ನಿಜಾಮುದ್ದೀನ್ ಸಭೆಗೆ ಹೋದವರ ಮಾಹಿತಿ ಪಡೆಯಲು ಅಲ್ಪಸಂಖ್ಯಾತ ಆಯೋಗದಿಂದ ಅಭಿಯಾನ: ಅಬ್ದುಲ್ ಅಜೀಂ

ಬೆಂಗಳೂರು, ಏ.18,ದೆಹಲಿಯ  ತಬ್ಲೀಗ್ ಜಮಾತ್ ಗೆ ಹೋಗಿ ಬಂದವರ ಪೈಕಿ‌ 110 ಜನರಲ್ಲಿ ಕೊರೋನಾ ಸೋಂಕಿದೆ ಎಂದು  ಸರ್ಕಾರ ಹೇಳಿದೆ. ಇನ್ನೂ ಜಮಾತ್ ಗೆ ಹೋಗಿಬಂದ ಹಲವರ ವಿವರ ಸಿಕ್ಕಿಲ್ಲ ಎಂಬ ಆರೋಪ  ಇದೆ. ಹೀಗಾಗಿ  ದೆಹಲಿಗೆ ಹೋಗಿ‌ ಬಂದವರ ವಿವರ ಸಂಗ್ರಹಿಸಲು ಅಭಿಯಾನ ಆರಂಭಿಸಲಾಗುತ್ತಿದೆ  ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಇಂದು ವಿವಿಧ ಮುಸ್ಲಿಂ ಧಾರ್ಮಿಕ ಗುರುಗಳು, ಉಲೇಮಾಗಳ ಸಭೆ ನಡೆಸಲಾಗಿದೆ.  ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ಅರಿವು ಮೂಡಿಸಲು ಕೋರಲಾಗಿದೆ. ಇಂದಿನಿಂದ ಒಂದು‌ ಅಭಿಯಾನ ಆರಂಭಿಸಲಾಗುತ್ತಿದ್ದು,  ಎಲ್ಲ ಮಸೀದಿಗಳಿಗೂ  ಸೂಚನೆ ರವಾನಿಸಲಾಗಿದೆ. ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ದೆಹಲಿಗೆ ಹೋಗಿದ್ದವರ ವಿವರ ಕೊಡುವಂತೆ ನಿರ್ದೇಶಿಸಲಾಗಿದೆ ಎಂದರು.ಸರ್ಕಾರದ ಲಾಕ್ ಡೌನ್ ನಿಯಮಗಳನ್ನು  ಮುಸ್ಲಿಂ  ಸಮುದಾಯ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು,
ಸರ್ಕಾರದ  ಪ್ರತಿಯೊಂದು ನಿರ್ದೇಶನಗಳನ್ನು ಅನುಸರಿಸಲಾಗುತ್ತಿದೆ ಎಂದು ಒತ್ತಿ ಹೇಳಿದ ಅಬ್ದುಲ್  ಅಜೀಂ, ಸಮುದಾಯದವರು ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಜ್‌ಗೆ ಹೋಗುತ್ತಿಲ್ಲ. ಮದುವೆ, ಸಭೆ,  ಸಮಾರಂಭ ನಿಷೇಧಿಸಲಾಗಿದೆ. ರಂಜಾನ್ ನಲ್ಲೂ ಸಾಮೂಹಿಕ‌ ಪ್ರಾರ್ಥನೆ ಬಂದ್  ಮಾಡಲಾಗಿದೆ. ಯಾರಾದರೂ ನಿಧನರಾದಾಗ ಖಬರ್‌ ಸ್ತಾನಗಳಿಗೂ ಬೆರಳೆಣಿಕೆಯಷ್ಟು ಜನ  ಹೋಗುತ್ತಾರಷ್ಟೆ. ನೆರೆ ಹೊರೆಯವರನ್ನೂ ಮನೆಗಳಿಗೆ ಆಹ್ವಾನಿಸುತ್ತಿಲ್ಲ. ರಂಜಾನ್ ದಾನ ಧರ್ಮ ವೇಳೆಯಲ್ಲೂ ನಿಯಮಗಳ ಪಾಲನೆ ಮಾಡಲು ಸೂಚಿಸಲಾಗಿದೆ. ಮುಸ್ಲಿಂ ಸಮಯದಾಯದಿಂದ ನಿಯಮಗಳ ಉಲ್ಲಂಘನೆ ಆಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಂ  ಸಮುದಾಯ ಸರ್ಕಾರದ ಜೊತೆ ಕೊರೊನಾ ಹೋರಾಟದಲ್ಲಿ ಕೈಜೋಡಿಸಿದೆ. ಮಸೀದಿಗಳಿಗೆ ಸೂಚನೆಗಳನ್ನು  ಕಳಿಸಿ ಮಾಹಿತಿ‌ ಕೇಳಲಾಗುತ್ತಿದೆ. ಇದರಲ್ಲಿ ಅಲ್ಪ ಸಂಖ್ಯಾತ ಆಯೋಗದ ಅಧಿಕಾರಿಗಳೆಲ್ಲ ಈ  ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಜನರು ಕೊರೋನಾ ಭಯದಿಂದ ಆಚೆ ಬಂದಿಲ್ಲ  ಎಂಬುದು ಗಮನಕ್ಕೆ ಬಂದಿದ್ದು, ಯಾರೂ ಸಹ ಹೆದರುವ ಅಗತ್ಯ ಇಲ್ಲ.  ಕೊರೋನಾ ಇರಲಿ ಬಿಡಲಿ  ದೆಹಲಿ‌ ಜಮಾತ್ ಸಭೆಗೆ ಹೋಗಿ ಬಂದವರು ಸ್ವಯಂ ಪ್ರೇರಿತರಾಗಿ‌ ಬಂದು ಮಾಹಿತಿ ನೀಡಿ  ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಕೊರೊನಾ ಸೋಂಕು ಧರ್ಮ‌ ನೋಡಿ ತಗಲುವುದಿಲ್ಲ.  ವೈರಸ್ ಮತ್ತು ಮಾನವರ ನಡುವಿನ ಸಂಘರ್ಷ ಇದು. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡಬೇಕಿದೆ‌. ಇಡೀ‌ ಮುಸ್ಲಿಂ ಸಮುದಾಯ ಸರ್ಕಾರದ ಜೊತೆ ಇದೆ ಎಂದರು.
ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅಬ್ದುಲ್ ಅಜೀಂ,
ಆರೋಗ್ಯ  ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ನಮ್ಮ ರಕ್ಷಕರು. ಆರೋಗ್ಯ ಪರೀಕ್ಷೆಗೆ ಮಾಹಿತಿ  ಪಡೆಯಲು ಬರುವ ಇವರಿಗೆ  ಸಮುದಾಯ ಬಾಂಧವರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.ಹಾವೇರಿಯ ಸವಣೂರಿನ‌ ಮಸೀದಿಯಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಪ್ರಕರಣದ ಬಗ್ಗೆ  ಅಲ್ಲಿನ ಡಿವೈಎಸ್ಪಿಯಿಂದ ಮಾಹಿತಿ ಪಡೆಯಲಾಗಿದೆ. ಸರ್ಕಾರ ಸೂಚನೆ ಕೊಟ್ಟ ಮೇಲೆ ಅದನ್ನು  ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಪೊಲೀಸ್ ಕ್ರಮ‌ ಎದುರಿಸಬೇಕಾಗುತ್ತದೆ. ಇಂತಹ  ನಿಯಮ ಉಲ್ಲಂಘನೆ ಪ್ರಕರಣಗಳು ‌ಒಂದೆರಡು ಆಗಿವೆ. ಮುಂದಿನ ದಿನಗಳಲ್ಲಿ ಈ ಘಟನೆಗಳು  ಜರುಗದಂತೆ ನಿಗಾ ವಹಿಸಲಾಗುವುದು ಎಂದು ಅಬ್ದುಲ್ ಅಜೀಂ ಸ್ಪಷ್ಟಪಡಿಸಿದರು.