ತಾಯಿಯ ಎದೆಹಾಲು ಮಗುವಿನ ಆರೋಗ್ಯಕ್ಕೆ ಅತ್ಯವಶ್ಯ: ಡಾ. ಕಸ್ತೂರಿ

ತಾಯಿಯ ಎದೆಹಾಲು ಮಗುವಿನ ಆರೋಗ್ಯಕ್ಕೆ ಅತ್ಯವಶ್ಯ: ಡಾ. ಕಸ್ತೂರಿ  Mother's breast milk is essential for a baby's health: Dr. Kasturi

ಕೊಪ್ಪಳ, 11: ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಗರ್ಭಿಣಿಯರು ಹಾಗೂ ಬಾಣಂತಿಯರು ವೈದ್ಯರ ಸಲಹೆಯನ್ನು ತಪ್ಪದೆ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದ ಬಾವಿ ಹೇಳಿದರು.  

ನಗರದ 13ನೇ ವಾರ್ಡ್‌ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ 316 ವತಿಯಿಂದ ವಿಶ್ವ ಸ್ತನ್ಯಪಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಪ್ರೋಟೀನ್ ಕಿಟ್ಗಳನ್ನು ವಿತರಿಸಲಾಯಿತು.  

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶ್ರೀ ಅನ್ನಪೂರ್ಣೇಶ್ವರಿ ಆಸ್ಪತ್ರೆಯ ಮುಖ್ಯ ವೈದ್ಯೆ ಡಾ. ಕಸ್ತೂರಿ ಕರಮುಡಿ ಮಾತನಾಡಿ, ತಾಯಂದಿರು ಮಗುವಿಗೆ ಕನಿಷ್ಠ ಆರು ತಿಂಗಳವರೆಗೆ ಯಾವುದೇ ಹೆಚ್ಚುವರಿ ಆಹಾರ ನೀಡದೆ ತಾಯಿಯ ಎದೆಹಾಲನ್ನು ತಪ್ಪದೆ ನೀಡಬೇಕು. ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆಯಂತಿದ್ದು, ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.  

ಹಿರಿಯ ವೈದ್ಯೆ ಡಾ. ರಾಧಾ ಕುಲಕರ್ಣಿ ಮಾತನಾಡಿ, ತಾಯಿಯ ಎದೆಹಾಲಿನಿಂದ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ತಾಯಂದಿರಲ್ಲಿ ಕೆಲವು ಕಾಯಿಲೆಗಳ ಅಪಾಯವೂ ಕಡಿಮೆಯಾಗುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಅಗತ್ಯ ಎಂದರು.  

ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಕ್ಲಬ್ ವತಿಯಿಂದ ಸೀತಾಫಲ ಗಿಡ ನೆಡಲಾಯಿತು. ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.  

ಈ ಸಂದರ್ಭದಲ್ಲಿ ಕ್ಲಬ್ನ ಕಾರ್ಯದರ್ಶಿ ಶ್ರೀದೇವಿ, ಐಎಸ್‌ಒ ಲತಾ ಪಟ್ಟಣಶೆಟ್ಟಿ, ಎಡಿಟರ್ ಮಾಲಾ ಎಸ್‌. ಕಂಚಿ, ರಜನಿ ಶಿಲ್ಪಾ ರಾಜು, ಶರಣಮ್ಮ ಪಾಟೀಲ, ಜ್ಯೋತಿಕಾ, ಶೋಭಾ, ಮಧು ನಿಲೋಗಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.