ಕೋವಿಡ್ 19 ನಿಯಂತ್ರಣಕ್ಕೆ ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯ ಸೂಕ್ತ ಸಹಕಾರ ನೀಡಬೇಕು – ಬಸವರಾಜ ಬೊಮ್ಮಾಯಿ

ಬೆಂಗಳೂರು, ಏ 18,ರಂಜಾನ್ ತಿಂಗಳಿನಲ್ಲಿ ಮುಸ್ಲಿಂ ಸಮುದಾಯದವರು ಒಂದೇ ಕಡೆ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಯಾಗಬಾರದು. ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಅಗತ್ಯ  ಸಹಕಾರ  ನೀಡಬೇಕು ಎಂದು ಗೃಹಸಚಿವ ಬಸವರಾಜ್  ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಸಂಬಂಧ ಬೊಮ್ಮಾಯಿ ಅವರು ವಿವಿಧ ಜಿಲ್ಲೆಗಳ ಮುಸ್ಲಿಂ ಸಮುದಾಯದ ಮುಖಂಡರ ಜತೆ ವಿಡಿಯೋ ಸಂವಾದ ನಡೆಸಿ, ಮುಸ್ಲಿಮರು  ಪ್ರಾರ್ಥನೆ, ಇಫ್ತಾರ್ ಕೂಟ ಸಂದರ್ಭದಲ್ಲಿ ಗುಂಪು ಸೇರಬಾರದು. ವಕ್ಫ್ ಮಂಡಳಿ ನೀಡಿರುವ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಈಗಾಗಲೇ ನೀಡಿರುವ ಸೂಚನೆಗಳಲ್ಲಿ ಬದಲಾವಣೆಗಳಿದ್ದಲ್ಲಿ ಸೂಕ್ತ  ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.ರಂಜಾನ್ ಉಪವಾಸ ಮಾಸದಲ್ಲಿ ಅಧಿಕಾರಿಗಳು ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕು. ಪೊಲೀಸರು ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದ್ದು, ಮುಸ್ಲಿಂ ಸಮುದಾಯದವರು ಸಹ ಇದೇ ರೀತಿಯಲ್ಲಿ ಸಹಕಾರ ಮನೋಭಾವನೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರ ಜತೆ ಸಂವಾದ ಮಾಡಿದ ಬೊಮ್ಮಾಯಿ, ಭಟ್ಕಳದಲ್ಲಿ ಸೋಂಕು ಹೆಚ್ಚಾಗಿದೆ. ಈ ಪಟ್ಟಣ ಬಿಟ್ಟು ಬೇರೆ ತಾಲೂಕುಗಳಲ್ಲಿ  ಕೋವಿಡ್- ೧೯ ಹರಡದಂತೆ ನೋಡಿಕೊಳ್ಳಬೇಕೆಂದು ಸಲಹೆ ಮಾಡಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ  ಡಾ|| ಕೆ. ಹರೀಶ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ  ಕೋವಿಡ್-೧೯ ಹತೋಟಿಯಲ್ಲಿದೆ. ಭಟ್ಕಳದಲ್ಲಿ ೧೧ ಪ್ರಕರಣಗಳು ಕಂಡುಬಂದಿದ್ದು, ೯ ಜನರು ಗುಣಮುಖರಾಗಿದ್ದಾರೆ. ಉಳಿದ ತಾಲೂಕುಗಳಲ್ಲಿ ಸಮಸ್ಯೆ ಎದುರಾಗಿಲ್ಲ  ಎಂದು  ಸಚಿವರಿಗೆ   ಮಾಹಿತಿ ನೀಡಿದರು.