ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್

ಜುಲೈ 12 ರಂದು ರಾಷ್ಟ್ರೀಯ ಲೋಕ್ ಅದಾಲತ್  National Lok Adalat on July 12

ಹಾನಗಲ್ಲ 30: ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಜುಲೈ 12 ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚಿನವರು ಪಡೆದುಕೊಳ್ಳವಂತಾಗಲಿ ಎಂದು ಹಾನಗಲ್ಲ ನ್ಯಾಯಾಲಯದ ಹಿರಿಯ ಸಿವಿಲ್ ಜಡ್ಜ್‌ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮೀತಿಯ ಅಧ್ಯಕ್ಷರಾದ ರಾಜೇಶ್ವರಿ ಜೆ ಪುರಾಣಿಕ ಅವರು ಹೇಳಿದರು. 

 ನ್ಯಾಯಾಲಯದಲ್ಲಿ ಜರುಗಿದ ಲೋಕ್ ಅದಾಲತ್‌ನ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಲೋಕ್ ಅದಾಲತ್ ಒಂದು ಸಾಮಾನ್ಯ ಕಾರ್ಯಕ್ರಮವಾಗಬಾರದು.ಇದರಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಇತ್ಯರ್ಥವಾಗುವಂತೆ ಸಂಬಂಧಿತರು ಮತ್ತು ಇಲಾಖೆಗಳು,ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು ಹೆಚ್ಚಿನ ರಿಯಾಯತಿ ನೀಡುವ ಮೂಲಕ ಪ್ರಕರಣಗಳು ಇತ್ಯರ್ಥವಾಗಲು ಸಹಕರಿಸಬೇಕು.ವಕೀಲರುಗಳ ಸಹಯೋಗದೊಂದಿಗೆ ಜನರಲ್ಲಿ ಪ್ರಕರಣಗಳ ಕುರಿತಾದ ಭಯವನ್ನು ಹೋಗಲಾಡಿಸಿ,ನೆಮ್ಮದಿ ಮೂಡಿಸಲು ಲೋಕ್ ಅದಾಲತ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು. 

ಕಿರಿಯ ಸಿವಿಲ್ ಜಡ್ಜ್‌ ಮತ್ತು ಜೆ.ಎಂ.ಎಫ್‌.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಮತಿ ಐಶ್ವರ್ಯ ಚಿದಾನಂದ ಪಟ್ಟಣಶೆಟ್ಟಿ ಮಾತನಾಡಿ ಆಸ್ತಿಗೆ ಸಂಬಂಧಿಸಿದ,ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ, ಮೋಟಾರ್ ವಾಹನ ಕಾಯ್ದೆಗೆ ಸಂಬಂಧಿಸಿದ,ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ವಕೀಲುಗಳು ಕಕ್ಷಿದಾರರ ಮನವೊಲಿಸಬೇಕು.ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಲಿ ಕಕ್ಷಿದಾರನ ಸಮಯ ಮತ್ತು ಹಣ ಉಳಿತಾಯವಾದಂತಾಗುತ್ತದೆ. ಕಾರಣ ಈ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಹೆಚ್ಚಿನ ಜನರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕೆಂದು ತಿಳಿಸಿದರು ಹಾಗೂ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಸಣ್ಣ ಪುಟ್ಟ ಪ್ರಕರಣಹಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸಿದರೆ ನ್ಯಾಯಾಲಯಗಳಿಗೆ ಬರುವುದನ್ನು ತಪ್ಪಿಸಬಹುದು ಎಂದು ರಾಷ್ಟ್ರೀಯ ಲೋಕ ಅದಾಲತ್ ಬಗ್ಗೆ ಮಾಹಿತಿ ನೀಡಿದರು. 

ಈ ಸಭೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್‌.ಕಾಳಂಗಿ ಹಾಗೂ ಪದಾಧಿಕಾರಿಗಳು, ಸಹಾಯಕ ಸರಕಾರಿ ಅಭಿಯೋಜಕರು, ವಕೀಲರುಗಳು, ಹಾನಗಲ್ಲದ ವಿವಿಧ ಇಲಾಖೆಗಳ ಅಧಿಕಾರಿಗಳು,ಬ್ಯಾಂಕ್ ಮ್ಯಾನೇಜರ್‌ಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.