ಮೂಢನಂಬಿಕೆ, ಜಾತಿ ತಾರತಮ್ಯ ಪ್ರಶ್ನಿಸಿದ ನಾರಾಯಣ ಗುರು : ಉಮೇಶ್ ನಾಯ್ಕ

ಮೂಢನಂಬಿಕೆ, ಜಾತಿ ತಾರತಮ್ಯ ಪ್ರಶ್ನಿಸಿದ ನಾರಾಯಣ ಗುರು : ಉಮೇಶ್ ನಾಯ್ಕ  Narayana Guru Questioned Superstition and Caste Discrimination: Umesh Naik


ಕಾರವಾರ 28 : ಮೂಢನಂಬಿಕೆ, ಜಾತಿ ತಾರತಮ್ಯ ಹಾಗೂ ಶೋಚಕ ವ್ಯವಸ್ಥೆಯ ಆಚರಣೆಗಳನ್ನು ನಾರಾಯಣ ಗುರು ಪ್ರಶ್ನಿಸಿದರು ಎಂದು ಉಪನ್ಯಾಸಕ ಉಮೇಶ ನಾಯ್ಕ ಹೇಳಿದರು. ಅವರು ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರು ಹಾಗೂ ಶ್ರೀ ನುಲಿಯ ಚಂದಯ್ಯ ಜಯಂತಿಯಲ್ಲಿ ಅತಿಥಿಯಾಗಿ ಮಾತನಾಡಿದರು. ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತು ಮೂಢನಂಬಿಕೆ, ಜಾತಿ ತಾರತಮ್ಯ ಹಾಗೂ ಅನಾವಶ್ಯಕ ಆಚರಣೆಗಳನ್ನು ಪ್ರಶ್ನಿಸಿದ ನಾರಾಯಣ ಗುರು ಅವರು ಶಿಕ್ಷಣ ಮತ್ತು ವೈಚಾರಿಕತೆಯ ಮೂಲಕ ಸಮಾಜವನ್ನು ಮುನ್ನಡೆಸಲು ಕರೆ ನೀಡಿದರು. ನಾರಾಯಣ ಗುರು ಅವರು ಅಸ್ಪೃಶತೆ ಹೋಗಲಾಡಿಸಲು ಶೂದ್ರರರಿಗಾಗಿ ದೇವಸ್ಥಾನಗಳನ್ನು ಕಟ್ಟಿಸಿ ಪ್ರವೇಶ ಕಲ್ಪಿಸಿದರು.

ದೇವಸ್ಥಾನಗಳನ್ನು ಕೇವಲ ಧಾರ್ಮಿಕ ಆಚರಣೆಗಳ ಕೇಂದ್ರಗಳಾಗಿ ನೋಡದೆ ಶೋಷಿತ ಸಮುದಾಯಗಳಲ್ಲಿ ಆತ್ಮವಿಶ್ವಾಸ ಮೂಡಿಸಲು ಹಾಗೂ ಜಾತಿ ಆಧಾರಿತ ಮೇಲು-ಕೀಳು ಭಾವನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ದೇವಸ್ಥಾನಗಳಲ್ಲಿ ಕನ್ನಡಿಯನ್ನು ಪ್ರತಿಷ್ಠಾಪಿಸುವ ಮೂಲಕ ಮನುಷ್ಯನು ತನ್ನೊಳಗಿನ ಜ್ಞಾನ ಮತ್ತು ಶಕ್ತಿಯನ್ನು ಅರಿತುಕೊಳ್ಳಬೇಕು ಎಂಬ ಸಂದೇಶ ನೀಡಿದರು. ಸಮಾಜದ ಪರಿವರ್ತನೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದರು.  ತಮ್ಮ ವಚನಗಳಲ್ಲಿ ಸಮಾಜದಲ್ಲಿನ, ಮೇಲು-ಕೀಳು ಭಾವನೆಗಳ ವಿರೋಧ, ಮತ್ತು ಕಾಯಕದ ಮಹತ್ವವನ್ನು ಭೋಧಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಂಜೀವಣ್ಣ ಕುಮಾರ, ನಾಮದಾರಿ ಸಂಘದ ಉಪಾಧ್ಯಕ್ಷ ಸುನೀಲ್ ಸೋನಿ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ವೆಂ ನಾಯ್ಕ ಸ್ವಾಗತಿಸಿದರು.