ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಶಾಲೆ ಭೇಟಿ; ಸಮಸ್ಯೆಗಳ ಪರೀಶೀಲನೆ

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಶಾಲೆ ಭೇಟಿ; ಸಮಸ್ಯೆಗಳ ಪರೀಶೀಲನೆ Minorities Commission Chairman U. Nisar Ahmed visits school; reviews issues

ಲೋಕದರ್ಶನ ವರದಿ 

 ಬಳ್ಳಾರಿ, 30: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಅವರು ಮಂಗಳವಾರ ನಗರದ ಎಪಿಎಂಸಿ ಈದ್ಗಾ ಸಮೀಪದ ಸರ್ಕಾರಿ ಹಿರಿಯ ಉರ್ದು ಪ್ರೌಢಶಾಲೆ ಹಾಗೂ ಕೌಲ್ ಬಜಾರ್ ತರಬೇತಿ ಶಾಲೆಗೆ ಭೇಟಿ ನೀಡಿ, ಶಾಲೆಗಳ ಮೂಲಸೌಕರ್ಯ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಪರೀಶೀಲಿಸಿದರು.  

ಭೇಟಿಯ ವೇಳೆ ಶಿಕ್ಷಕರು ಮತ್ತು ಸಿಬ್ಬಂದಿಯಿಂದ ಶಾಲೆಗಳಲ್ಲಿ ಎದುರಾಗಿರುವ ವಿವಿಧ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಚರ್ಚಿಸಿದರು. ತರಗತಿ ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳು ಹಾಗೂ ಗ್ರಂಥಾಲಯವನ್ನು ಪರೀಶೀಲಿಸಿದ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಶಿಕ್ಷಕರಿಗೆ ಸೂಚಿಸಿದರು.  

ಶಾಲೆಗಳ ಕಟ್ಟಡದ ಸ್ಥಿತಿ, ತರಗತಿ ಕೊಠಡಿಗಳು ಹಾಗೂ ಶಾಲಾ ಪರಿಸರವನ್ನು ವೀಕ್ಷಿಸಿದ ಅಧ್ಯಕ್ಷರು, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  

ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದು ಸರ್ಕಾರದ ಆದ್ಯತೆಯಾಗಿದ್ದು, ಶಾಲೆಗಳಲ್ಲಿ ಕಂಡುಬಂದ ಮೂಲಸೌಕರ್ಯ ಮತ್ತು ಸ್ವಚ್ಛತಾ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಸಂಬಂಧಿತ ಅಧಿಕಾರಿಗಳಿಗೆ ವರದಿ ಸಲ್ಲಿಸಿ, ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ರಾಜ್ಯಾಧ್ಯಕ್ಷ ದಾದಾಭಾಯಿ, ಜಿಲ್ಲಾ ಅಧ್ಯಕ್ಷ ಡಿ. ಅಯಾಜ್, ಬುಡಾ ಮಾಜಿ ಅಧ್ಯಕ್ಷ ಮೊಹಿನ್ ಖಾನ್, ಕ್ರಿಶ್ಚಿಯನ್ ಸಮುದಾಯದ ಮುಖಂಡ ಜಾಶ್ವಾ, ಮುಖಂಡ ಕಣೇಕಲ್ ಮಾಬುಸಾಬ್, ಆಯೋಗದ ಅಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರಾಜು ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.