ಸಚಿವ ಪಾಟೀಲರಿಗೆ ಜೋಡೆತ್ತಿನ ಬಂಡಿಯಲ್ಲಿ ಮೆರವಣಿಗೆ, ತುಲಾಭಾರ ಸನ್ಮಾನ

ಸಚಿವ ಪಾಟೀಲರಿಗೆ ಜೋಡೆತ್ತಿನ ಬಂಡಿಯಲ್ಲಿ ಮೆರವಣಿಗೆ, ತುಲಾಭಾರ ಸನ್ಮಾನ Minister Patil was given a procession in a cart, and was felicitated

ಲೋಕದರ್ಶನ ವರದಿ 

ವಿಜಯಪುರ,ಮೇ 1: ಜಿಲ್ಲೆಯ ಅನ್ನದಾತರ ಆಶೋತ್ತರಗಳಿಗೆ ಸ್ಪಂದಿಸಿ, ಜಲ ಸಂಪನ್ಮೂಲಗಳ  ಪುನಶ್ಚೇತನಕ್ಕೆ ಬದ್ಧತೆ ತೋರಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರಿಗೆ ಲೋಹಗಾಂವ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ತುಲಾಭಾರ ಮಾಡುವ ಮೂಲಕ ತಮ್ಮ ಅಪಾರ ಅಭಿಮಾನ ಹಾಗೂ ಕೃತಜ್ಞತೆ ಸಲ್ಲಿಸಿದರು. 

ಸಣ್ಣ ನೀರಾವರಿ ಇಲಾಖೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಸರಣಿ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ರೈತರು ಭಾವನಾತ್ಮಕವಾಗಿ ಸಚಿವರನ್ನು ಸನ್ಮಾನಿಸಿ ಸಮಾಧಾನದ ನಿಟ್ಟುಸಿರು ಬಿಟ್ಟರು. 

17 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಚಾಲನೆ: 

ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌. ಎಸ್‌. ಬೋಸರಾಜು ಅವರೊಂದಿಗೆ ಸಚಿವರು ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ರೈತರ ಸಂತಸದ ಹೊನಲನ್ನು ಇಮ್ಮಡಿಗೊಳಿಸಿದರು. ಬರಟಗಿ ಗ್ರಾಮದಲ್ಲಿ 734 ಲಕ್ಷ ರೂ. ವೆಚ್ಚದಲ್ಲಿ ಅರಕೇರಿ, ಬರಟಗಿ ಮತ್ತು ಹಂಚಿನಾಳ ಪಿ.ಎಚ್ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡಿಸಿದರು.  

ಲೋಹಗಾಂವ: 978 ಲಕ್ಷ ರೂ. ವೆಚ್ಚದಲ್ಲಿ ಲೋಹಗಾಂವ, ಟಕ್ಕಳಕಿ, ಹುಬನೂರ, ಜಾಲಗೇರಿ, ಇಟ್ಟಂಗಿಹಾಳ ಹಾಗೂ ಸಿದ್ಧಾಪೂರ ಗ್ರಾಮಗಳಲ್ಲಿ ಸರಣಿ ಬಾಂದಾರಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಡಿಸಿದ್ದು, ಈ ಗ್ರಾಮಸ್ಥರಲ್ಲಿ ಹರ್ಷವನ್ನುಂಟು ಮಾಡಿತು. ಅಂತರ್ಜಲ ವೃದ್ಧಿ: ರೈತರ ಮೊಗದಲ್ಲಿ ಮಂದಹಾಸ :ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಸರಣಿ ಬಾಂದಾರಗಳ ನಿರ್ಮಾಣದಿಂದ ಈ ಭಾಗದ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಲಿದೆ. ಇದರಿಂದ ಹಳ್ಳ-ಕೊಳ್ಳಗಳು ತುಂಬಿ ತುಳಕುತ್ತವೆ. ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಸುಧಾರಿಸಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು. ಕೇವಲ ಕೃಷಿಯಷ್ಟೇ ಅಲ್ಲದೆ, ಬೇಸಿಗೆಯ ಕಠಿಣ ಸಮಯದಲ್ಲಿ ಪಶು-ಪಕ್ಷಿಗಳಿಗೂ ಕುಡಿಯುವ ನೀರು ಸಿಗುವಂತಾಗಬೇಕಿರುವುದು ನಮ್ಮ ಮುಖ್ಯ  ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದಾಗ ನೆರೆದ ಜನತೆಯಿಂ ಭರ್ತಿ ಕರತಾಡನ ಕೇಳಿಬಂತು.  

