ಮೋದಿ, ತಕೈಚಿ ಅವರು ಖಾರ್ಖೋಡಾ ಮಾರುತಿ ಸುಜುಕಿ ಘಟಕವನ್ನು ವರ್ಚುವಲ್ ಮೂಲಕ ಉದ್ಘಾಟನೆ ಮಾಡಿ ಭಾರತ–ಜಪಾನ್ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
Modi, Takaichi to Virtually Inaugurate Maruti Suzuki's Kharkhoda Plant, Address India-Japan Economic
ನವದೆಹಲಿ, ಜುಲೈ 2 : ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್ನ ಪ್ರಧಾನಮಂತ್ರಿ ಸನಾಯೆ ತಕೈಚಿ ಅವರು ಗುರುವಾರ ಹರಿಯಾಣದ ಖಾರ್ಖೋಡಾದಲ್ಲಿರುವ ಮಾರುತಿ ಸುಜುಕಿ ಇಂಡಿಯಾದ ಹೊಸ ವಾಹನ ತಯಾರಿಕಾ ಘಟಕವನ್ನು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವು ಭಾರತ ಮತ್ತು ಜಪಾನ್ ನಡುವಿನ ವೃದ್ಧಿಯಾಗುತ್ತಿರುವ ಆರ್ಥಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಉಭಯ ದೇಶಗಳ ಪ್ರಧಾನಮಂತ್ರಿಗಳು ನವದೆಹಲಿಯಲ್ಲಿ ನಡೆಯಲಿರುವ ಭಾರತ–ಜಪಾನ್ ಜಂಟಿ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಕೈಚಿ ಅವರೊಂದಿಗೆ ಆಗಮಿಸಿರುವ ಜಪಾನ್ನ ಉನ್ನತ ಮಟ್ಟದ ಉದ್ಯಮಿಗಳ ನಿಯೋಗ ಹಾಗೂ ಭಾರತದ ಪ್ರಮುಖ ಉದ್ಯಮ ಸಂಸ್ಥೆಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಾರುತಿ ಸುಜುಕಿಯ ನಾಲ್ಕನೇ ಉತ್ಪಾದನಾ ಘಟಕವಾಗಿರುವ ಖಾರ್ಖೋಡಾ ಕಾರ್ಖಾನೆಗೆ ಒಟ್ಟು ₹35,000 ಕೋಟಿ ಹೂಡಿಕೆ ಯೋಜಿಸಲಾಗಿದೆ. ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿದ ಬಳಿಕ ವರ್ಷಕ್ಕೆ 10 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 21,000ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಕಂಪನಿ ತಿಳಿಸಿದೆ.
ಈ ಯೋಜನೆಯು ಉನ್ನತ ತಂತ್ರಜ್ಞಾನ ಆಧಾರಿತ ಉತ್ಪಾದನೆ, ಸ್ಥಿರ ಪೂರೈಕೆ ಸರಪಳಿಗಳು ಹಾಗೂ ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಉಭಯ ಸರ್ಕಾರಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟಕವು ಸಂಪೂರ್ಣವಾಗಿ ನವೀಕರಿಸಬಹುದಾದ ವಿದ್ಯುತ್ಶಕ್ತಿಯಿಂದ ಕಾರ್ಯನಿರ್ವಹಿಸಲಿದ್ದು, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಉತ್ಪಾದನಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಿದೆ. ಇದರಿಂದ ಪರಿಸರ ಸ್ನೇಹಿ ಹಾಗೂ ತಾಂತ್ರಿಕವಾಗಿ ಅತ್ಯಾಧುನಿಕ ಉತ್ಪಾದನಾ ಮಾದರಿಯನ್ನಾಗಿ ಈ ಘಟಕವನ್ನು ರೂಪಿಸಲಾಗಿದೆ ಎಂದು ಮಾರುತಿ ಸುಜುಕಿ ತಿಳಿಸಿದೆ.
ಭಾರತ–ಜಪಾನ್ ಜಂಟಿ ಆರ್ಥಿಕ ವೇದಿಕೆಯನ್ನು ಜಪಾನ್ ಎಕ್ಸ್ಟರ್ನಲ್ ಟ್ರೇಡ್ ಆರ್ಗನೈಸೇಶನ್ (JETRO), ಜಪಾನ್ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ (METI), ನ್ಯೂ ಎನರ್ಜಿ ಅಂಡ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಡೆವಲಪ್ಮೆಂಟ್ ಆರ್ಗನೈಸೇಶನ್ (NEDO), ಕೈದಾನ್ರೆನ್, ಜಪಾನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (JCCI), ಭಾರತದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT), ಭಾರತೀಯ ಕೈಗಾರಿಕಾ ಒಕ್ಕೂಟ (CII) ಹಾಗೂ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (FICCI) ಜಂಟಿಯಾಗಿ ಆಯೋಜಿಸಿವೆ.
ಈ ವೇದಿಕೆಯಲ್ಲಿ ಉಭಯ ದೇಶಗಳ ಹಿರಿಯ ನೀತಿ ನಿರ್ಧಾರಕರು ಹಾಗೂ ಕೈಗಾರಿಕಾ ವಲಯದ ಪ್ರಮುಖರು ಭಾಗವಹಿಸಿ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ವಿಸ್ತರಿಸುವ ಮಾರ್ಗಗಳ ಕುರಿತು ಚರ್ಚಿಸಲಿದ್ದಾರೆ.
ಇಂಧನ ಮತ್ತು ನಿರ್ಣಾಯಕ ಖನಿಜಗಳ ಕುರಿತ ವಿಶೇಷ ಅಧಿವೇಶನದಲ್ಲಿ ಪಶ್ಚಿಮ ಏಷ್ಯಾದಲ್ಲಿನ ಭೌಗೋಳಿಕ-ರಾಜಕೀಯ ಅನಿಶ್ಚಿತತೆ ಹಾಗೂ ಶುದ್ಧ ಇಂಧನದತ್ತ ಜಾಗತಿಕ ಪರಿವರ್ತನೆಯ ಹಿನ್ನೆಲೆಯಲ್ಲಿ ಇಂಧನ ಸಂಪನ್ಮೂಲಗಳು ಮತ್ತು ನಿರ್ಣಾಯಕ ಖನಿಜಗಳ ಸ್ಥಿರ ಪೂರೈಕೆ ಸರಪಳಿಯನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆಯಲಿದೆ.
ಸಾಂಪ್ರದಾಯಿಕ ಹೂಡಿಕೆಗಳ ಮಿತಿಯನ್ನು ಮೀರಿ, ಉನ್ನತ ಮೌಲ್ಯದ ಉತ್ಪಾದನೆ, ಕೈಗಾರಿಕಾ ಸ್ಥೈರ್ಯ ಮತ್ತು ಜಾಗತಿಕ ಪೂರೈಕೆ ಸರಪಳಿಗಳ ವೈವಿಧ್ಯೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಭಾರತ ಮತ್ತು ಜಪಾನ್ ತಮ್ಮ ದೀರ್ಘಕಾಲದ ಆರ್ಥಿಕ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 