ಇಸ್ಲಾಮಾಬಾದ್: ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ನಾಯಕ ಇಮ್ರಾನ್ ಖಾನ್ ಅವರಿಗೆ ಅವರ ಮಾಜಿ ಪತ್ನಿ ಜೆಮಿಮಾ ಗೊಲ್ಡ್ ಸ್ಮಿತ್ ಅವರು ಅಭಿನಂದನೆ ಸಲ್ಲಿಸಿದ್ದು, ನನ್ನ ಎರಡು ಮಕ್ಕಳ ತಂದೆ ಪಾಕಿಸ್ತಾನದ ಮುಂದಿನ ಪ್ರಧಾನಿ ಎಂದು ಸಂಭ್ರಮದಿಂದ ಟ್ವೀಟ್ ಮಾಡಿದ್ದಾರೆ.
ಜೆಮಿಮಾ ಅವರು 1995ರಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 2004ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ ಇಮ್ರಾನ್ ಖಾನ್ ಮತ್ತೆ ಎರಡು ಬಾರಿ ಮದುವೆಯಾಗಿದ್ದಾರೆ.
ಇಮ್ರಾನ್ ಖಾನ್ ಅವರು 1997ರಲ್ಲಿ ಎದುರಿಸಿದ ಮೊದಲ ಚುನಾವಣೆಯನ್ನು ನೆನಪು ಮಾಡಿಕೊಂಡಿರುವ ಜೆಮಿಮಾ, ಅಂದು ಆದರ್ಶಾತ್ಮಕ ಮತ್ತು ನಿಷ್ಕಪಟ ರಾಜಕೀಯವಿತ್ತು ಎಂದಿದ್ದಾರೆ.
ಸುಮಾರು 22 ವರ್ಷಗಳ ನಿರಂತರ ಹೋರಾಟ, ಅವಮಾನ, ಅಡಚಣೆಗಳು ಮತ್ತು ತ್ಯಾಗದ ನಂತರ ನನ್ನ ಮಕ್ಕಳ ತಂದೆ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗುತ್ತಿದ್ದಾರೆ. ದೃಢವಾದ ನಂಬಿಕೆ ಮತ್ತು ಸೋಲಿನಿಂದ ಕಲಿತ ಪಾಠ ಇಂದು ಅವರು ಪ್ರಧಾನಿಯಾಗುವಂತೆ ಮಾಡಿದೆ. ಶುಭಾಶಯಗಳು ಇಮ್ರಾನ್ ಖಾನ್ ಎಂದು ಜೆಮಿಮಾ ಟ್ವೀಟ್ ಮಾಡಿದ್ದಾರೆ.
ನಿನ್ನೆ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಒಟ್ಟು 272 ಕ್ಷೇತ್ರಗಳ ಪೈಕಿ 122 ಕ್ಷೇತ್ರಗಳಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಮುನ್ನಡೆ ಸಾಧಿಸಿದೆ. ಈಗಾಗಲೇ ಪಿಟಿಐ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಸಂಭ್ರಮಾಚರಣೆ ಮಾಡುತ್ತಿದ್ದಾರೆ.