ಅಪ್ಪನ ಶ್ರಮಸಂಸ್ಕೃತಿ ತ್ಯಾಗವನ್ನು ನೆನಪಿಸುವ ನಾನಿಯ ಗಜಲ್

ಹಸಿದ ಒಡಲು ಅಂಗಲಾಚುವ ಕಾಲ ದೂರ ಸರಿದಿದೆ 

ಅವಕಾಶಕ್ಕಾಗಿ ಪರಿತಪಿಸುವ ಕಾಲ ದೂರ ಸರಿದಿದೆ 

ದೈನೇಸಿ ಸ್ಥಿತಿ ಕಳೆದು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುವ ಕಾಲ ಬಂದಿದೆ ಎಂಬುದರ ಕುರಿತು ಪ್ರತಿಬಿಂಬಿಸುವ ಈ ಸಾಲುಗಳು ‘ನಾನಿ’ ಎಂಬ ಕಾವ್ಯನಾಮದ ಮೂಲಕ ಗಜಲ್ ಬರೆಯುವ ನಾರಾಯಣಸ್ವಾಮಿ ವಿ. ಅವರದ್ದು. ಕೋಲಾರ ಜಿಲ್ಲೆಯ ಮಾಲೂರಿನವರಾದ ನಾರಾಯಣಸ್ವಾಮಿ ಸದ್ಯಕ್ಕೆ ಬೆಂಗಳೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಡುಕಷ್ಟದ ಬದುಕಿನಲ್ಲಿ ಬೆಳೆದು ನಿಂತಿರುವ ಅಪ್ಪಟ ಗ್ರಾಮೀಣ ಪ್ರತಿಭೆ. ನಿರ್ವಹಿಸುತ್ತಿರುವುದು ವಕೀಲಿ ವೃತ್ತಿಯಾದರೂ ಸಾಹಿತ್ಯದ ಪ್ರವೃತ್ತಿ ಇವರನ್ನು ಇನ್ನಿಲ್ಲದಂತೆ ಕಾಡಿದೆ. ಕವಿತೆ, ಹನಿಗವಿತೆ, ಗಜಲ್ ಬರವಣಿಗೆಯಲ್ಲಿ ಕೃಷಿ ಮಾಡುತ್ತಿರುವ ಇವರು ‘ಮೌದೊಳಗಣ ಭಾವ’ ಕವನ ಸಂಕಲನ ಪ್ರಕಟಿಸಿದ್ದಾರೆ. ‘ಅಂತರಂಗದ ಧ್ಯಾನ’ ಇವರ ಪ್ರಕಟಿತ ಚೊಚ್ಚಲ ಗಜಲ್ ಸಂಕಲನ. ಸಾಕಷ್ಟು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಕವಿತೆ ವಾಚನ ಮಾಡಿದ್ದಾರೆ. ಬೆಳಕು ಸಂಸ್ಥೆ ಕೊಡಮಾಡುವ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ, ಮಂದಾರ ಕಲಾವೇದಿಕೆ ಬೀದರನ ಕಾವ್ಯಚೂಡಾಮಣಿ ಪ್ರಶಸ್ತಿ, ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಜ್ಯ ಅನಿಕೇತನ ಕಾವ್ಯ ಪ್ರಶಸ್ತಿ ಇವರಿಗೆ ಒಲಿದು ಬಂದ ಗೌರವ ಸಮ್ಮಾನಗಳಾಗಿವೆ. ಇವರು ಬರೆದ ಗಜಲ್‌ನ ಓದು ಮತ್ತು ಅದರ ಒಳಾರ್ಥವನ್ನು ಗಮನಿಸೋಣ. 

“ಹರೆಯದವರೆಗೂ ಹೊರುವ ಅಪ್ಪ, ದುಡಿದ ಸಂಬಳವೆಲ್ಲ ಕುಟುಂಬಕ್ಕೆ ನೀಡುವ ಅಪ್ಪ, ಕೇಳಿದ್ದನ್ನೆಲ್ಲ ಇಲ್ಲ ಅನ್ನದೆ ಕೊಡಿಸುವ ಅಪ್ಪ, ಅವಶ್ಯಕತೆ ಇದ್ದಾಗ ಮಾತ್ರ ನೆನಪಾಗುವ ಅಪ್ಪ, ತನ್ನ ಬಗ್ಗೆ ತಾನೆಂದೂ ಯೋಚಿಸದ ಅಪ್ಪ ಹೀಗೆ ಎಷ್ಟೆಲ್ಲ ಮಾಡಿದರೂ ಅಪ್ಪ ಯಾಕೋ ತುಂಬಾ ಹಿಂದೆಯೇ ಉಳಿದುಬಿಟ್ಟ” ಇದು ಅಂತರ್‌ಜಾಲದಲ್ಲಿ ಸಿಕ್ಕ ಅಪ್ಪನ ಕುರಿತಾಗಿರುವ, ಅವನ ಶ್ರಮ, ದುಡಿಮೆ, ಕಾಳಜಿ, ಅಕ್ಕರೆ ಎಲ್ಲವನ್ನೂ ಅಭಿಮಾನದಿಂದ ನೆನೆಯುವ ಕವಿತೆ. ಹೌದು, ಅಮ್ಮನ ಕಕ್ಕುಲಾತಿ, ಪ್ರೀತಿಯ ಮುಂದೆ ಅಪ್ಪನ ತ್ಯಾಗ ಮಂಕಾಗುವುದು ನಮಗೆ ಕಂಡು ಬರುವುದೇ ಇಲ್ಲ. ತಾನು ನೋಡದ್ದನ್ನೆಲ್ಲ ನಮಗೆ ತೋರಿಸಿದ, ತಾನು ಕಲಿಯದಿದ್ದರೂ ಹೊಟ್ಟೆಬಟ್ಟೆ ಕಟ್ಟಿ ನಮ್ಮನ್ನು ಓದಿಸಿದ, ಎಲ್ಲ ನೋವುಗಳ ನುಂಗಿಕೊಂಡು ಬಂಡೆಗಲ್ಲಿನಂತೆ ಗಟ್ಟಿಯಾಗಿ ನಮ್ಮಯ ಬದುಕಿನ ದೋಣಿ ತೀರ ತಲುಪಿಸಿದ ಅಪ್ಪನ ಕುರಿತು ‘ನಾನಿ’ ಯವರು ಅಂತಃಕರಣದಿಂದ, ಹೃದಯತುಂಬಿ ಗಜಲ್‌ನಲ್ಲಿ ಹಿಡಿದಿಟ್ಟಿದ್ದಾರೆ.  