ಎತ್ತಿನ ಬಂಡಿಯಲ್ಲಿ ಮೆರವಣಿಗೆ, ತುಲಾಭಾರ 

ತಮ್ಮ ಜಮೀನುಗಳಿಗೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲೋಹಗಾಂವ ಗ್ರಾಮದ  ರೈತರು ಹಾಗೂ ಗ್ರಾಮಸ್ಥರು ವಿಶಿಷ್ಟವಾಗಿ ಕೃತಜ್ಞತೆ ಸಲ್ಲಿಸಿದರು. 

ಜೋಡೆತ್ತಿನ ಚಕ್ಕಡಿಯಲ್ಲಿ ಸಚಿವದ್ವಯರನ್ನು ಕೂಡಿಸಿ 'ಚಕ್ಕಡಿ ಬಂಡಿಯಲ್ಲಿ  ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ತಮ್ಮ ಮನೆ ಮಗನಂತೆ ಸಚಿವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.ಗ್ರಾಮದ ಹಳ್ಳದ ಹತ್ತಿರ ಭೂಮಿ ಪೂಜೆ ನೆರವೇರಿಸಿದ ನಂತರ ಶೃಂಗರಿಸಿದ ಜೋಡೆತ್ತಿನ ಬಂಡಿಯಲ್ಲಿ ಸಚಿವದ್ವಯರನ್ನು ಭವ್ಯ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು. 

ವೇದಿಕೆಯ ಆವರಣದಲ್ಲಿ ಐದಾರು ಜೆಸಿಬಿ ಮೂಲಕ ಸಚಿವರಿಬ್ಬರನ್ನು ಹೂಮಾಲೆ ತೊಡಿಸುವ ಮೂಲಕ ತಮ್ಮ ಅಭಿಮಾನ ಮೆರೆದರು.ವೇದಿಕೆಯಲ್ಲಿದ್ದ  ಸಚಿವರಿಬ್ಬರಿಗೆ ಪೇಟ ಸುತ್ತಿ, ಒಣದ್ರಾಕ್ಷಿ ಹಾರ ಹಾಗೂ ಬೆಳ್ಳಿಮೂರ್ತಿ ನೀಡುವ ಮೂಲಕ ಗ್ರಾಮಸ್ಥರು ಸನ್ಮಾನಿಸಿ, ಸಂಭ್ರಮಿಸಿದರು. ನಮಗೆ ನೀರು ಕೊಟ್ಟು ಬದುಕು ಸದೃಢಗೊಳಿಸಿದ ಸಚಿವರಿಗೆ ನಾವು ಸಲ್ಲಿಸುತ್ತಿರುವ ಸಣ್ಣ ಗೌರವವಿದು ಎಂದು ಲೋಹಗಾಂವ ರೈತ ಮುಖಂಡರು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು. 

ವಿಶೇಷ ತುಲಾಭಾರ: ಸಚಿವದ್ವಯರಾದ ಎನ್‌.ಎಸ್‌. ಭೋಸರಾಜು ಹಾಗೂ ಡಾ.ಎಂ.ಬಿ.ಪಾಟೀಲರಿಗೆ ಗ್ರಾಮಸ್ಥರ ಪರವಾಗಿ ರೈತರು ತಾವು ಬೆಳೆದ ಹಣ್ಣು ಹಂಪಲುಗಳಿಂದ ತುಲಾಭಾರ ಮಾಡಿದ್ದು ವಿಶೇಷವಾಗಿ ಗಮನಸೆಳೆಯಿತು. 

ಸಚಿವ ಎಂ.ಬಿ. ಪಾಟೀಲರಿಗೆ ಅವರೇ ಸಾಟಿ :ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌. ಬೋಸರಾಜು ಅವರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರು ಲೋಕಸಭಾ ಸದಸ್ಯರಾಗಿ, ಸಚಿವರಾಗಿ ಈ ಭಾಗದ ಅಭಿವೃದ್ದಿ ಬಗ್ಗೆ ಜನರ ಬಗ್ಗೆ ಅಪಾರ ಕಾಳಜಿವಹಿಸಿದ್ದಾರೆ ಎಂದು ಬಣ್ಣಿಸಿದರು. 

ಕೆರೆ ತುಂಬಿಸಲು ಈ ಭಾಗದ ಜನರಿಗೆ ಅನೇಕ ನ್ಯಾಯಾಂಗ ಸಮಸ್ಯೆಗಳಿದ್ದರೂ, ಅವುಗಳನ್ನೆಲ್ಲ ನಿವಾರಿಸುವ ಮೂಲಕ ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರು ಹರಿಸಿದ ಅವರ ಪ್ರಯತ್ನಕ್ಕೆ ಅವರೇ ಸಾಟಿಯಾಗಿದ್ದಾರೆ ಎಂದು ಗುಣಗಾನ ಮಾಡಿದರು. 

