ಸಚಿವರಿಂದ ಸಾರ್ವಜನಿಕ ಸಮಸ್ಯೆಗಳ ಆಲಿಕೆ

ಸಚಿವರಿಂದ ಸಾರ್ವಜನಿಕ ಸಮಸ್ಯೆಗಳ ಆಲಿಕೆ Ministers listen to public issues

ಹುಬ್ಬಳ್ಳಿ 28: ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೊರ ಗುತ್ತಿಗೆದಾರ ನೌಕರರಾಗಿ ಕೆಲಸ ಮಾಡುತ್ತಿರುವ ಪರಶುರಾಮ್ ಪಾಟೀಲ ಅವರು 3, 4 ತಿಂಗಳಿಂದ ಸಂಬಳ ವಿಳಂಬವಾಗಿದೆ ಎಂದು ಸಚಿವರಲ್ಲಿ ಅಳಿಲು ತೋಡಿಕೊಂಡರು. ತಕ್ಷಣ ಸಮಸ್ಯೆ ಪರಿಹರಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಮಾವಿನಕೊಪ್ಪ ಗ್ರಾಮದ ರೆಹಮಾನ ಖಾದರಸಾಬ್ ನದಾಫ್ ಅವರು ಅರಣ್ಯ ಇಲಾಖೆಯಿಂದ ಕೃಷಿ ಭೂಮಿ ಅತಿಕ್ರಮಣವಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.  

ಮಿಶ್ರಿಕೋಟಿ ಗ್ರಾಮದ ಬಸವರಾಜ ಬೆಲ್ಲದ ಅವರು ಅಪಾರ ಪ್ರಮಾಣದ ಮಳೆಯಿಂದ ಬೆಳೆ ಹಾನಿ ಆಗಿದ್ದು, ಬೆಳೆ ವಿಮೆ ವಿಳಂಬವಾಗಿದೆ ಎಂದು ಸಚಿವರಿಗೆ ತಿಳಿಸಿದರು. ಬೆಳೆ ವಿಮೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಂಕರ ರಾಮು ಲಮಾಣಿ ಅವರು ತಮ್ಮ ಆಸ್ತಿ ಇ ಸ್ವತ್ತು ಮಾಡಿಕೊಳ್ಳಲು ಒಂದು ವರ್ಷದಿಂದ ಅಲೆದಾಟ ಮಾಡುತ್ತಿದ್ದೇನೆ ಎಂದು ಸಚಿವರಲ್ಲಿ ಮನವಿ ಮಾಡಿದರು.  

ರೇಣುಕಾ ದೇವೇಂದ್ರ ಲಮಾಣಿ ಅವರು ಹೈನುಗಾರಿಕೆ ಯೋಜನೆಗೆ ಅರ್ಜಿ ಹಾಕಲಾಗಿದೆ. ಆದರೆ ಒಂದು ವರ್ಷವಾದರೂ ಸಹ ಯೋಜನೆಗೆ ಆಯ್ಕೆ ಮಾಡಿರುವುದಿಲ್ಲ ಎಂದು ಮನವಿ ಮಾಡಿದರು. ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಕುಡಿಯುವ ನೀರು , ವಿದ್ಯುತ್ ಹಾಗೂ ಯಾವುದೇ ಕನಿಷ್ಠ ಸೌಲಭ್ಯಗಳು ಇಲ್ಲವಾಗಿವೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸಚಿವರಲ್ಲಿ ಮನವಿ ಸಲ್ಲಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸಚಿವರು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷರಾದ ಎಸ್‌.ಆರ್‌.ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ವೈಷ್ಣವಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಾಡಗೀತೆ ಪ್ರಸ್ತುತ ಪಡಿಸಿದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು.