ನವದೆಹಲಿ, ಜೂ 14,ನೈರುತ್ಯ ಮುಂಗಾರು ದೇಶದ ಬಹುತೇಕ ರಾಜ್ಯಗಳನ್ನು ಆವರಿಸಿಕೊಳ್ಳುತ್ತಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗೆ ಸೂಕ್ತ ವಾತಾವರಣ ನಿರ್ಮಾಣವಾಗುತ್ತಿದೆ. ಬಿತ್ತನೆಗೆ ಭೂಮಿ ಹದ ಮಾಡುವ ಚಟುವಟಿಕೆ ಬಹುತೇಕ ರಾಜ್ಯಗಳಲ್ಲಿ ಆರಂಭವಾಗಿದೆ. ಕರ್ನಾಟಕದ ನಂತರ ಇದೀಗ ಮಹಾರಾಷ್ಟ್ರ, ಬಿಹಾರದ ಬಳಿಕ ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಿಗೂ ಮುಂಗಾರು ಪ್ರವೇಶವಾಗಿದೆ. ಮುಂಬೈ ಸೇರಿ ಮಹಾರಾಷ್ಟ್ರದ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ ೨೪ ಗಂಟೆಗಳಲ್ಲಿ ಸಂಪೂರ್ಣ ಇಡೀ ರಾಜ್ಯಕ್ಕೆ ನೈರುತ್ಯ ಮುಂಗಾರು ವ್ಯಾಪಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.
ಬಿಹಾರದ ಬಗಲ್‌ಪುರ್, ಪೂರ್ಣೆಯ ಹಾಗೂ ಕತಿಯಾರ್ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಹತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಬಹು ಬೇಗನೆ ಬಿಹಾರಕ್ಕೆ ಆಗಮಿಸಿರುವುದು ವಿಶೇಷವಾಗಿದೆ. ಜಾರ್ಖಂಡ್‌ನ ಹಲವೆಡೆ ಮಳೆ ಸುರಿಯುತ್ತಿದ್ದು, ಎರಡು ದಿನಗಳ ಮುಂಚೆಯೇ ನೈರುತ್ಯ ಮುಂಗಾರು ಬಂದಿದೆ. ಜೆಮ್‌ಶೆಡ್‌ಪುರ್‌ದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಮಳೆಯಾಗಲಿದೆ ಎಂದು ರಾಂಚಿಯಲ್ಲಿರುವ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಡಿಶಾದ ಎಲ್ಲಾ ೩೦ ಜಿಲ್ಲೆಗಳಲ್ಲೂ ನೈರುತ್ಯ ಮುಂಗಾರು ಪ್ರಾರಂಭವಾಗಿದ್ದು, ಹೆಚ್ಚಿನ ಬುಡಕಟ್ಟು ಜನರನ್ನು ಹೊಂದಿರುವ ಈ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಾರುತ ಸಾಮಾನ್ಯವಾಗಿರಲಿದೆ ಎಂದು ವರದಿಯಾಗಿದೆ.