ಸೆ.19ರಂದು ರಾಷ್ಟ್ರೀಯ ಲೋಕ ಅದಾಲತ್‌: ಪ್ರಕರಣಗಳ ರಾಜೀಸಂಧಾನಕ್ಕೆ ಅವಕಾಶ

ಸೆ.19ರಂದು ರಾಷ್ಟ್ರೀಯ ಲೋಕ ಅದಾಲತ್‌: ಪ್ರಕರಣಗಳ ರಾಜೀಸಂಧಾನಕ್ಕೆ ಅವಕಾಶ  National Lok Adalat on September 19: Opportunity for settlement of cases

ಲೋಕದರ್ಶನ ವರದಿ  

ಮುಂಡಗೋಡ  27: ರಾಜ್ಯದಾದ್ಯಂತ ಸೆಪ್ಟೆಂಬರ್ 19ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಮುಂಡಗೋಡದ ಸಿವಿಲ್ ಜಡ್ಜ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ವಿವಿಧ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಲೋಕ ಅದಾಲತ್‌ನಲ್ಲಿ ಮುಖ್ಯವಾಗಿ ಚೆಕ್ ಬೌನ್ಸ್‌ ಪ್ರಕರಣಗಳು, ವೈವಾಹಿಕ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಭೂ ವಿವಾದಗಳು ಸೇರಿದಂತೆ ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಬಹುದಾದ ವಿವಿಧ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ.

ಕಕ್ಷಿದಾರರು ತಮ್ಮ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಮೂಲಕ ಅಮೂಲ್ಯವಾದ ಸಮಯ ಹಾಗೂ ಹಣವನ್ನು ಉಳಿಸಿಕೊಳ್ಳಬಹುದಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೊಳಿಸುವಂತೆ ಸಂಬಂಧಪಟ್ಟ ಕಕ್ಷಿದಾರರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಪರ ನ್ಯಾಯವಾದಿಗಳನ್ನು ಸಂಪರ್ಕಿಸಬಹುದಾಗಿದ್ದು, ಮುಂಡಗೋಡ ನ್ಯಾಯಾಲಯದ ಸಂಕೀರ್ಣದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಹ ಸಂಪರ್ಕಿಸಬಹುದಾಗಿದೆ. ಈ ಕುರಿತು ಮುಂಡಗೋಡ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶಿವರಾಜು ಹೆಚ್‌.ಎಸ್‌. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.