ಜಡರಾಮಕುಂಟಿ ಮಲ್ಲಮ್ಮನ ಪವಾಡ

 ಜಡರಾಮಕುಂಟಿ ಮಲ್ಲಮ್ಮನ ಪವಾಡ  Miracle of Jadaramakunti Mallamma

ಲೋಕದರ್ಶನ ವರದಿ 

ಜಡರಾಮಕುಂಟಿ ಮಲ್ಲಮ್ಮನ ಪವಾಡ  

ಈ ಹೆಸರು ಓದಿದ ತಕ್ಷಣ ಮಲ್ಲಮ್ಮ ಎಂದರೆ ಹೇಮರಡ್ಡಿ ಮಲ್ಲಮ್ಮ, ಬೆಳವಡಿ ಮಲ್ಲಮ್ಮ ಎಂದು ತಿಳಿಯುವುದು ಸಹಜ. ಆದರೆ ನಾನು ಹೇಳಲು ಹೊರಟಿರುವುದು “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ಮಾತನ್ನು ಸುಳ್ಳುಮಾಡಿ “ಹೆಣ್ಣೊಂದು ಮನಸ್ಸು ಮಾಡಿದರೆ ಕಲಿಯದಿದ್ದರೂ ಶಾಲೆಯೊಂದು ತೆರೆದಂತೆ” ಎಂಬ ಮಾತನ್ನು ತನ್ನ ಸಾಧನೆಯ ಮೂಲಕ ಮಾಡಿ ತೊರಿಸಿದ ಶ್ರೀಮತಿ ಮಲ್ಲಮ್ಮ ಚನಬಸಪ್ಪ ಜಡರಾಮಕುಂಟಿ ಅವರ “ಮಲ್ಲಮ್ಮನ ಪವಾಡ” ದರ್ಶನದ ಕಿರು ಪರಿಚಯ. ಇದು ನಮ್ಮ ಗ್ರಾಮೀಣ ಮತ್ತು ನಗರದಲ್ಲಿ ಕಲಿತ ಮತ್ತು ಕಲಿಯದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಬಹುದು. ಮಲ್ಲಮ್ಮ ತಾನೊಬ್ಬ ನಿವೃತ್ತ ಬಡ ಮಾಸ್ತರ ಹೆಂಡತಿಯಾಗಿ ಆಗತಾನೆ ಬಾಗಲಕೋಟೆಗೆ ಬಂದು ನೆಲೆಸುತ್ತಾಳೆ. ಗಂಡ ತನ್ನ ನಿವೃತ್ತಿ ಸಂಬಳದಲ್ಲಿ ಕೇವಲ ಮೂರು ಸಾವಿರ ರೂಪಾಯಿ ಕೊಟ್ಟು ಮೂರು ಗುಂಟೆ ಜಾಗ ಹಿಡಿದದ್ದೇ ದೊಡ್ಡ ಸಾಧನೆ. ಈ ಮೂರು ಗುಂಟೆ ಜಾಗದ ಜೊತೆಯಲ್ಲಿ ಮೂರು ಗಂಡು ಮತ್ತು ಮೂರು ಜನ ಹೆಣ್ಣು ಮಕ್ಕಳನ್ನು ಚನಬಸಪ್ಪ ಮಲ್ಲಮ್ಮನ ಮಡಿಲಿಗೆ ಹಾಕಿದ್ದರು. ಅಷ್ಟೋತ್ತಿಗಾಗಲೇ ಹಿರಿಯ ಮಗಳು ಸುಶೀಲಮ್ಮ ಸ್ಟಾಪ್‌ನರ್ಸ ಆಗಿ ಸರಕಾರಿ ನೌಕರಿ ಹಿಡಿದು ಅವರ ಸಹೊದ್ಯೋಗಿ ಜೊತೆಯಲ್ಲಿ ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿದ್ದಳು.  ನಾಲ್ಕೈದು ವರ್ಷದಲ್ಲಿ ಎರಡು ಮುದ್ದಾದ ಗಂಡು ಮಕ್ಕಳನ್ನು ಹೆತ್ತು, ಮಲ್ಲಮ್ಮನ ಮಡಿಲಿಗೆ ಹಾಕಿ ಲಾಲನೆ ಪಾಲನೆ ಮಾಡುವ ಜವಾಬ್ದಾರಿ ಕೂಡ ವಹಿಸಿದ್ದಳು. ಇತ್ತ ಹಿರಿಯ ಮಗ ರಾಜಕುಮಾರ ಆರ್ಮಿ ಸೇರಿದ್ದ, ಏನೋ ಆಸೆಯನ್ನು ಇಟ್ಟುಕೊಂಡಿದ್ದ ಮಲ್ಲಮ್ಮನಿಗೆ ಅದು ಕೂಡ ನಿರಾಶೆಯಾಗಿತ್ತು. ಮಗನಿಗೆ ಬರುವ ಸಂಬಳ ಕಡಿಮೆ, ಆದರೂ ಅವನ ಮದುವೆ ಮಾಡಿ ಅವರ ಹೊಣೆಯನ್ನು ತಾನೆ ಹೊತ್ತುಕೊಂಡಿದ್ದಳು.    

ಈ ಎಲ್ಲ ಸಂಸಾರ ಜಂಜಾಟ ಹೊತ್ತುಕೊಂಡು ಬಾಗಲಕೋಟೆ ಶಹರದಲ್ಲಿ ಮನೆ ಮಾಡಿದ್ದಳು. ಊರುಗೋಲು ಹಿಡಿದುಕೊಂಡು ನಡೆಯುವ ಗಂಡ ಒಂದು ಕಡೆಯಾದರೆ, ಮತ್ತೊಂದು ಕಡೆ ಇನ್ನೂ ಬಾಲ್ಯಾವಸ್ಥೆಯಲ್ಲಿರುವ ನಾಲ್ಕು ಜನ ಮಕ್ಕಳ, ಇಬ್ಬರು ಮೊಮ್ಮಕ್ಕಳ ಶಿಕ್ಷಣ ಮತ್ತು ಅವರ ಭವಿಷ್ಯ ಮಲ್ಲಮ್ಮನ ಹೆಗಲಿಗೆ ಬಿದ್ದಿತ್ತು. ಎದೆ ಗುಂದದ ಮಲ್ಲಮ್ಮ ಒಂದಿಷ್ಟು ಹಣದಲ್ಲಿ ಬಾಗಲಕೋಟೆ ಮಾರ್ಕೆಟಿಗೆ ಹೋಗಿ ತಗಡಿನ ಸೀಟು ಮತ್ತು ಸಿಮೆಂಟ ಇಟ್ಟಂಗಿ ತಂದು ಹತ್ತು ಹತ್ತು ಅಂಗುಲದ ಚಿಕ್ಕದೊಂದು ತಗಡಿನ ಸೆಡ್ ಹಾಕಿಕೊಂಡಳು. ಉಳಿದ ಹಣದಲ್ಲಿ ಕೆರೂರ ಸಂತೆಗೆ ಹೋಗಿ ಒಂದು ಎಮ್ಮಿ ಖರೀದಿ ಮಾಡಿದಳು. ಮಲ್ಲಮ್ಮ ದಿನನಿತ್ಯ ಗಂಡ ಮತ್ತು ಆರು ಜನ ಮಕ್ಕಳಿಗೆ ಅಡಿಗೆ ಮಾಡಿಕೊಂಡು ರೈತರ ಹೊಲಗಳಿಗೆ ಹೋಗಿ ಮೇವ  ತರುವುದು ಮತ್ತು ಎಮ್ಮೆ ಕಾಯುವ ದಿನನಿತ್ಯದ ಕಾಯಕ ಅವಳದ್ದಾಗಿತ್ತು. ಮಕ್ಕಳು ಮತ್ತು ಮೊಮ್ಮಕ್ಕಳು ತಾಯಿ ಅಜ್ಜಿ  ಹಿಂಡಿದ ಹಾಲನ್ನು ಮನೆ ಮನೆಗಳಿಗೆ ಕೊಟ್ಟು ಬರುವ ಜವಾಬ್ದಾರಿ ಅವರದ್ದಾಗಿತ್ತು.   

