ನವದೆಹಲಿ, ಜ ೧೩, ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚಿಗೆ ಪ್ರಕಟಿಸಿರುವ ‘ಮೈ ಲೈಫ್, ಮೈ ಯೋಗ’ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಪ್ರವೇಶಾತಿ ಸಲ್ಲಿಕೆಗೆ ಕೇಂದ್ರ ಆಯುಷ್ ಸಚಿವಾಲಯ ಜೂನ್ ೨೧ರವರೆಗೆ ವಿಸ್ತರಿಸಿದೆ.ಜೂನ್ ೨೧ರಂದು ನಡೆಯಲಿರುವ ಆರನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಈ ಜಾಗತಿಕ ಸ್ಪರ್ಧೆಯನ್ನು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಜಂಟಿಯಾಗಿ ಆಯೋಜಿಸಿವೆ. ಈ ಮೊದಲು ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಪ್ರವೇಶ ಸಲ್ಲಿಸಲು ಜೂನ್ ೧೫ ಕಡೆಯ ದಿನವಾಗಿತ್ತು. ಭಾರತ ಹಾಗೂ ವಿದೇಶಗಳಿಂದ ದಿನಾಂಕ ವಿಸ್ತರಣೆಗೆ ಬಂದಿರುವ ಮನವಿಗಳ ಹಿನ್ನಲೆಯಲ್ಲಿ ಸಚಿವಾಲಯ ಹಾಗೂ ಐಸಿಸಿಆರ್ ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ ೨೧ರವರೆಗೆ ಪ್ರವೇಶ ಸಲ್ಲಿಕೆಯ ಕಡೆಯ ದಿನವನ್ನು ವಿಸ್ತರಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಮೇ ೩೧ರ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ದೇಶ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮೈ ಲೈಫ್ ಮೈ ಯೋಗ ಅಂತರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ನಡೆಸುವುದನ್ನು ಪ್ರಕಟಿಸಿದ್ದರು. ಈ ಸ್ಪರ್ಧೆಯಲ್ಲಿ ಸಾರ್ವಜನಿಕರ ಜೀವನದಲ್ಲಿ ಯೋಗದಿಂದ ಆಗಿರುವ ಪರಿವರ್ತನಾತ್ಮಕ ಪರಿಣಾಮಗಳ ಬಗ್ಗೆ ಗಮನಹರಿಸಲಾಗುವುದು ಎಂದು ಪ್ರಕಟಿಸಿದ್ದರು.ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ದೇಶಾದ್ಯಂತ ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ನಡೆಸಲಾಗುವುದು ಇದರಲ್ಲಿ ವಿಜೇತರನ್ನು ದೇಶದ ಮಟ್ಟದಲ್ಲಿ ಆಯ್ಕೆ ಮಾಡಲಾಗುವುದು. ನಂತರ ವಿವಿಧ ದೇಶಗಳ ಮಟ್ಟದಲ್ಲಿ ಸ್ಪರ್ಧೆ ನಡೆಸಿ ಜಾಗತಿಕ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ವಿವರಿಸಿದ್ದರು.
ಸ್ಪರ್ಧೆಗೆ ಪ್ರವೇಶಗಳನ್ನು ಬಯಸುವವರು, ಮೂರು ವಿಭಾಗಗಳಲ್ಲಿ ಆರ್ಜಿ ಸಲ್ಲಿಸಬಹುದು. ಯುವಕರು (೧೮ ವರ್ಷದೊಳಗಿನವರು), ವಯಸ್ಕರು(೧೮ ವರ್ಷ ಮೇಲ್ಪಟ್ಟವರು) ಮತ್ತು ಯೋಗ ವೃತ್ತಿಪರರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳು ಇರಲಿವೆ. ಒಟ್ಟಾರೆ ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಭಾರತೀಯ ಸ್ಪರ್ಧಿಗಳಿಗೆ ಬಹುಮಾನ ಒಂದು ಲಕ್ಷ ರೂ., ೫೦ ಸಾವಿರ ರೂ. ಮತ್ತು ೨೫ ಸಾವಿರ ರೂ. ಇರುತ್ತದೆ, ಇದು ಪ್ರತಿಯೊಂದು ವಿಭಾಗದಲ್ಲೂ ಇರಲಿದ್ದು, ಮೊದಲ ಹಂತದಲ್ಲಿ ಆಯಾ ವಿಭಾಗಗಳಲ್ಲೇ ಪ್ರಶಸ್ತಿ ಪ್ರಕಟಿಸಲಾಗುವುದು. ಜಾಗತಿಕ ಪ್ರಶಸ್ತಿ ವಿಜೇತರಿಗೆ ಪ್ರಥಮ ಬಹುಮಾನ ೨೫ ಸಾವಿರ ಅಮೆರಿಕಾ ಡಾಲರ್, ದ್ವಿತೀಯ ಬಹುಮಾನ ೧೫೦೦ ಅಮೆರಿಕಾ ಡಾಲರ್, ತೃತೀಯ ಬಹುಮಾನ ೧೦೦೦ ಅಮೆರಿಕಾ ಡಾಲರ್ ಬಹುಮಾನ ನೀಡಲಾಗುವುದು ಆಯುಷ್ ಸಚಿವಾಲಯದ ಪ್ರಕಟಿಸಿದೆ.