ಬೆಂಗಳೂರು, ಏ 15,ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಎಲ್ಲಾ ಆಸ್ಪತ್ರೆಗಳನ್ನು ಸಂಪರ್ಕಿಸುವ ಕ್ರಿಟಿಕಲ್ ಕೇರ್ ಸಪೋರ್ಟ್ ಯುನಿಟ್‌ಗೆ ವೈದ್ಯಕೀಯಶಿಕ್ಷಣ ಸಚಿವ ಡಾ|| ಕೆ.ಸುಧಾಕರ್ ನಗರದಲ್ಲಿಂದು ಚಾಲನೆ ನೀಡಿದರು.ಇಡೀ ದೇಶದಲ್ಲೇ ಇದು ವಿನೂತನ ಪ್ರಯತ್ನವಾಗಿದ್ದು, ಕೋವಿಡ್-೧೯ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳ ತೀವ್ರಾ ನಿಗಾ ಘಟಕ- ಐಸಿಯುಗಳನ್ನು ಒಂದೇ ವೇದಿಕೆಯಡಿ ಸಂಪರ್ಕಿಸುವ ವಿನೂತನಾ ಕ್ರಮ ಇದಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಇಡೀ ರಾಜ್ಯದ ಎಲ್ಲಾ ಆಸ್ಪತ್ರೆಗಳ ಕೊರೊನಾ ಚಿಕಿತ್ಸೆಯನ್ನು ಒಂದೇ ಕಡೆ ಕುಳಿತು ನಿಗಾವಹಿಸಲು ಇಂತಹ ಕ್ರಮದಿಂದ ಸಾಧ್ಯವಾಗಲಿದೆ. ತಜ್ಞ ವೈದ್ಯರು ಮತ್ತು ಪ್ರಮುಖ ವೈದ್ಯಕೀಯ ಕಾಲೇಜುಗಳ ತರಬೇತಿ ಪಡೆಯುತ್ತಿರುವ ವೈದ್ಯರು ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.ಇದಕ್ಕೂ ಮುನ್ನ ಮಾತನಾಡಿದ ಸಚಿವ ಡಾ|| ಕೆ. ಸುಧಾಕರ್ ರಾಜ್ಯದಲ್ಲಿ ಪ್ರತಿದಿನ ಸರಾಸರಿ ೧೫೦೦ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದು, ದಿನನಿತ್ಯ ೧೦-೧೫ ಪ್ರಕರಣಗಳಲ್ಲಿ ಸೋಂಕು ದೃಢಪಡುತ್ತಿದೆ ಎಂದರು. ಪ್ರತಿಪಕ್ಷ ಮುಖಂಡರು ವಾಸ್ತವದ ಆಧಾರದ ಮೇಲೆ ಮಾತನಾಡಬೇಕು. ಮೈಸೂರಿನಲ್ಲಿ ಮೊದಲ ಪ್ರಕರಣ ಪತ್ತೆ ಆದಾಗಲೇ ಅಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲಿವೆ ಎಂಬುದು ತಿಳಿದು ಬಂದಿತ್ತು.ಈಗ ಮೈಸೂರಿನಲ್ಲಿ ಪತ್ತೆಯಾಗಿರುವ ಕೇಸ್ ಎಲ್ಲವೂ ಹೋಮ್ ಕ್ವಾರಂಟೈನ್ ಆದವರು. ದಿನಕಳೆದಂತೆ ಪ್ರಕರಣಗಳು ಕಡಿಮೆಯಾಗುತ್ತಿದ್ದು ಯಾರೂ ಸಹ ಭಯ ಪಡುವ ಅವಶ್ಯಕತೆಯಿಲ್ಲ.ಕರ್ನಾಟಕದಲ್ಲಿ ನಾವಿನ್ನೂ ೩೦೦ರ ಆಸುಪಾಸಿನಲ್ಲಿವೆ ಎಂದರು.