ಭುವನೇಶ್ವರ, ಏಪ್ರಿಲ್ 11, ಲಾಕ್ ಡೌನ್ ನಡುವೆ ಬೀದಿಗಳಲ್ಲಿ ಓಡಾಡುವ ಮಾನಸಿಕ ಅಸ್ವಸ್ಥ ಜನರ ಹಕ್ಕುಗಳನ್ನು ಕಾಪಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.ಬೀದಿಗಳಲ್ಲಿ ಓಡಾಡುವ ಈ ಮಾನಸಿಕ ಅಸ್ವಸ್ಥರಿಗೆ ಮಾಡಿರುವ ವ್ಯವಸ್ಥೆಗಳ ಬಗ್ಗೆ ಎರಡು ವಾರಗಳಲ್ಲಿ ತಿಳಿಸುವಂತೆ ಆಯೋಗ ಶುಕ್ರವಾರ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ.
ತಮ್ಮ ವ್ಯಾಪ್ತಿಗೆ ಒಳಪಡುವ ಯಾವುದೇ ರೀತಿಯ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅವರ ವೈಯಕ್ತಿಕ ಆರೈಕೆ ಮತ್ತು ವೈರಸ್‌ನಿಂದ ರಕ್ಷಣೆಗಾಗಿ ಅಗತ್ಯ ಮುನ್ನೆಚ್ಚರಿಕೆಯಾಗಿ ಸರಿಯಾದ ಸಮಾಲೋಚನೆ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಬೇಕು ಎಂದು ಎನ್‍ಎಚ್‍ಆರ್ ಸಿ ತಿಳಿಸಿದೆ. ಲಾಕ್ ಡೌನ್ ನಡುವೆ ದೇಶಾದ್ಯಂತ ಬೀದಿಗಳಲ್ಲಿ ಸಂಚರಿಸುವ ಮಾನಸಿಕ ಅಸ್ವಸ್ಥರ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಸಲ್ಲಿಸಲಾಗಿರುವ ದೂರನ್ನು ಸುಪ್ರೀಂಕೋರ್ಟ್ ಪರಿಗಣಿಸಿದೆ. ದೂರುದಾರ ಪ್ರಸ್ತಾಪಿಸಿರುವ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಕೈಗೊಂಡ ಅಥವಾ ತೆಗೆದುಕೊಳ್ಳಬೇಕಾದ ಕ್ರಮಗಳ ವಿವರಗಳನ್ನು ಒದಗಿಸುವಂತೆ ಆಯೋಗ, ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ.ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳಂತಹ ಸಮಾಜದ ಕೆಲ ವರ್ಗಗಳಿಗೆ ಸಾಮಾನ್ಯ ಸಂದರ್ಭಗಲ್ಲೂ ನಿರ್ದಿಷ್ಟ ಗಮನ ನೀಡಬೇಕಾಗುತ್ತದೆ. ಅವರು ಇತರರ ಮೇಲೆ ಅವಲಂಬಿತರಾಗಿದ್ದು, ಯಾವಾಗಲೂ ಅವರಿಗೆ ಸಹಾಯ ಬೇಕಾಗುತ್ತದೆ ಎಂದು ಎನ್‍ಎಚ್‍ಆರ್ ಸಿ ಹೇಳಿದೆ.
ಬಿಕ್ಕಟ್ಟಿನ ಸಮಯದಲ್ಲಿ ಇಂತಹ ದುರ್ಬಲ ವರ್ಗಗಳಿಗೆ ಸೇರಿದ ಜನರಿಗೆ ಆಹಾರ, ಆಶ್ರಯ ಮತ್ತು ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವುದು ರಾಜ್ಯಗಳ ಕರ್ತವ್ಯವಾಗಿದೆ ಎಂದು ಸಹ ಆಯೋಗ ಹೇಳಿದೆ.