ಇಂದು ಸಾಣಾಪೂರದಲ್ಲಿ ಎನ್‌.ಡಿ.ಆರ್‌.ಎಫ್ ತಂಡದಿಂದ ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನ- ಕ್ಯಾಪ್ಟನ್ ಮಹೇಶ ಮಾಲಗಿತ್ತಿ

ಇಂದು ಸಾಣಾಪೂರದಲ್ಲಿ ಎನ್‌.ಡಿ.ಆರ್‌.ಎಫ್ ತಂಡದಿಂದ ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನ- ಕ್ಯಾಪ್ಟನ್ ಮಹೇಶ ಮಾಲಗಿತ್ತಿ NDRF team to stage a mock disaster management demonstration in Sanapur today - Captain Mahesh Malagi

ಲೋಕದರ್ಶನ ವರದಿ 

      ಕೊಪ್ಪಳ  25: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌.ಡಿ.ಆರ್‌.ಎಫ್) ಬೆಟಾಲಿಯನ್ 10ನೇ ತಂಡದಿಂದ ವಿಪತ್ತು ನಿರ್ವಾಹಣೆಯ ಅಣುಕು ಪ್ರದರ್ಶನ ಕಾರ್ಯಕ್ರಮವು ಮಾರ್ಚ್‌ 26ರಂದು ಬೆಳಿಗ್ಗೆ 8.30 ಗಂಟೆಗೆ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪೂರ ಕೆರೆ ವ್ಯಾಪ್ತಿ ಪ್ರದೇಶದಲ್ಲಿ ನಡೆಯಲಿದೆ ಎಂದು ಕೊಪ್ಪಳ ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.  ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ಸಂಭವನೀಯ ಅತೀವೃಷ್ಟಿ, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮೊಕ್ ಡ್ರಿಲ್ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.   

ಪ್ರಸಕ್ತ ಸಾಲಿನ ಸಂಭವನೀಯ ಅತೀವೃಷ್ಟಿ, ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ನೈಸರ್ಗಿಕ ವಿಪತ್ತು ಸಮಯದಲ್ಲಿ ಸಂಭವಿಸಬಹುದಾದ ಹಾನಿಯಿಂದ ರಕ್ಷಣೆ ಪಡೆಯುವುದು ಹೇಗೆ ಎಂಬುವುದರ ಕುರಿತಾಗಿ ಎನ್‌.ಡಿ.ಆರ್‌.ಎಫ್ ತಂಡ ಮತ್ತು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ಇಲಾಖೆ ಹಾಗೂ ಇತರೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಣುಕು ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಮಾ. 26ರ ಬೆಳಿಗ್ಗೆ 08-30ಕ್ಕೆ ಸಾಣಾಪೂರ ಕೆರೆ ವ್ಯಾಪ್ತಿಯ ಪ್ರದೇಶದಲ್ಲಿ ನಡೆಯಲಿರುವ ಎನ್‌.ಡಿ.ಆರ್‌.ಎಫ್ ತಂಡದ ಅಣುಕು ಪ್ರದರ್ಶನ ಮೊಕ್ ಡ್ರಿಲ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಮ್ಮಿಕೊಳ್ಳಲು ಗಂಗಾವತಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಮತ್ತು ಸಾಣಾಪೂರ ಗ್ರಾ.ಪಂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. 

ಈ ಕಾರ್ಯಕ್ರಮದಲ್ಲಿ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಪ್ರಕೃತಿ ವಿಕೋಪದಿಂದ ಆಗುವ ಅನಾಹುತಗಳು, ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದ ಆಗುವ ಅನಾಹುತಗಳು ಮತ್ತು ಇನ್ನೀತರ ಅನಾಹುತಗಳಿಂದ ಪಾರಾಗಲು ಹಾಗೂ ಭೂಕಂಪ ಬಂದಾಗ ಹೇಗೆ ರಕ್ಷಣೆ ಮಾಡಬಹುದು ಎಂಬುವುದರ ಬಗ್ಗೆಯೂ ಸಹ ಎನ್‌.ಡಿ.ಆರ್‌.ಎಫ್ ತಂಡವು ವಿಶೇಷ ಅರಿವು ಮೂಡಿಸಲಿದ್ದು, ಆಸಕ್ತ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.  

ಎನ್‌.ಡಿ.ಆರ್‌.ಎಫ್ ಡೆಪ್ಯುಟಿ ಕಮಾಂಡೆಂಟ್ ಅಖೀಲ್ ಕುಮಾರ್ ಚೌಬೆ ಅವರು ಮಾತನಾಡಿ, ಅಣುಕು ಪ್ರದರ್ಶನ ಮೂಲಕ ಪ್ರಕೃತಿ ವಿಕೋಪ, ಮಾನವ ನಿರ್ಮಿತ ವಿಕೋಪ, ಅನಿಲ ಸೋರಿಕೆ ತಡೆಗಟ್ಟುವಿಕೆ, ಸುನಾಮಿ, ಭೂಕಂಪ, ಅಗ್ನಿ ಅವಘಡ ಹಾಗೂ ಸಿಡಿಲು ಬಡಿತದಿಂದ ರಕ್ಷಣೆ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಯಾವ ರೀತಿ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು ಮತ್ತು ಇದರ ಜೊತೆಗೆ ರಕ್ತಶ್ರಾವ ತಡೆಗಟ್ಟುವ ಬಗ್ಗೆ, ಹೃದಯಘಾತ ಸಂದರ್ಭದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮ, ಗಂಟಲಿನಲ್ಲಿ ಸಿಕ್ಕಿಕೊಂಡ ವಸ್ತುಗಳ ಹೊರ ತಗೆಯುವುಕೆ (ಎಫ್‌.ಪಿ.ಎ.ಓ), ಹಾವು ಮತ್ತು ಇತರೆ ಪ್ರಾಣಿ ಕಡಿತದಿಂದ ರಕ್ಷಣೆ ಮಾಡುಕೊಳ್ಳಬೇಕೆಂಬುವುದರ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಮಪ್ಪ, ಗಂಗಾವತಿ ತಹಶೀಲ್ದಾರ ವಿಶ್ವನಾಥ ಮುರಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ, ಪೊಲೀಸ್ ಇನ್ಸ್‌ಪೆಕ್ಟರ್ ಶಿವರಾಜ, ಸೇರಿದಂತೆ ಎನ್‌.ಡಿ.ಆರ್‌.ಎಫ್ ತಂಡ, ಗೃಹರಕ್ಷಕ ದಳದ ಹಾಗೂ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.