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಿಸುವುದರಿಂದ ಈ ಭಾಗದ ರೈತರಿಗೆ ಇನ್ನಷ್ಟೂ  ಅನುಕೂಲವಾಗಲಿದೆ. ಸಣ್ಣನೀರಾವರಿ ಇಲಾಖೆಯು ಅಂತರ್ಜಲ ಹೆಚ್ಚಿಸುವಲ್ಲಿ ಒಂಭತ್ತನೆ ಸ್ಥಾನದಲ್ಲಿದ್ದೇವೆ. ಬೇರೆ ಭಾಗದಲ್ಲಿ 400 ಅಡಿ ಬೋರ್ ಹೊಡೆದರೂ, ನೀರು ಬರಲ್ಲ. ಆದರೆ ಈ ಭಾಗದಲ್ಲಿ ಅಂತರ್ಜಲ  ಹೆಚ್ಚಳವಾಗಿದ್ದರಿಂದ ವಿಜಯಪುರ ಜಿಲ್ಲೆ ಈಗ ಇಡೀ ರಾಜ್ಯ ಹಾಗೂ  ದೇಶಕ್ಕೆ ಮಾದರಿಯಾಗಿದೆ. ಈ ಕಾರ್ಯದ ಶ್ರೇಯಸ್ಸು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರಿಗೆ ಸಲ್ಲಬೇಕು ಎಂದರು. 

ಹತ್ತು ಪ್ಯಾಕೇಜ್ ನಲ್ಲಿ  ಬಾಂದಾರ ನಿರ್ಮಾಣ ಮಾದರಿ 6 ಪ್ಯಾಕೇಜ್ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ಕಂಕಣಬದ್ಧರಾಗಿ ಸಚಿವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. ಸಚಿವರ ಈ ಮಾದರಿ ಕಾರ್ಯವನ್ನು  ನಾನು ತೆಗೆದುಕೊಂಡು ರಾಜ್ಯಕ್ಕೆ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವ ಭೋಸರಾಜು ತಿಳಿಸಿದರು. ಈ ಯೋಜನೆಗೆ ಸರ್ಕಾರದಲ್ಲಿ ಹಂತ ಹಂತವಾಗಿ ಅನುಮೋದನೆ ನೀಡುವ ಮೂಲಕ ಜನಪರ ಕಾರ್ಯ ಮಾಡುತ್ತಿದ್ದಾರೆ. ಸಚಿವರು ಮಾಡುವ ಕೆಲಸ ಸದಾ ಕಾಲ ನೆನಪಿಡುವಂತಹವುಗಳಾಗಿವೆ. ಅವರ ಪ್ರಯತ್ನದ ಫಲವಾಗಿ  ನೀರಾವರಿಯಾಗಿದ್ದರಿಂದ ಈ ಭಾಗದಲ್ಲಿ ಭೂಮಿ ಬೆಲೆ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ನೀರು ಮತ್ತು ವಿದ್ಯುತ್ ನೀಡುವ ಮೂಲಕ ಕೈಗಾರಿಕಾ ಸಚಿವರಾಗಿ ಮಾದರಿ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅವರ ಕಾಳಜಿ ಅಪಾರವಾಗಿದೆ. ಕೈಗಾಗರಿಕೆಗಳನ್ನು ರಾಜ್ಯಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.  ಜನಪರ ಹಾಗೂ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. 

ದೇಶಕ್ಕೆ ಅಂತರ್ಜಲ ಮಾದರಿ:ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮಾತನಾಡಿ,  ಲೋಗಾಂವಿಯಲ್ಲಿ ಕೆರೆ ತುಂಬುವ ಯೋಜನೆ ಮಾಡಿದಾಗ  

ಮತ್ತೊಂದು ಯೋಜನೆ ಅನುಷ್ಠಾನಗೊಳಿಸುವ ಸಂಕಲ್ಪ ಮಾಡಿದ್ದೆ. ಈಗ ಅದುವೇ ಹಳ್ಳ-ಕೊಳ್ಳಗಳನ್ನು ತುಂಬುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದರು. ನೀರಾವರಿ ಸಚಿವನಾಗಿದ್ದಾಗ ನೀರಾವರಿ ಕೆನಾಲ್ ಜಾಲದ ಮೇಲೆ 176 ಹಳ್ಳಗಳು ಬರುತ್ತವೆ. ಕಾಲುವೆ ಜಾಲ ವ್ಯಾಪ್ತಿಯ ಹಳ್ಳಗಳಿಗೆ ನೀರು ತುಂಬುವ ನಿರ್ಧರಿಸಿ, ಕೆರೆ ಸ್ವಚ್ಛ ಮಾಡಿ ಕಸ ಕಂಟಿ ಸ್ವಚ್ಛ ಮಾಡಿ ಪ್ರತಿ ಸಾವಿರ ಮೀಟರಗೆ ಒಂದು  ಚೆಕ್ ಡ್ಯಾಂ ನಿರ್ಮಾಣ ಮಾಡಿ ನೀರು ಹಿಂಗಿಸುತ್ತಿದ್ದೇವೆ. ಇಂದು ಕಡೆ ಕೆರೆ ಉಳಿದಿದ್ದು, ಇನ್ನೊಂದು ಕಡೆ ಹಳ್ಖ ತುಂಬಲಾಗುವುದು ಎಂದರು. ಹತ್ರಲ್ಲಿ ಆರು ಪ್ಯಾಕೇಜ್ ಕಾಮಗಾರಿ ಆರಂಭಗೊಂಡಿದ್ದು, 277 ಕೋಟಿ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿದೆ ಎಂದ ಸಚಿವರು, ಕೆರೆ ತುಂಬುವ ಯೋಜನೆಯಿಂದ ಕೈಬಿಟ್ಟು ಹೋದ ಹಳ್ಳಿಗಳ ಹಳ್ಳ  ತುಂಬುವ ಯೋಜನೆ ವ್ಯಾಪ್ತಿಗೆ ಸೇರುತ್ತವೆ ಎಂದರು. 

ವಿಜಯಪುರ ಜಿಲ್ಲೆಗೆ ಬರಗಾಲ ಜಿಲ್ಲೆ ಹಣೆಪಟ್ಟಿಯಿತ್ತು. ಒಂದು ಕಾಲದಲ್ಲಿ ಕುಡಿಯುವ ನೀರಿಗೂ ತತ್ವಾರವಿತ್ತು. ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು. ಈಗ ನೀರಾವರಿ ಯೋಜನೆಯಿಂದ ಅಂತರ್ಜಲ  ಮಟ್ಟ  ಹೆಚ್ಚಾಗಿದ್ದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಉಲ್ಬಣಿಸದಿರುವುದು ನನಗೆ ಅತೀವ ಸಂತಸವನ್ನುಂಟು ಮಾಡಿದೆ ಎಂದರು. 

ಬಬಲೇಶ್ವರ ಮತಕ್ಷೇತ್ರದಲ್ಲಿ ಸಿಎಸ್ ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಲಾಗುವುದು. ಶಾಲಾ ಕೊಠಡಿ, ಸ್ಮಾರ್ಟ ಕ್ಲಾಸ್  ಶಾಲೆಗಳಿಗೆ ಕಟ್ಟಡ, ಶಾಲಾ ಮೈದಾನ ಅಭಿವೃದ್ಧಿಪಡಿಸಲಾಗುತ್ತಿದೆ. ಮತಕ್ಷೇತ್ರದ ಎಲ್ಲ ಶಾಲೆಗಳನ್ನು ಆಧುನಿಕ ಮಾದರಿ ಶಾಲೆಗಳನ್ನಾಗಿ ರೂಪುಗೊಳಿಸಲಾಗುತ್ತಿದೆ ಎಂದರು. ಕಣಮುಚನಾಳ ಹಾಗೂ ಮಮದಾಪೂರದಲ್ಲಿ ಟೊಯೋಟ ಕಂಪನಿಯವರು ನಿರ್ಮಿಸಿದ್ದು,  ಮಾದರಿ ಶಾಲೆಗಳಾಗಿ ಹೊರಹೊಮ್ಮಿವೆ ಎಂದರು. 

ಎಲ್ಲ ಶಾಲೆಗಳಿಗೆ ನೀರಿನ ಜೊತೆಗೆ ಅದಕ್ಕೆ ಬೇಕಾದ ವಿದ್ಯುತ್ ಒದಗಿಸಲಾಗುತ್ತಿದೆ. ನೀರಾವರಿ, ಉದ್ಯೋಗ, ಶಿಕ್ಷಣ, ರಸ್ತೆ ಅಭಿವೃದ್ಧಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಅಹರ್ನಿಶಿ ಕೆಲಸ ಮಾಡುತ್ತಿರುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.ಜಿಲ್ಲೆಯ 400 ಹಳ್ಳಿಗಳಲ್ಲಿ ಬಾಂದಾರ ನಿರ್ಮಾಣ ಕಾರ್ಯವನ್ನು ಹಂತ-ಹಂತವಾಗಿ ಮಾಡಲಾಗುವುದು. ತನ್ಮೂಲಕ ಇಡೀ ಜಿಲ್ಲೆಯಲ್ಲಿ  ಅಂತರ್ಜಲ ಮಟ್ಟ  ದೇಶಕ್ಕೆ ಮಾದರಿಯಾಗುವ ಕಾರ್ಯ ಮಾಡುವುದಾಗಿ ಸಚಿವರು ಇದೇ ವೇಳೆ ಘೋಷಿಸಿದರು. 

ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಎಂಜನೀಯರ್ ಕೊಳ್ಳಿ ತಹಶೀಲ್ದಾರ್ ಸುರೇಶ ಚವಲರ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವಂತ್ರಾಯ ಬಿರಾದಾರ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ರೈತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.