ಈ ಶೆಡ್ಡಿಗೆ ಕೆರೆಂಟ್ ಕೂಡ ಇರಲಿಲ್ಲ ಆದರೂ ಚಿಮಣಿ ಎಣ್ಣೆ ದೀಪದಲ್ಲಿ ಮಕ್ಕಳ ಶಿಕ್ಷಣದ ಭವ್ಯ ಕನಸಿನೊಂದಿಗೆ ಮಲ್ಲಮ್ಮ ದಿನನಿತ್ಯ ಜೀವನ ಸಾಗಿಸಿದ್ದಳು. ಆಗ ಮೂರನೇ ಮಗಳು ಉಮಾದೇವಿ ಹತ್ತನೇ ತರಗತಿ, ನಾಲ್ಕನೆ ಮಗ ಉದಯಕುಮಾರ ಎಂಟನೆ ತರಗತಿ, ಐದನೇ ಮಗ ದೀಲೀಪಕುಮಾರ ಆರನೇ ತರಗತಿ, ಕೊನೆಯ ಮಗಳು ವೈಜಯಂತಿಮಾಲಾ ನಾಲ್ಕನೆ ತರಗತಿ ಓದುತ್ತಿದ್ದರು. ಇನ್ನು ಮೊಮ್ಮಕ್ಕಳಾದ ಮಂಜುನಾಥ ಮತ್ತು ನಾಗರಾಜ ಶಾಲೆಗೆ ಹೋಗದ ಚಿಕ್ಕಮಕ್ಕಳು. ಇಂತ ಪರಿಸ್ಥಿತಿಯಲ್ಲಿ ಮಲ್ಲಮ್ಮ ದೀರೆಯಾಗಿ ಬೆಳವಡಿ ಮಲ್ಲಮ್ಮನ ಹಾಗೆ ಟೊಂಕಕಟ್ಟಿ ನಿಂತು ಮನೆಯ ಜವಾಬ್ದಾರಿ ನಿರ್ವಹಿಸಿದ್ದಳು. ನಾನು ಹೇಳುತ್ತಿರುವ ಈ ಇತಿಹಾಸ 1980ರದ್ದು. ಈಗ 2025 ಇವತ್ತು ಈ ಮನೆಯ ಇತಿಹಾಸವೇ ಬೇರೆ, ಯಾರೂ ಉಹಿಸಲಸಾಧ್ಯವಾದ ಸಾಧನೆಯ ಮಹಲಿಗೆ ಅಂದು ಅಡಿಪಾಯ ಹಾಕಿದ ಮಲ್ಲಮ್ಮಳದು ಒಂದು ಪವಾಡವೇ ಸರಿ. ಇವತ್ತು ಈ ಮನೆ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು, ಗಿರಿಮಕ್ಕಳು ಸೇರಿ 39 ಜನರಿಂದ ಕೂಡಿದ ತುಂಬು ಕುಟುಂಬ. ಅದರಲ್ಲಿ 9 ಜನ ಇಂಜನೀಯರ್, ಒಬ್ಬರು ಎಂ. ಬಿ. ಎ., ಒಬ್ಬರು  ಐ. ಐ. ಟಿಯಲ್ಲಿ ಎಂ, ಟೆಕ್‌., ಮೂವರು ಪಿ. ಎಚ್‌. ಡಿ. ಡಾಕ್ಟರ್‌. ಒಬ್ಬರು ದಂತ ವೈದ್ಯ, ಒಬ್ಬರು ಪಿಜಿಯೊತೆರೆಫಿ, ಇಬ್ಬರು ಆರ್ಮಿ, ಇಬ್ಬರು ಸ್ಟಾಪ್ ನರ್ಸ, ಒಬ್ಬರು ಎಂ. ಎ., ಬಿ. ಎಡ್‌., ಬಿ. ಎ. ಬಿ.ಎಡ್ ಪದವಿಗಳನ್ನು ಪಡೆದುಕೊಂಡರೆ, ಇನ್ನುಳಿದವರು ಕಲಿಯುತ್ತಿದ್ದಾರೆ. ಇವರೆಲ್ಲರ ಶಿಕ್ಷಣದ ಮೂಲ ಮಲ್ಲಮ್ಮ. ತಾನು ಕಲಿಯದಿದ್ದರೂ ಪ್ರತಿಯೊಬ್ಬರ ಕೈಯಲ್ಲಿ ಡಿಗ್ರಿ ಸರ್ಟಿಪಿಕೇಟ್ ಕೊಡಿಸಿದ ಅಕ್ಷರದಾತೆ.  

  

