ಚರಿತ್ರೆ ಅರಿಯಲು ವಸ್ತುಸಂಗ್ರಹಾಲಯಗಳು ಸಹಕಾರಿ: ಟಿ.ಜಿ.ವಿಠ್ಠಲ

ಚರಿತ್ರೆ ಅರಿಯಲು ವಸ್ತುಸಂಗ್ರಹಾಲಯಗಳು ಸಹಕಾರಿ: ಟಿ.ಜಿ.ವಿಠ್ಠಲ Museums are helpful in understanding history: T.G. Vithala

ಬಳ್ಳಾರಿ 19: ಚರಿತ್ರೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಮತ್ತು ಅರಿಯಲು ವಸ್ತುಸಂಗ್ರಹಾಲಯಗಳು ಅತ್ಯಂತ ಸಹಕಾರಿಯಾಗಿವೆ ಎಂದು ಗಾಂಧಿ ಭವನ ಹಾಗೂ ಮಲ್ಲಸಜ್ಜನ ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ. ವಿಠ್ಠಲ ಅವರು ಅಭಿಪ್ರಾಯಪಟ್ಟರು.ನಗರದ ರಾಬರ್ಟ್‌ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತುಸಂಗ್ರಹಾಲಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇತಿಹಾಸದ ಆಸಕ್ತರು ಪಠ್ಯಪುಸ್ತಕಗಳನ್ನು ಓದುವುದು ಮತ್ತು ಪಳೆಯುಳಿಕೆಗಳ ಚಿತ್ರಗಳನ್ನು ನೋಡುವುದು ಅನಿವಾರ್ಯವಿರಬಹುದು.

ಆದರೆ ವಸ್ತುಸಂಗ್ರಹಾಲಯಕ್ಕೆ ನೇರವಾಗಿ ಭೇಟಿ ನೀಡಿದಾಗ, ಇತಿಹಾಸದ ಕುರುಹುಗಳನ್ನು ಸಾಕ್ಷಾತ್ ಕಣ್ಣಾರೆ ನೋಡಿ ಮಾಹಿತಿ ಪಡೆದುಕೊಳ್ಳುವ ಅನುಭವವೇ ಬೇರೆಯಾಗಿರುತ್ತದೆ ಎಂದು ತಿಳಿಸಿದರು.ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಮಹಾಬಳೇಶ್ವರ​‍್ಪ ಅವರು ಮಾತನಾಡಿ, ವಸ್ತುಸಂಗ್ರಹಾಲಯಗಳ ಮೂಲಕ ಸಾವಿರಾರು ವರ್ಷಗಳ ಹಿಂದಿನ ಮಾನವನ ಜನಜೀವನ ಮತ್ತು ಆಹಾರ ಪದ್ಧತಿಯ ಬಗ್ಗೆ ವಿವರವಾದ ಮಾಹಿತಿ ಪಡೆಯಬಹುದು. ನಮ್ಮ ಭಾಗದ ಊರುಗಳ ಹೆಸರುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅವು ಅಂದು ಬೆಳೆದ ದವಸ-ಧಾನ್ಯಗಳು ಹಾಗೂ ಸಗಣಿ ಸುಟ್ಟ ಬೂದಿಯ ದಿಬ್ಬಗಳ ಹಿನ್ನೆಲೆಯನ್ನು ಅವಲಂಬಿಸಿ ಇಟ್ಟಿರುವುದು ತಿಳಿಯುತ್ತದೆ ಎಂದು ವಿವರಿಸಿದರು.

ರುಕ್ಮಿಣಿಯಮ್ಮ ಚೆಂಗರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಹಾಗೂ ಮ್ಯಾನೇಜ್ಮೆಂಟ್ ಕಾಲೇಜಿನ ಉಪನ್ಯಾಸಕ ಒಬ್ಬಯ್ಯ ಅವರು ಮಾತನಾಡಿ, ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಊರುಗಳ ಸುತ್ತಮುತ್ತ ಚಾರಣ ಕೈಗೊಂಡರೆ ಇತಿಹಾಸದ ಹೊಸ ಕುರುಹುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದರು.ವಸ್ತುಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಗೌರಿ ಅವರು ಮಾತನಾಡಿ, ಬಳ್ಳಾರಿಯಲ್ಲಿರುವ ಈ ವಸ್ತುಸಂಗ್ರಹಾಲಯವು ಇಡೀ ಭಾರತದಲ್ಲೇ ಪ್ರಾಗೈತಿಹಾಸಿಕ ಕಾಲಕ್ಕೆ ಮೀಸಲಿಟ್ಟ ಏಕೈಕ ವಿಶಿಷ್ಟ ವಸ್ತುಸಂಗ್ರಹಾಲಯವಾಗಿದೆ. ಇದು ಇತಿಹಾಸದ ಕುರಿತು ಹೆಚ್ಚಿನ ಸಂಶೋಧನೆ ಹಾಗೂ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ತಿಳಿಸಿದರು.

ಇದೇ ವೇಳೆ ಕಲ್ಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯರಾದ ರೋಹಿಣಿ ಮತ್ತು ಅಶ್ವಿನಿ ಅವರು ಉನ್ನತ ಸಂಶೋಧನೆಗಳಲ್ಲಿ ವಸ್ತುಸಂಗ್ರಹಾಲಯಗಳ ಪಾತ್ರದ ಕುರಿತು ಬೆಳಕು ಚೆಲ್ಲಿದರು.ಕಾರ್ಯಕ್ರಮದಲ್ಲಿ ವಸ್ತುಸಂಗ್ರಹಾಲಯ ಸಮಿತಿ ಸದಸ್ಯ ಎಂ.ಅಹಿರಾಜ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಈ ವೇಳೆ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರುಕ್ಮಿಣಿಯಮ್ಮ ಚೆಂಗರೆಡ್ಡಿ ಸ್ಮಾರಕ ಕಾಲೇಜಿನ ಉಪನ್ಯಾಸಕರು ಮತ್ತು ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು