ನವದೆಹಲಿ, ಏ 14,ಕೊರೊನಾ ಸಂಕಷ್ಟ ನಿವಾರಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಿಯವರೆಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಕೊರೊನಾ ಸೋಂಕು ನಿವಾರಣೆ ಮಾಡುವ ನಿಟ್ಟಿನಲ್ಲಿ ದೇಶದ ಜನರು ನೀಡಿದ ಸಹಕಾರಕ್ಕೆ ಅವರು ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ.ಜನರ ಸಹಕಾರದಿಂದ ಭಾರತದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇನ್ನು ಸ್ವಲ್ಪ ಕಾಲ ನಾವು ಕಷ್ಟ ನಷ್ಟಗಳನ್ನು ನಿಗ್ರಹಿಸಿದರೆ ಈ ಸಂಕಷ್ಟದಿಂದ ಭಾರತ ಹೊರಬರುವುದರಲ್ಲಿ ಯಾವುದೇ ಸಂದೇಹವಿಲ್ಲ. “ನಿಜ, ಲಾಕ್ ಡೌನ್ ಅವಧಿಯಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ, ವಲಸೆ ನೌಕರರಿಗೆ ತುಂಬಾ ಕಷ್ಟವಾಗಿದೆ. ಅದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಜನರ ಪ್ರಾಣಕ್ಕಿಂತ ಆರ್ಥಿಕತೆ ಮುಖ್ಯ ಅಲ್ಲ ಎಂಬುದನ್ನು ನಾನು ಮನಗಂಡಿದ್ದೇನೆ.”
ಈ ಮುನ್ನ ಘೋಷಿಸಿದ್ದ 21 ದಿನಗಳ ಮೊದಲ ಹಂತದ ಲಾಕ್ ಡೌನ್ ಅವಧಿ ಮಂಗಳವಾರ ಮುಕ್ತಾಯಗೊಳ್ಳಲಿದ್ದು ಇದೇ 15 ರಿಂದ ಎರಡನೇ ಹಂತದ 19 ದಿನಗಳ ಲಾಕ್ ಡೌನ್ ಜಾರಿಯಲ್ಲಿರಲಿದೆ. 40 ದಿನಗಳ ಲಾಕ್ ಡೌನ್ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಎಂಬುದು ಅರ್ಥವಾಗಿದ್ದರೂ ದೇಶದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇದು ಅನಿವಾರ್ಯ. ಹೀಗಾಗಿ ಜನರು ಲಾಕ್ ಡೌನ್ ಆದೇಶ ಪಾಲನೆ ಮಾಡಬೇಕು. ದೇಶದ ಆರೋಗ್ಯ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಪ್ರಧಾನಮಂತ್ರಿ ಕಳಕಳಿಯ ಮನವಿ ಮಾಡಿಕೊಂಡರು. ಜನರು ಪಾಲಿಸಬೇಕಾದ ಸಪ್ತ ಸೂತ್ರಗಳನ್ನು ಮುಂದಿಟ್ಟಿದ್ದಾರೆ. ಅವು
1. ಕುಟುಂಬದ ಹಿರಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಅವರನ್ನು ಜೋಪಾನವಾಗಿ ನೋಡಿಕೊಳ್ಳಿ. ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಹೆಚ್ಚಿನ ಜಾಗ್ರತೆ ವಹಿಸಿ.
2. ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ ಎಂಬ ಲಕ್ಷ್ಮಣರೇಖೆಯನ್ನು ದಾಟಬೇಡಿ. ಬೇರೆಯವರು ದಾಟಲು ಅವಕಾಶ ಮಾಡಿಕೊಡಬೇಡಿ. ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸುವುದನ್ನು ಮರೆಯಬೇಡಿ. ಮನೆಯಲ್ಲಿಯೇ ಸಿದ್ಧಪಡಿಸಿದ ಮಾಸ್ಕ್ ಅನ್ನು ಉಪಯೋಗಿಸಿ.
3. ಆಯುಷ್ ಇಲಾಖೆಯ ಸಲಹೆ, ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ
ಬಿಸಿ ನೀರು ಕುಡಿಯಿರಿ, ಕಷಾಯ ಕುಡಿಯಿರಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಕಾಯಿ ಪಲ್ಲೆ ಸೇವಿಸಿ, ಆರೋಗ್ಯದಿಂದಿರಿ.
4. ಆರೋಗ್ಯ ಸೇತು ಆಪ್ ಅನ್ನು ಎಲ್ಲರೂ ಕೂಡಲೇ ಡೌನ್ ಲೋಡ್ ಮಾಡಿಕೊಳ್ಳಿ. ಆರೋಗ್ಯ ಸೇತು ಹೇಗೆ ಬಳಸಬೇಕು, ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಬೇರೆಯವರಿಗೂ ಹೇಳಿಕೊಡಿ.
5. ಬಡವರಿಗೆ ಸಹಾಯ ಮಾಡಿ. ಮನೆಯ ಸಮೀಪ ಇರುವ ಬಡ, ನಿರ್ಗತಿಕರಿಗೆ ನೆರವಾಗಿ. ಅಗತ್ಯವಿರುವವರಿಗೆ ಆಹಾರ ನೀಡಿ.
6. ಸಿಬ್ಬಂದಿಯೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರನ್ನು ಕೆಲಸದಿಂದ ತೆಗೆದು ಹಾಕಬೇಡಿ. ಸಂಬಳ ಕಡಿತ ಮಾಡಬೇಡಿ.
7. ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು, ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಅವರನ್ನು ಗೌರವಿಸಿ.
ಈ ನಿಯಮಗಳ ಪಾಲನೆ ವಿಜಯದ ಮಾರ್ಗ. ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗಲು ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಎಲ್ಲಿದ್ದಿರೋ ಅಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.