ಗ್ರಾಮಗಳ ಅಭಿವೃದ್ಧಿಗೆ ಎನ್‌.ಎಸ್‌.ಎಸ್ ವೇದಿಕೆ: ವಡವಡಗಿ

ಗ್ರಾಮಗಳ ಅಭಿವೃದ್ಧಿಗೆ ಎನ್‌.ಎಸ್‌.ಎಸ್ ವೇದಿಕೆ: ವಡವಡಗಿ NSS platform for village development: Vadavadagi

ಲೋಕದರ್ಶನ ವರದಿ 

ಬಾಗಲಕೋಟೆ 27: ಗ್ರಾಮದ ಅಭಿವೃದ್ಧಿಯೇ ರಾಷ್ಟ್ರದ ಅಭಿವೃದ್ಧಿ. ಯುವಕರ ಸಹಕಾರದಿಂದಲೇ ಉತ್ತಮ ಸಮಾಜ ನಿರ್ಮಾಣ. ಉದ್ಯೋಗದ ಹಿಂದೆ ಬೀಳದೆ  ಉದ್ಯಮಿಗಳಾಗುವ ಕನಸು ಕಾಣಬೇಕು. ದೇಶದ ಅಭಿವೃದ್ಧಿ ಯುವಶಕ್ತಿಯ ಕೈಯಲ್ಲಿದ್ದು ಸೃಜನಶೀಲ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಬೆಳಸಿಕೊಳ್ಳಿ ಎಂದು ವಿದ್ಯಾಗಿರಿಯ ಬಿ.ಆಯ್‌.ಎಮ್‌.ಎಸ್ ನಿರ್ದೇಶಕರಾದ ಪ್ರಕಾಶ ವಡವಡಗಿ ಹೇಳಿದರು. 

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಎನ್‌.ಎಸ್‌.ಎಸ್ ಘಟಕ ಒಂದು ಮತ್ತು ಎರಡರ ವತಿಯಿಂದ ಯಡಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರಕ್ಕೆ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಹಳ್ಳಿ ಜನರಲ್ಲಿ ಸೈಬರ್ ಅಪರಾದ ಮತ್ತು ಆರೋಗ್ಯದ ಅರಿವು ಮೂಡಿಸುವ ಕೆಲಸವನ್ನು ಶಿಬಿರಾರ್ಥಿಗಳು ಮಾಡಬೇಕು. ಹಳ್ಳಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಳ್ಳಿಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸವನ್ನು ಯುವಕರು ಮಾಡಬೇಕು. ಭಾರತ ಅತಿ ಹೆಚ್ಚು ಯುವಕರನ್ನು ಹೊಂದಿರುವ ರಾಷ್ಟ್ರವಾಗಿದ್ದು ಯುವ ಶಕ್ತಿಯ ಸಮರ​‍್ಕ ಬಳಕೆಯಿಂದ ಸಮೃದ್ಧ ದೇಶ ಕಟ್ಟಲು ಸಾಧ್ಯ. ಶಿಬಿರದಿಂದ ಗ್ರಾಮೀಣ ಪ್ರದೇಶದಲ್ಲಿ ಒಬ್ಬರಲ್ಲಿ ಅರಿವು ಮೂಡಿದರೆ ಸಾಕು ಪರಿಶ್ರಮ ಸಾರ್ಥಕವಾಗುತ್ತದೆ. ದೇಶದಲ್ಲಿ ಉದ್ಯೋಗಾವಕಾಶಗಳು ಹೇರಳವಾಗಿದ್ದು ಕೌಶಲ್ಯ ಭರಿತ ಆಕಾಂಕ್ಷಿಗಳು ಸಿಗದಿರುವುದು ನಿರುದ್ಯೋಗಕ್ಕೆ ಕಾರಣವಾಗಿದೆ. ಕಲಾ ವಿಭಾಗದ ವಿದ್ಯಾರ್ಥಿಗಳು ಕೂಡ ಉನ್ನತ ಸಂಬಳ ಪಡೆಯುವ ಹುದ್ದೆಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದಾಗಿದ್ದು ವಿದ್ಯಾರ್ಥಿ ಜೀವನದಲ್ಲಿ ಗುರಿಯನ್ನು ನಿರ್ಧರಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅಂಕಪಟ್ಟಿಗೆ ಮಾನ್ಯತೆ ಇಲ್ಲ ವ್ಯಕ್ತಿತ್ವ ಮತ್ರು ಕೌಶಲ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಅದಕ್ಕೆ ಪೂರಕವಾಗಿ ಸಿದ್ಧರಾಗಿ ಎಂದರು. 