ಸಮಯವನ್ನು ವ್ಯರ್ಥವಾಗಿ ಕಳೆಯದೆ, ಸದಾಕಾಲ ದುಡಿತದಲ್ಲಿಯೇ ಬದುಕನ್ನು ಸವೆಸಿದ ಅಪ್ಪ, ಯಾವತ್ತಿಗೂ ಕೂಡ ತನ್ನ ಎದೆಯಾಳದ ನೋವಿನ ಮೂಟೆಯನ್ನು ಕರುಳಕುಡಿಗಳ ಮುಂದೆ ಬಿಚ್ಚಿಡುವುದೇ ಇಲ್ಲ. ಸುಡುವ ಸೂರ್ಯನ ಲೆಕ್ಕಿಸದೆ ಬರಿಮೈಯಲ್ಲೇ ಶ್ರಮಜೀವಿಯಾಗಿ ದುಡಿತಕ್ಕಂಟಿಕೊಂಡ ಅವನ ಕಪ್ಪು ಬೆನ್ನು ಮಾತ್ರ ನಮಗೆ ಕಾಣುವುದು. ಬರಿಗಾಲಲ್ಲಿ ನಡೆಯುತ್ತ ಮುಳ್ಳು ಚುಚ್ಚಿದ ಅಂಗಾಲು ರಕ್ತದಿಂದ ಹೆಪ್ಪುಗಟ್ಟಿದರೂ ಯಾರಿಗೂ ಅದನ್ನು ತೋರಿಸಲಾರನವನು. ನಾವು ಅವನನ್ನು ಭೂದೇವಿಯ ಮಡಿಲಲ್ಲಿ ದುಡಿಮೆಯ ಧ್ಯಾನದಲ್ಲಿ ನಿರತನಾಗಿರುವುದನ್ನು ಕಂಡಿದ್ದೇವೆ. ಆದರೆ ನನ್ನ ಕುಟುಂಬವನ್ನು ಸುಖಿಯಾಗಿರಿಸು ಎಂದು ದೇವರಲ್ಲಿ ಬೊಗಸೆಯೊಡ್ಡಿ ನಿಂತಿದ್ದಿಲ್ಲ. ದುಡಿಮೆಯೇ ದೇವರು ಎಂಬ ನಂಬಿಕೆ ಅಪ್ಪನದಾಗಿತ್ತು. ಬೆವರು ಹರಿಸಿ ದುಡಿದರೆ ದೇವರೆದುರು ಕೈಚಾಚುವ ಸ್ಥಿತಿ ಬರುವುದಿಲ್ಲ ಎಂಬುದು ಆತನಿಗೆ ತಿಳಿದಿತ್ತು. ನಾವೆಲ್ಲಾ ಜೀವನವೀಡೀ ಅವನ ಬೆವರಿನ ಫಲವನ್ನು ಉಣ್ಣುತ್ತಲೇ ಬದುಕಿದ್ದೇವೆ. ಹಾಗೆಯೇ ಅವನನ್ನು ಎದೆಯೊಳಗೆ ದೇವರಾಗಿಸಿ ಪೂಜಿಸುವುದನ್ನು ಮರೆಯಬಾರದು. ಅದುವೇ ನಾವು ಅವನ ತ್ಯಾಗಕ್ಕೆ, ನಿಸ್ವಾರ್ಥತೆಗೆ ಕೊಡುವ ನಿಜವಾದ ಗೌರವ. ಹೀಗೆ ಅಪ್ಪನ ಶ್ರಮ ಸಂಸ್ಕೃತಿ, ಮಕ್ಕಳ ಏಳ್ಗೆಗೆ ಜೀವನ ಮುಡಿಪಾಗಿಡುವ ಅವನ ತ್ಯಾಗದ ಕೊಡುಗೆಯ ಬಗ್ಗೆ ನಾರಾಯಣಸ್ವಾಮಿಯವರ ಗಜಲ್ ಅರ್ಥಪೂರ್ಣವಾಗಿ ಅಭಿವ್ಯಕ್ತಿಸುತ್ತದೆ. ಅಪ್ಪನನ್ನು ನೆನಪಿಸುವಂತೆ ಮಾಡಿದ ‘ನಾನಿ’ಗೆ ನಮನಗಳು. 

- * * * -