ ಸಭಾಂಗಣದಲ್ಲಿ ಮೇ 10ರಂದು ಬೆಳಿಗ್ಗೆ 10ಗಂಟೆಗೆ ಆಯೋಜಿಸಲಾಗಿದ್ದು, ದೇಶದಾದ್ಯಂತ 20ಕ್ಕೂ ಹೆಚ್ಚು ಕಾಲೇಜುಗಳು ಹಾಗೂ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
75 ವರ್ಷಗಳ ಸಂವಿಧಾನಾತ್ಮಕ ಆಡಳಿತದ ನಂತರ ಭಾರತೀಯ ಪ್ರಜಾಪ್ರಭುತ್ವವು ತಿರುವು ಮೋಡಿನಲ್ಲಿ ನಿಂತಿದೆ. ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಯಶಸ್ಸು ಅದರ ಮೂಲ ತತ್ವಗಳಾದ ಸಂವಿಧಾನಾತ್ಮಕತೆ, ನ್ಯಾಯ, ಕಾನೂನು ಆಧಿಪತ್ಯದ ಅನುಷ್ಠಾನದಲ್ಲಿ ನಿಂತಿದೆ. ಈ ಸಮ್ಮೇಳನದ ಮುಖಾಂತರ ಸಂವಿಧಾನಾತ್ಮಕತೆಯ ಸವಾಲುಗಳು, ಸಂವಿಧಾನಗಳ ನೈತಿಕತೆಯು, ಪ್ರಜಾಪ್ರಭುತ್ವ ಹಾಗೂ ಸಂವಿಧಾನಾತ್ಮಕ ಪ್ರಜಾಪ್ರಭುತ್ವ ಇತರೆ ವಿಷಯಗಳ ಕುರಿತು ಸೂಕ್ಷ್ಮ ಚರ್ಚೆಗಳಿಗೆ ವೇದಿಕೆ ಮಾಡಿಕೊಡಲಾಗಿದೆ.
ಸಮ್ಮೇಳನವನ್ನು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಉದ್ಘಾಟಿಸಲಿದ್ದಾರೆ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಬಿ. ಕೋರೆ ಅವರು ಅಧ್ಯಕ್ಷೀಯ ನುಡಿಯನ್ನು ಹೇಳಲಿದ್ದಾರೆ.
ಸಮ್ಮೇಳನದ ಸಂವಾದಗಳಲ್ಲಿ ಪ್ರೊ. (ಡಾ.) ಕೆ. ವಿಕ್ರಮನ್ ನಾಯರ್, ಅಧ್ಯಕ್ಷರು, ಡಾ. ಅಂಬೇಡ್ಕರ್ ಚೇರ್, ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ, ಕೊಟ್ಟಾಯಂ, ಕೇರಳ, ಪ್ರೊ. (ಡಾ.) ಸಂದೀಪ್ ಶಾಸ್ತ್ರಿ ಉಪಾಧ್ಯಕ್ಷರು, ನಿಟ್ಟೆ ಎಜುಕೇಶನ್ ಟ್ರಸ್ಟ್, ಬೆಂಗಳೂರು, ಪ್ರೊ. (ಡಾ.) ಕೆ.ಆರ್. ಐತಾಳ್, ಅತಿಥಿ ಪ್ರಾಧ್ಯಾಪಕರು, ಕೆ.ಎಲ್.ಇ. ಕಾನೂನು ಕಾಲೇಜು, ಬೆಂಗಳೂರು, ಪ್ರೊ. (ಡಾ.) ಸಿ. ರಾಜಶೇಖರ್, ಹಳೆಯ ಪ್ರಾಧ್ಯಾಪಕರು, ಪಿಜಿ ಕಾನೂನು ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ, ಈ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಿಚಾರ ಮಂಡಿಸಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಉತ್ತಮ ಪ್ರಬಂಧ ಮಂಡಿಸುವವರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯೆ ಡಾ.ಜ್ಯೋತಿ ಹಿರೇಮಠ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಡಾ.ಉಮಾ ಹಿರೇಮಠ, ಸುಪ್ರಿಯಾ ಸ್ವಾಮಿ, ವಿದ್ಯಾರ್ಥಿ ಪ್ರತಿನಿಧಿ ಆಕಾಶ ಅಮರಶೆಟ್ಟಿ ಉಪಸ್ಥಿತರಿದ್ದರು.