ಸದಸ್ಯತ್ವ ಅವಧಿ ಕೊನೆಗೊಳ್ಳುವ ಹಂತದಲ್ಲಿ ನಗರಸಭಾ ಸದಸ್ಯರಿಂದ ಹೈದ್ರಾಬಾದಿಗೆ ಪ್ರವಾಸ

ಸದಸ್ಯತ್ವ ಅವಧಿ ಕೊನೆಗೊಳ್ಳುವ ಹಂತದಲ್ಲಿ  ನಗರಸಭಾ ಸದಸ್ಯರಿಂದ ಹೈದ್ರಾಬಾದಿಗೆ  ಪ್ರವಾಸ Municipal council members travel to Hyderabad as their membership term ends

ಕಾರವಾರ 28: ದಾಂಡೇಲಿ ನಗರಸಭಾ ಅಧಿಕಾರದ  ಅವಧಿ ಮುಗಿಯಲು ಒಂದು ವಾರವಿದ್ದಾಗ ದಾಂಡೇಲಿ ನಗರಸಭೆಯ ಪೌರಾಯುಕ್ತರು, ನಗರಸಭೆಯ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರನ್ನೊಳಗೊಂಡ 30 ಜನರ ತಂಡ ಹೈದ್ರಾಬಾದಿಗೆ ಪ್ರವಾಸ ಹೋಗಿದ್ದು, ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.  

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ  ಪ್ರವಾಸದ ಉದ್ದೇಶ ಕಸದಿಂದ ಇಂಧನವನ್ನು ಪೂರೈಸುವ ಅಧ್ಯಯನ ಪ್ರವಾಸಕ್ಕಾಗಿ ಹೋಗಿದ್ದಾರೆ. ಅದು ಅಧಿಕಾರ ಮುಗಿಯುವಾಗ . ಪ್ರವಾಸ ಹೋಗಿ ಅದನ್ನು ಜಾರಿಗೆ ತರಲು, ಈಗ ಇರುವವರೇ ಮರು ಆಯ್ಕೆ ಯಾಗಿ ಬರುವ ಗ್ಯಾರಂಟಿ ಏನಿದೆ ಎಂಬುದು ಜನರ ಪ್ರಶ್ನೆ. ಹಾಗಾಗಿ  ನಗರಸಭಾ ಸದಸ್ಯರ  ಪ್ರವಾಸ ಇದೀಗ ನಗರದಲ್ಲಿ ಸಾರ್ವಜನಿಕ ಚರ್ಚೆಗೆ ಗ್ರಾಸಾಗಿದೆ. ಹೈದ್ರಾಬಾದಿಗೆ ತೆರಳಿದ ಈ ಸದಸ್ಯರ ತಂಡ   ಕಸದಿಂದ ಇಂಧನವನ್ನು ಪೂರೈಸುವ ಹೈದರಾಬಾದ್  ಘಟಕದ ಮುಂದೆ ನಿಂತು ಜನಪ್ರತಿನಿಧಿಗಳು ಪೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ತಾವು ಮಾಡುತ್ತಿರುವ ಘನ ಕಾರ್ಯದ ಬಗ್ಗೆ ನಗರದಲ್ಲಿ ಹಲವರಿಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದು ಹೈದರಾಬಾದ್ ನಲ್ಲಿನ ದಕ್ಷಿಣ ಭಾರತದ ಪ್ರಥಮ ಕಸ ದಿಂದ ಇಂಧನ ತಯಾರಿಸುವ ಘಟಕವಾಗಿದೆ. ಉದ್ದೇಶ ಒಳ್ಳೆಯದು. ಆದರೆ ಅಧಿಕಾರ ಹೋಗುವಾಗ ಇದು ಬೇಕಿತ್ತಾ ಎಂಬ ಪ್ರಶ್ನೆ ಎದ್ದಿದೆ. ದಾಂಡೇಲಿ ನಗರದಲ್ಲಿ ಸರಿಯಾಗಿ ಕಸ ವಿಲೇವಾರಿಯಾಗುತ್ತಿಲ್ಲ. ರಸ್ತೆಗಳು ಗುಂಡಿ ಬಿದ್ದು, ಧೂಳು ಹಾರಿ ಜನರ ಆರೋಗ್ಯ ಕೆಡುತ್ತಿದೆ. ಆದರೆ ಇದರ ಕಾಳಜಿ ತೋರ ಬೇಕಾದವರು ನಾಲ್ಕೈದು ಲಕ್ಷ ರೂಪಾಯಿ ನಗರಸಭೆ ಅನುಧಾನ ಖರ್ಚು ಮಾಡಿ ಅಧ್ಯಯನದ ಹೆಸರಿನಲ್ಲಿ ಟೂರ್ ಹೋಗಿದ್ದಾರೆ. ಇವರ ಅಧಿಕಾರಾವಧಿ ಕೇವಲ ಮೂರ್ನಾಲ್ಕು ದಿನ ಮಾತ್ರ ಇದೆ. ಹೀಗಿರುವಾಗ ಈ ಅಧ್ಯಯನ ಯಾತ್ರೆಯಿಂದ ಊರಿಗೇನು ಪ್ರಯೋಜನ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆಡಳಿತ ನಿರ್ವಹಿಸುವ ಪಕ್ಷದ ಸದಸ್ಯರ ಲೋಪ ದೋಷಗಳನ್ನು ವಿರೋಧಿಸಬೇಕಾದ ವಿರೋಧ ಪಕ್ಷದ ಬಿ.ಜೆ.ಪಿ.ನಗರಸಭಾ ಸದಸ್ಯರು ಅವರೊಟ್ಟಿಗೆ ಕೈ ಜೋಡಿಸಿ ಯಾತ್ರೆ ಹೊರಟಿದ್ದು ಟೀಕೆಗೆ ಗುರಿಯಾಗಿದೆ. ನವಂಬರ 9 ರೊಳಗಾಗಿ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಅವಧಿ ಮುಕ್ತಾಯಗೊಳ್ಳುತ್ತಿದೆ. ದಾಂಡೇಲಿ ನಗರಸಭೆಯ ಆಡಳಿತಾವಧಿ ಅಕ್ಟೋಬರ್ 31 ರಂದು ಮುಗಿಯಲಿದೆ ಎಂದು ಮಾಹಿತಿ ಬಂದಿದೆ.  

ಈ ಹಂತದಲ್ಲಿ ಮತ್ತೇ ಸದ್ಯದಲ್ಲಿ ನಗರಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಆಡಳಿತಾಧಿಕಾರಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ. ಹೀಗಿರುವಾಗ ನಗರಸಭೆ ಬೊಕ್ಕಸಕ್ಕೆ ಖರ್ಚು ಹಾಕಿ ನಗರೋದ್ಧಾರಕ್ಕಾಗಿ ಅಧ್ಯಯನ ಮಾಡಿ ಬಂದಿರುವ ನಗರಸಭಾ ಸದಸ್ಯರ ಅವಧಿಯೇ ಮುಗಿಯುತ್ತಿರುವಾಗ ಇವರು ನಗರಕ್ಕೇನು ಮಾಡಬಲ್ಲರು ಎಂದು ಜನ ಪ್ರಶ್ನಿಸುತ್ತಿದ್ದಾರೆ.