ಪಠ್ಯಕ್ರಮದಿಂದ ಮಾತ್ರ ಸಾಧನೆ ಸಾದ್ಯವಿಲ್ಲ. ಉದ್ಯಮಶೀಲತೆಯಿಂದ ಮಾತ್ರ ಸುಭದ್ರ ಜೀವನ ಕಟ್ಟಿಕೊಳ್ಳಬಹುದು. ಹೊಸ ಆಲೋಚನೆಗಳಿಂದ ಕಷ್ಟಗಳನ್ನು ಎದುರಿಸಿ ಪರಿಶ್ರಮ ಪಟ್ಟರೆ ಯಶಸ್ಸು ಸಿಗುತ್ತದೆ. ಸ್ಥಿರ ಮನಸ್ಥಿತಿ ಇಟ್ಟುಕೊಳ್ಳದೆ ಬೆಳವಣಿಗೆಯ ಮನಸ್ಥಿತಿಯನ್ನು ರೂಡಿಸಿಕೊಳ್ಳಿ ಎಂದರು.  

ಪ್ರಾಚಾರ್ಯರಾದ ಎಸ್‌.ಆರ್ ಮೂಗನೂರಮಠ ಅವರು ಮಾತನಾಡಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಭಾಷೆಯ ಭಯವನ್ನು ಹೊರತುಪಡಿಸಿದರೆ ಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಉತ್ತಮ ಸಂವಹನ ಕೌಶಲ್ಯ ಅವಶ್ಯವಾಗಿದ್ದು ಅದನ್ನು ಕಲಿಸುವ ಕೆಲಸವನ್ನು ಎನ್‌.ಎಸ್‌.ಎಸ್ ಮಾಡುತ್ತದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸಂಬಳಕ್ಕೆ ಸೀಮಿತರಾಗದೇ ಹೂಡಿಕೆಯ ಆಲೋಚನೆಯಿಂದ ಅಭಿವೃದ್ಧಿ ಸಾಧ್ಯ. ಆಲೋಚನೆಗಳು ಬದಲಾದರೆ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಕಲಾ ವಿಭಾಗದ ವಿದ್ಯಾರ್ಥಿಗಳು ಕೂಡ ಮ್ಯಾನೆಜ್‌ಮೆಂಟ್ ವಿಭಾಗವನ್ನು ಅಧ್ಯಯನ ಮಾಡಬಹುದು ಅದರ ಸದುಪಯೋಗ ಪಡೆದುಕೊಳ್ಳಿ. ಮಾರುಕಟ್ಟೆಯಲ್ಲಿ ಹಲವಾರು ಅವಕಾಶಗಳಿದ್ದು ಸ್ವಂತ ಉದ್ಯಮದತ್ತ ಹೆಜ್ಜೆಹಾಕಿ ಎಂದರು.  

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಎ.ಯು ರಾಠೋಡ, ಶಿವಾನಂದ ಕೋವಳ್ಳಿ ಸೇರಿದಂತೆ ಎನ್‌.ಎಸ್‌.ಎಸ್ ಶಿಬಿರಾರ್ಥಿಗಳು, ಮಹಾವಿದ್ಯಾಲಯದ ಉಪನ್ಯಾಸಕರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಘಟಕ ಒಂದರ ಸಂಯೋಜನಾಧಿಕಾರಿಗಳಾದ ಡಾ.ಎಮ್‌.ಎಚ್ ವಡ್ಡರ ಸ್ವಾಗತಿಸಿದರು, ಡಾ. ವೀರುಪಾಕ್ಷ ಎನ್‌.ಬಿ ವಂದಿಸಿದರು.