      ಸುಶೀಲಮ್ಮ ಮಲ್ಲಮ್ಮನ ಮೊದಲ ಮಗಳು. ಇವಳು ನರ್ಸಕೋರ್ಸ ಮುಗಿಸಿ ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಪ ನರ್ಸ ಆಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿದ್ದಾರೆ. ಇವರ ಪತಿ ಹೇಮಗಿರಿಯಪ್ಪ ಕೂಡ ಸ್ಟಾಪನರ್ಸ ಆಗಿ ನಿವೃತ್ತಿ ಹೊಂದಿದ್ದರು. ಅವರು ಈಗ ಇರುವದಿಲ್ಲ. ಅವರ ಇಬ್ಬರು ಮಕ್ಕಳಲ್ಲಿ ಡಾ. ಮಂಜುನಾಥ ಬಿ.ಡಿ.ಎಸ್‌. ಎಮ. ಡಿ. ಮಾಡಿ ಪಿ.ಎಚ್‌. ಡಿ. ಕೂಡ ಮಾಡಿದ್ದಾರೆ. ಈಗ ಅವರು ಶಿರಡಿ ಹತ್ತಿರ ಸಂಗಮನೇರದಲ್ಲಿ ಎಸ್‌.ಎಮ್‌.ಬಿ.ಟಿ. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದಾರೆ. ಇವರ ಪತ್ನಿ ವೀಣಾ ಇಂಜನೀಯರಿಂಗ ಪದವಿ ಮಾಡಿದ್ದಾಳೆ. ಇವರ ಇಬ್ಬರು ಮಕ್ಕಳು ಓದುತ್ತಿದ್ದಾರೆ. ಡಾ. ಮಂಜುನಾಥ ಬಾಗಲಕೋಟೆ ಮತ್ತು ಗದಗದಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ. ಸುಶೀಲಮ್ಮನ ಎರಡನೇ ಮಗ ನಾಗರಾಜ ಇಂಜನೀಯರಿಂಗ ಪದವಿ ಪಡೆದುಕೊಂಡು ಜಮಖಂಡಿಯ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇವನ ಹೆಂಡತಿ ಮಹಾದೇವಿ ಎಮ್‌. ಎ., ಬಿ.ಎಡ್‌. ಪದವಿ ಪಡೆದು, ಕೆಲವು ವರ್ಷ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ, ಈಗ ಅರಿವೆ ಸ್ವಂತ ಉದ್ಯೋಗ ವ್ಯಾಪಾರ ಕೈಗೊಂಡಿದ್ದಾಳೆ. ಇವರಿಗೂ ಮೂರು ಜನ ಮಕ್ಕಳು ಓದುತ್ತಿದ್ದಾರೆ. ಇವರು ಬಾಗಲಕೋಟೆಯಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ.  

  

ರಾಜಕುಮಾರ ಮಲ್ಲಮ್ಮನ ಎರಡನೆ ಮಗ. ಇವನು ಭಾರತೀಯ ಸೈನ್ಯದಲ್ಲಿ ಇದ್ದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ, ಅಲ್ಲಿಂದ ಬಂದು ಹಟ್ಟಿ ಚಿನ್ನದ ಗಣಿಯಲ್ಲಿ ಸೇವೆ ಮಾಡಿ ಈಗ ಸ್ವಯಂ ನಿವೃತ್ತಿ ಪಡೆದುಕೊಂಡಿರುತ್ತಾನೆ. ಅವನ ಮಗ ನಿಖಿಲಕುಮಾರ ಕೂಡ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಅವನ ಹೆಂಡತಿ ಪ್ರಭಾ ನರ್ಸಿಂಗ್ ಕೋರ್ಸ ಮುಗಿಸಿ, ಮುಧೋಳದ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಇವರಿಗೆ ಇಬ್ಬರು ಮಕ್ಕಳು. ರಾಜಕುಮಾರನ ಮಗಳು ಶಾಂತಕುಮಾರಿ ಡಿಪ್ಲೋಮಾ ಮುಗಿಸಿದ್ದಳು. ಅವಳ ಪತಿ ಭೀಮರಾಯ್ ಡಿಪ್ಲೋಮಾ ಮುಗಿಸಿ ಗೌರಿಬಿದನೂರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಅಲ್ಲಿಯೇ ವಾಸವಾಗಿದ್ದಾರೆ. ಇವರಗೂ ಇಬ್ಬರು ಮಕ್ಕಳು. ರಾಜಕುಮಾರನ ಇನ್ನೊಬ್ಬ ಮಗ ಸಚಿನಕುಮಾರನ ಕಳೆದ ಒಂದು ವರ್ಷದ ಹಿಂದೆ ತೀರಿಕೊಂಡನು. ಇವರು ಮುಧೋಳದಲ್ಲಿ “ಮನೆ ಕಟ್ಟಿಕೊಂಡು ತುಂಬು ಜೀವನ ನಡೆಸುತ್ತಿದ್ದಾರೆ  

ಮಲ್ಲಮ್ಮನ ಮೂರನೇ ಮಗಳು ಡಾ. ಉಮಾದೇವಿ, ಪ್ರಾಣಿಶಾಸ್ತ್ರ ವಿಷಯದಲ್ಲಿ ಎಂ. ಎಸ್‌. ಸಿ. ಮತ್ತು ಪಿ. ಎಚ್‌. ಡಿ. ಪದವಿ ಪಡೆದು, ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಶಿರಾದಲ್ಲಿ 7 ವರ್ಷ, ಹುಬ್ಬಳ್ಳಿಯಲ್ಲಿ 13ವರ್ಷ, ಈಗ ದಾವಣಗೇರಿಯಲ್ಲಿ ಸಹ ಪ್ರಾಧ್ಯಾಪಕಿ ಹಾಗು ವಿಭಾಗದ ಮುಖ್ಯಸ್ಥಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಇದುವರೆಗೆ ತಮ್ಮ ವಿಷಯದಲ್ಲಿ 25ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ರಚಿಸಿ, ರಾಷ್ಟ್ರೀಯ ಮತ್ತು ಅಂತರಾಷ್ಟೀಯ ವಿಚಾರ ಸಂಕೀರಣಗಳಲ್ಲಿ ಭಾಗವಹಿಸಿ, ಪ್ರಬಂಧಗಳನ್ನು ಮಂಡಿಸಿದ್ದಾರೆ. ಈ ಪ್ರಬಂಧಗಳು ಅನೇಕ ಯು, ಜಿ, ಸಿ. ಅನುಮೋದಿತ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿರಾದಲ್ಲಿ 7 ವರ್ಷ ಸೇವೆ ಸಲ್ಲಿಸಿದ್ದರು, ಇವರು ಆ ಕಾಲೇಜಿನ ಎನ್‌. ಎಸ್‌. ಎಸ್‌. ಘಟಕದಲ್ಲಿ ಸಲ್ಲಿಸಿದ ಸೇವೆಗೆ ರಾಜ್ಯ ಎನ್‌. ಎಸ್‌. ಎಸ್‌. ಅತ್ಯುತ್ತಮ ಅಧಿಕಾರಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಇವರ ಸಾಮಾಜಿಕ ಮತ್ತು ಸಾಹಿತ್ಯಿಕ ಸೇವೆಯನ್ನು ಗುರುತಿಸಿ, ಗದಗ ದಲಿತ ಸಾಹಿತ್ಯ ಅಕಾಡೆಮಿ, ಇವರಿಗೆ ‘ಮಾತೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ’, ಮಹಾರಾಷ್ಟ್ರದ ನಾಶಿಕ್ ದರ​‍್ಣಕರ ಬಾಳಶಾಸ್ತ್ರಿ ಜಂಬೇಕರ ಪತ್ರಿಕಾ ಸಂಸ್ಥೆ ‘ಸ್ವಯಂಸಿದ್ದ ರಾಷ್ಟ್ರೀಯ ಪುರಸ್ಕಾರ-25’ ಮತ್ತು ಗ್ಲೋಬಲ್ ವರ್ಡ ರಿಕಾರ್ಡ ಸಂಸ್ಥೆಯವರು ‘ಜಿ. ಡಬ್ಲು. ಆರ್‌. ಎಪಿಜೆ ಅಬ್ದುಲ್ ಕಲಾಂ ಅವಾರ್ಡ ಮತ್ತು ಜಿ. ಡಬ್ಲು. ಆರ್‌. ಆಯಕಾನಿಕ್ ಇಂಟರ್ ನ್ಯಾಷನಲ್ ಅವಾರ್ಡ’ ಕೊಟ್ಟು ಗೌರವಿಸಿದ್ದಾರೆ. ಇವರ ಪತಿ ಡಾ. ಸುರೇಶ (ಡಾ. ಬಿ. ಎಸ್‌. ಭಜಂತ್ರಿ) ಎಂ. ಎ., ಎಂ. ಫಿಲ್‌., ಪಿ.ಎಚ್‌.ಡಿ., ಪದವಿ ಪಡೆದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕ ಹಾಗು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೂ ಎನ್‌. ಎಸ್‌. ಎಸ್‌. ಸೇವೆಯಲ್ಲಿ ವಿಶ್ವವಿದ್ಯಾಲಯ ಮಟ್ಟದ, ರಾಜ್ಯಮಟ್ಟದ ಮತ್ತು ರಾಷ್ಟ್ರ ಮಟ್ಟದ ಅತ್ಯುತ್ತಮ ಅಧಿಕಾರಿ ಪ್ರಶಸ್ತಿ ಬಂದಿರುತ್ತವೆ. ಇವರ ಮಗ ವರುಣ ಐ. ಐ. ಟಿ. ಖರಗಪುರದಲ್ಲಿ ಕೃತಕ ಬುದ್ದಿಮತ್ತೆಯಲ್ಲಿ ಎಂ. ಟೆಕ್ ಮುಗಿಸಿ, ಈಗ ಹೈದ್ರಾಬಾದದ ಮೈಕ್ರಾನ್ ಕಂಪನಿಯಲ್ಲಿ ಇಂಜನೀಯರಾಗಿ ಸೇವೆ ಸಲ್ಲಿಸುತಿದ್ದಾನೆ. ಮಗಳು ವರ್ಷಾ ಬೆಂಗಳೂರಿನ ಸೇಂಟ್ ಕ್ಲಾರೇಟ್ ಕ್ರಿಷನ್ ಕಾಲೇಜಿನಲ್ಲಿ ಬಿ. ಎ. ಪದವಿ ಓದುತ್ತಿದ್ದಾಳೆ. ಪತಿ-ಪತ್ನಿ ಧಾರವಾಡದಲ್ಲಿ ಪರಿಸರ ಸ್ನೇಹಿ ಮನೆ ಕಟ್ಟಿ ಸುಂದರ ಸುಖ ಜೀವನ ನಡೆಸುತ್ತಿದ್ದಾರೆ. ಮಲ್ಲಮ್ಮ 80ನೇ ಇಳಿ ವಯಸ್ಸಿನಿಂದಲೂ ಮಗಳ ಮನೆಯಲ್ಲಿ ಹತ್ತು ವರ್ಷ ಇದ್ದರು, ಅವರ ಮುಪ್ಪಾವಸ್ಥೆಯಲ್ಲಿ ಜೊಪಾನ ಮಾಡಿದ ಕೀರ್ತಿ ಇವರ ಕುಟುಂಬಕ್ಕೆ ಸಲ್ಲುತ್ತದೆ.    

ಉದಯಕುಮಾರ ನಾಲ್ಕನೆ ಮಗ, ಮೊದಲು ಡಿಪ್ಲೋಮಾ ಪದವಿ ಪಡೆದು ಪುಣೆಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ, ಇಂಜನೀಯರಿಂಗ್ ಮತ್ತು ಎಂ. ಬಿ. ಎ ಪದವಿ ಪಡೆದು, ಈಗ ಮಾದೇನ್ ಅಲುಮಿನಿಯಮ್ ಸೌದಿ ಅರೇಬಿಯಾದಲ್ಲಿ ಸರಕಾರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಹೆಂಡತಿ ಯೋಗಿತಾ ಕೂಡ ಬ್ಯೂಟಿ ಪಾರ್ಲರ ಮಾಡಿ ಸಂಪಾದನೆ ಮಾಡುತ್ತಿದ್ದಾಳೆ. ಇವರ ಮಗ ಅಭಿಷೇಕ ಕೂಡ ಡಿಪ್ಲೋಮಾ ಪದವಿ ಪಡೆದು ತಂದೆಯ ಜೊತೆಯಲ್ಲಿ ಸೌದಿ ಅರೇಬಿಯಾದ ಅರೆನ್ ಸ್ಟೀಲ್ ಸರಕಾರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇವರ ಮಗಳು ಪ್ರೀಯಾ ಎಸ್‌. ಡಿ. ಎಮ್‌. ಉಜರೆಯಲ್ಲಿ ನ್ಯಾಚರೋಪಥಿ ಓದುತ್ತಿದ್ದಾಳೆ. ಉದಯಕುಮಾರ ಪುಣೆಯಲ್ಲಿ ಎರಡು ಫ್ಲಾಟ ಖರಿದಿಸಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ.  

ದೀಲೀಪಕುಮಾರ ಮಲ್ಲಮ್ಮನ ಮೂರನೆ ಮಗ. ಈತ ಡಿಪ್ಲೋಮಾ ಪದವಿ ಪಡೆದು ಖಾಸಗಿ ಕಂಪನಿಯಲ್ಲ ಸೇವೆ ಆರಂಭಿಸಿ, ನಂತರ ಇಂಜನೀಯರಿಂಗ್ ಪದವಿ ಪಡೆದುಕೊಂಡು ಈಗ ಮಸ್ಕತ್ತಿನ ಒಮನ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಧಾ-ರುಕ್ಮಿಣಿ ಇಬ್ಬರು ಪತ್ನಿಯರು, ಮೊದಲ ಪತ್ನಿ ರಾಧಾ ಬಿ, ಎ, ಪದವಿ ಪಡೆದು ಗಂಡನ ಜೊತೆ ಮಸ್ಕತ್ತಿನಲ್ಲಿ ವಾಸಮಾಡುತ್ತಾಳೆ. ಇವರಿಗೆ ಒಬ್ಬಳು ಸರ್ವಲಕ್ಷ್ಮಿ ಮಗಳು ಓದುತ್ತಿದ್ದಾಳೆ. ಇನ್ನು ರುಕ್ಮಿಣಿ ಎಂ. ಎ., ಬಿ, ಎಡ್ ಪದವಿ ಪಡೆದು ಕನ್ನಡ ಉಪನ್ಯಾಸಕಿಯಾಗಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ, ದೀಲೀಪಕುಮಾರ ತಂದೆ ಹಿಡಿದ ಜಾಗದಲ್ಲಿ ಮನೆ ಕಟ್ಟಿರುತ್ತಾನೆ, ಈ ಮನೆಯಲ್ಲಿ ರುಕ್ಮಿಣಿ ಅತ್ತೆ ಮಲ್ಲಮ್ಮನ ಜೊತೆಯಲ್ಲಿ ವಾಸಿಸುತ್ತಿದ್ದಳು.   

ಮಲ್ಲಮ್ಮನ ಕೊನೆಯ ಮಗಳು ವೈಜಯಂತಿಮಾಲಾ ಬಿ. ಎ. ಬಿ. ಎಡ್‌. ಪದವಿ ಪಡೆದು, ಪತಿ ಹೆಗ್ಗೆರೆಪ್ಪ ಅವರ ಜೊತೆಯಲ್ಲಿ ಮಧ್ಯಪ್ರದೇಶದ ಇಂದೋರದಲ್ಲಿ ವಾಸಮಾಡುತ್ತಾರೆ. ಇವರ ಪತಿ ಡಿಪ್ಲೋಮಾ ಮುಗಿಸಿ ಇಂದೋರದ ಖಾಸಗಿ ಕಂಪನಿಯಲ್ಲಿ ಇಂಜನೀಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಗ ದರ್ಶನ್ ಇಂಜನೀಯರಿಂಗ ಪದವಿ ಪಡೆದು, ಪುಣೆಯಲ್ಲಿ ಹೊರದೇಶದ ಸಾಪ್ಟವೇರ್ ಖಾಸಗಿ ಕಂಪನಿಯಲ್ಲಿ ಸೇವೆ ಮಾಡುತ್ತಿದ್ದಾನೆ. ಎರಡನೆಯ ಮಗ ಹರ್ಷಿತ್ ಇಂಜನೀಯರಿಂಗ ಪದವಿ ಓದುತ್ತಿದ್ದಾನೆ. ವೈಜಯಂತಿಮಾಲಾ ದಂಪತಿ ಕೂಡ ಬಾಗಲಕೋಟೆಯಲ್ಲಿ ಮನೆ ಕಟ್ಟಿ ತುಂಬು ಜೀವನ ನಡೆಸುತ್ತಿದ್ದಾರೆ.  

ಮಲ್ಲಮ್ಮ ಇಂತಹ ತುಂಬು ಕುಟುಂಬದ ಹಿರಿಯ ಜೀವ. ಕೇವಲ ಹತ್ತಂಗುಲ ಸಿಮೆಂಟ್ ಸೀಟ್ ಕೊಠಡಿಯಲ್ಲಿ ಎಮ್ಮಿಗೆ ಮೇವು, ಉರುವಲು ಒಣಕಟ್ಟಿಗೆ ಒಟ್ಟಿಕೊಂಡು, ಮಕ್ಕಳು ಮೊಮ್ಮಕ್ಕಳನ್ನು, ವಯಸ್ಸಾದ ಪತಿಯನ್ನು ಜೋಪಾನ ಮಾಡುತ್ತ ಮಾದರಿ ಜೀವನ ಮಾಡಿದ ಗಟ್ಟಿಗಿತ್ತಿ.  ಪ್ರತಿಯೊಬ್ಬ ಮಕ್ಕಳಲ್ಲಿ, ಮೊಮ್ಮಕ್ಕಳಲ್ಲಿ ಹೆಣ್ಣು - ಗಂಡು ಬೇದಭಾವ ಎನಿಸದೆ, ಕೇವಲ ಎಮ್ಮಿ ಹಾಲಿನಿಂದ ಉತ್ತಮ ಶಿಕ್ಷಣ ಕೊಡಿಸಿ ಎಲ್ಲರನ್ನೂ ಒಳ್ಳೆಯ ವ್ಯಕ್ತಿಗಳನ್ನಾಗಿ ಕಟೆದು ಮೂರ್ತಿಯನ್ನಾಗಿಸಿದ ಶಿಲ್ಪಿ ಮಲ್ಲಮ್ಮ. ತಾನು ಕಲಿಯದಿದ್ದರೂ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಿದ ಅಕ್ಷರತಾಯಿ ಸಾವಿತ್ರಿಬಾಯಿ ಪುಲೆ. ಮಲ್ಲಮ್ಮ ತನ್ನ ಕಿರಿಯ ಮಗ ದೀಲೀಪಕುಮಾರ ಜೊತೆಯಲ್ಲಿ ಎರಡು ಸಲ ಮಸ್ಕತ್ತಿಗೆ ಹೋಗಿ ಬಂದಿದ್ದಳು, ಮಕ್ಕಳು ಯಾವ ಪದವಿ ಪಡೆದಿದ್ದಾರೆ ಎಂಬ ಕಲ್ಪನೆ ಕೂಡ ಅವಳಿಗೆ ತಿಳಿಯದು. ಮಕ್ಕಳು ತನ್ನಂತೆ ಅನಕ್ಷರಸ್ಥರಾಗಬಾರದೆಂಬ ಸದುದ್ದೇಶ ಅವಳದು.  ಒಮ್ಮೆ ಮಲ್ಲಮ್ಮನ ಮಗಳು ಉಮಾದೇವಿ  ಎಂ. ಎಸ್‌. ಸಿ. ದ್ವಿತೀಯ ರಾ​‍್ಯಂಕ ಪಡೆದು ಮನೆಗೆ ಬಂದು ಎಮ್ಮಿ ಸೆಗಣಿ ಬಳೆದು ತುಂಬಿದ ಬುಟ್ಟಿ ತೆಲೆಮೇಲೆ ಹೊತ್ತುಕೊಂಡು ಹೊಗುವಾಗ ನೆರೆಮನೆಯಲ್ಲಿ ವಾಸಿಸುತ್ತಿದ್ದ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನ ಭೂಗರ್ಭಶಾಸ್ತ್ರ ವಿಭಾಗದ  ಪ್ರಾಧ್ಯಾಪಕರಾದ ಶ್ರೀ ಯಲಿ ಗುರುಗಳು ” ಮಲ್ಲಮ್ಮ ನಿನ್ನ ಮಗಳು ಎನ್ ಕಲತಾಳಂತ ತಿಳ್ಕೊಂಡಿ ನನ್ನಷ್ಟ ಕಲತಾಳ ಅಕಿಗೆ ಇಂತಾ ಕೆಲಸಾ ಹೇಳಬ್ಯಾಡ’ ಎಂದು ತಿಳಿಸಿಕೊಟ್ಟಿದ್ದರು, ಅಂತ ಮುಗ್ದೆ ಮಲ್ಲಮ್ಮ. ತಾನು ಹರಕು ಸೀರೆ ಉಟ್ಟರೂ ಪರವಾಗಿಲ್ಲ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗಬಾರದೆಂದು ತಿಳಿದವಳು. ಇಬ್ಬರು ಹೆಣ್ಣು ಮಕ್ಕಳು ಅಂತರ್‌ಜಾತಿ ವಿವಾಹ ಮಾಡಿಕೊಂಡರೂ ಯಾವುದೇ ಜಾತಿ ಬೇಧಭಾವ ಎನಿಸದೆಯೆ ಮಕ್ಕಳು-ಅಳಿಯಂದಿರು-ಮೊಮ್ಮಕ್ಕಳು-ಮರಿಮೊಮ್ಮಕ್ಕಳು ಎಲ್ಲರನ್ನೂ ಒಂದೇ ಮನೆಯ ಮಕ್ಕಳಂತೆ ಕಂಡು ಅವರ ಅಭ್ಯುದಯದಲ್ಲಿ ಸಂತಸ ಕಂಡು, ಆಲದಮರದಂತೆ ನೆರಳು ನೀಡಿದ ಮಹಾಮಾತೆ ಮಲ್ಲಮ್ಮನ. ಈ ಮಹತ್ ಸಾಧನೆ ಮಲ್ಲಮ್ಮನ ಪವಾಡವೇ ಸರಿ. ದಿನಾಂಕ : 30-09-2025ರಂದು ತಮ್ಮ 93ನೇ ಇಳೀ ವಯಸ್ಸಿನಲ್ಲಿ ತುಂಬು ಜೀವನ ನಡೆಸಿದ ಮಲ್ಲಮ್ಮ ಪವಿತ್ರ ಮಹಾನವಮಿಯ ಅಷ್ಟಮಿಯಂದು  ಸ್ವರ್ಗಸ್ಥರಾದರು. ಅವ್ವ-ಅಜ್ಜಿಯ ಪ್ರೀತಿ ಒಡನಾಟದ ಭಾವವನ್ನು ಮಕ್ಕಳು-ಮೊಮ್ಮಕ್ಕಳು ಕವನಗಳ ಮೂಲಕ  ನಮನ ಸಲ್ಲಿಸಿದರು, ಅವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿ ದರ್ಶನ ಪಡೆದು ಪುನೀತರಾದರು. ಅವರ ಆತ್ಮಕ್ಕೆ ಶಾಂತಿ ಕೋರುತ್ತ ಈ ಲೇಖನ ಮುಗಿಸುತ್ತಿದ್ದೇನೆ, ಪ್ರೀತಿಯ ಅಳಿಯ. ಡಾ. ಬಿ. ಎಸ್‌. ಭಜಂತ್ರಿ, ಧಾರವಾಡ  

   

                      ಲೇಖಕರು 

                   ಡಾ. ಬಿ. ಎಸ್‌. ಭಜಂತ್ರಿ,  

ಮುಖ್ಯಸ್ಥರು ಕನ್ನಡ ವಿಭಾಗ.ಕರ್ನಾಟಕ ಕಲಾ ಮಹಾವಿದ್ಯಾಲಯ.ಧಾರವಾಡ