ಮುಂಬೈ, ಅ 19: ದುಬೈನಲ್ಲಿರುವ ಡಿ-ಕಂಪನಿಗೆ ಸಾಲ ಕೊಟ್ಟ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಶನಿವಾರ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿ ಹೆಚ್ ಎಫ್ ಎಲ್) ಕಚೇರಿಗಳ ಮೇಲೆ ದಾಳಿ ನಡೆಸಿತು.
ಮುಂಬೈ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿಗೆ ಸಂಬಂಧಿಸಿದ್ದು ಎಂದು ಹೇಳಲಾದ ಡಿಎಚ್ ಎಫ್ ಎಲ್ ನ 14 ಕಛೇರಿಗಳ ಮೇಲೆ ತನಿಖಾ ಸಂಸ್ಥೆ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.
ಬ್ಯಾಂಕಿಂಗ್ಯೇತರ ಹಣಕಾಸು ಸಂಸ್ಥೆಯಾಗಿರುವ ಡಿ ಹೆಚ್ ಎಲ್ ಎಫ್ ಸನ್ಲಿಂಕ್ ರಿಯಲ್ ಎಸ್ಟೇಟ್ ಖಾಸಗಿ ಸಂಸ್ಥೆಗೆ ನೀಡಿದ್ದ 2, 186 ಕೋಟಿ ರೂಪಾಯಿ ಸಾಲ, ದುಬೈನಲ್ಲಿರುವ ಡಿ- ಕಂಪನಿಗೆ ತಲುಪಿರುವ ಅಂಶ ಕುರಿತು ಜಾರಿ ನಿರ್ದೇಶನಾಲಯ ತನಿಖೆಯ ನಂತರ ಈ ಹಣಕಾಸು ಸಂಸ್ಥೆಯ ವಹಿವಾಟಿನ ಮೇಲೆ ಜಾರಿ ನಿರ್ದೇಶನಾಲಯ ಹದ್ದಿನ ಕಣ್ಣಿರಿಸಿತ್ತು.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಇಕ್ಬಾಲ್ ಮಿರ್ಚಿಯ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆಗೆ ಜಾರಿ ನಿರ್ದೇನಾಲಯ ಕಳೆದ ಮಂಗಳವಾರ ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರಿಗೆ ಸಮನ್ಸ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇಡಿ ಅಧಿಕಾರಿಗಳ ಪ್ರಕಾರ, ಪಟೇಲ್ ಅವರ ಮಿಲೇನಿಯಮ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ 2006-07ರಲ್ಲಿ ಸೀಜಯ್ ಹೌಸ್ ಎಂಬ ಕಟ್ಟಡವನ್ನು ನಿಮರ್ಿಸಿದೆ. ಈ ಕಟ್ಟಡದ ಮೂರನೇ ಮತ್ತು ನಾಲ್ಕನೇ ಮಹಡಿಗಳನ್ನು ಮಿರ್ಚಿಯ ಪತ್ನಿ ಹಜ್ರಾ ಇಕ್ಬಾಲ್ಗೆ ವರ್ಗಾಯಿಸಲಾಗಿದೆ. ಕಟ್ಟಡದ ಗೋಪುರವನ್ನು ನಿರ್ಮಿಸಿದ ಭೂಮಿ ಮಿರ್ಚಿಯ ಒಡೆತನದಲ್ಲಿದೆ ಎಂದು ಹೇಳಲಾಗುತ್ತದೆ. ಅಕ್ರಮ ಹಣ ಸಾಗಾಣಿಕೆ, ಮಾಧಕ ವಸ್ತುಗಳ ಸಾಗಾಣಿಕೆ ಹಾಗೂ ಸುಲಿಗೆ ಅಪರಾಧಗಳ ಆದಾಯದಿಂದ ಈ ಭೂಮಿಯನ್ನು ಖರೀದಿಸಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು.