ಸಾಮಾಜಿಕ ಸುಧಾರಣೆಗೆ ನಾರಾಯಣ ಗುರುಗಳ ಕೊಡುಗೆ ಅಪಾರ: ನಾಗರಾಜ

ಸಾಮಾಜಿಕ ಸುಧಾರಣೆಗೆ ನಾರಾಯಣ ಗುರುಗಳ ಕೊಡುಗೆ ಅಪಾರ: ನಾಗರಾಜ  Narayana Guru's contribution to social reform is immense: Nagaraja

ಲೋಕದರ್ಶನ ವರದಿ  

ಬಳ್ಳಾರಿ, ಆ.28: ಬ್ರಹ್ಮಶ್ರೀ ನಾರಾಯಣ ಗುರುಗಳು ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದು, ಸಮಾಜದ ಸರ್ವತೋಮುಖ ಪ್ರಗತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಡಾ. ಬಾಬು ಜಗಜೀವನರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ನಿಯಮಿತ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.  

ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

“ಒಂದೇ ಜಾತಿ, ಒಂದೇ ಧರ್ಮ, ಒಂದೇ ಜನಾಂಗ” ಎಂಬ ಸಂದೇಶ ಸಾರಿದ ನಾರಾಯಣ ಗುರುಗಳು ಅಸ್ಪೃಶ್ಯತೆ ನಿರ್ಮೂಲನೆಗಾಗಿ ನಿರಂತರವಾಗಿ ಶ್ರಮಿಸಿದ್ದರು. ಸಮಾಜದಲ್ಲಿ ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.  

ಯುವಪೀಳಿಗೆಗೆ ಆದರ್ಶ  

ಮಹಾನಗರ ಪಾಲಿಕೆ ಮಹಾಪೌರ ಪಿ. ಗಾದೆಪ್ಪ ಮಾತನಾಡಿ, ಇಂದಿನ ಯುವಪೀಳಿಗೆಗೆ ಮಹನೀಯರ ಆದರ್ಶ ಹಾಗೂ ಕೊಡುಗೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪೂರಕ ಸಾಹಿತ್ಯ ಮತ್ತು ಪುಸ್ತಕಗಳ ರಚನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.  

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ ನಾರಾಯಣ ಗುರುಗಳು ‘ಕೇರಳದ ಬಸವಣ್ಣ’ ಎಂದೇ ಪ್ರಸಿದ್ಧರಾಗಿದ್ದಾರೆ. 1888ರಲ್ಲಿ ಅರುವಿಪುರಂನಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಎಲ್ಲ ಸಮುದಾಯದವರಿಗೂ ಮುಕ್ತ ಪ್ರವೇಶದ ಮೂಲಕ ಐತಿಹಾಸಿಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದರು ಎಂದು ತಿಳಿಸಿದರು.  

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಿಷ್ಠಿ ರುದ್ರ​‍್ಪ ವಿಶೇಷ ಉಪನ್ಯಾಸ ನೀಡಿ, 1856ರ ಆಗಸ್ಟ್‌ 28ರಂದು ಕೇರಳದ ಚೆಂಪಜಂತಿಯಲ್ಲಿ ಜನಿಸಿದ ನಾರಾಯಣ ಗುರುಗಳು ಸಂಸ್ಕೃತ ಹಾಗೂ ಧರ್ಮಗ್ರಂಥಗಳ ಅಧ್ಯಯನ ನಡೆಸಿ, 1903ರಲ್ಲಿ ‘ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ’ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಮತ್ತು ಸಾಮಾಜಿಕ ಸುಧಾರಣೆಗೆ ಬಲ ತುಂಬಿದರು ಎಂದು ಹೇಳಿದರು.  

ಭವ್ಯ ಮೆರವಣಿಗೆ  

ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕುಂಭ ಹೊತ್ತ ಮಹಿಳೆಯರು ಹಾಗೂ ಮಕ್ಕಳು ಗಮನ ಸೆಳೆದರು. ಈ ಮೆರವಣಿಗೆಯು ಈಡಿಗ ಹಾಸ್ಟೆಲ್ ಆವರಣದಿಂದ ಆರಂಭವಾಗಿ ಗಡಗಿ ಚೆನ್ನಪ್ಪ ವೃತ್ತ, ಹಳೆಯ ಜಿಲ್ಲಾಧಿಕಾರಿ ಕಚೇರಿ ರಸ್ತೆ ಹಾಗೂ ಎಚ್‌.ಆರ್‌. ಗವಿಯಪ್ಪ ವೃತ್ತದ ಮಾರ್ಗವಾಗಿ ಸಾಗಿ ಡಾ. ಜೋಳದರಾಶಿ ರಂಗಮಂದಿರ ತಲುಪಿತು.  

ಕಾರ್ಯಕ್ರಮದಲ್ಲಿ ರಕುಮಾ ಎಲ್‌. ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಲಾಯಿತು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಈಡಿಗ ಸಮಾಜದ ಕಾರ್ಯದರ್ಶಿ ಪಿ. ಮಂಜುನಾಥ್, ನಿವೃತ್ತ ಅಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.