ಸಚಿವ ಎಂ. ಬಿ. ಪಾಟೀಲರಿಂದ ಉಮೇಶ ಮೇಟಿ ಅವರ ಪರವಾಗಿ ಮತಯಾಚನೆ

ಸಚಿವ ಎಂ. ಬಿ. ಪಾಟೀಲರಿಂದ ಉಮೇಶ ಮೇಟಿ ಅವರ ಪರವಾಗಿ ಮತಯಾಚನೆ Minister M. B. Patil appeals for votes in favor of Umesh Meti

ಬಾಗಲಕೋಟ :  ಯುಕೆಪಿ ಯೋಜನೆ ಕುರಿತು ದಿ. 8 ರಂದು ಬಹಿರಂಗವಾಗಿ ಚರ್ಚೆಗೆ ಬರುವಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹಾಕಿರುವ ಸವಾಲು ಹಾಸ್ಯಾಸ್ಪದವಾಗಿದೆ ಎಂದು ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ನಿಮಿತ್ತ ಭಗವತಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ವಿಧಾನ ಸಭೆ ಉಪಚುನಾವಣೆ ಪ್ರಚಾರ ಪ್ರಕ್ರಿಯೆ ದಿ.7 ರಂದು ಸಂಜೆ ಮುಗಿಯುತ್ತದೆ. ಹೀಗಾಗಿ ದಿ. 8 ರಂದು ಸಭೆ ನಡೆಸಲು ಅವಕಾಶವೇ ಇಲ್ಲ ಎಂಬ ಸಾಮಾನ್ಯ ಜ್ಞಾನ ಕಾರಜೋಳ ಅವರಿಗೆ ಇಲ್ಲವೇ? ಕೇವಲ ಪ್ರಚಾರಕ್ಕಾಗಿ, ಉಡಾಫೆಗಾಗಿ ಇಂತಹ ಹೇಳಿಕೆಗಳನ್ನು ನೀಡಿರುವ ಇವರು ಯುಕೆಪಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಚಿವ ಎಂ ಬಿ ಪಾಟೀಲ ತಿಳಿಸಿದರು.

*ಬಿಜೆಪಿ ಯವರ ಕಿಸೆಯಲ್ಲಿ ಬೆಂಕಿ ಪೊಟ್ಟಣ*: ಏನೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಕಾಂಗ್ರೆಸ್ ಅವಧಿಯಲ್ಲಿ ಮಾತ್ರ. ಬಿಜೆಪಿ ಅವರಿಗೆ ಮಾತನಾಡಲು ಯಾವ ವಿಷಯವೂ ಇಲ್ಲ. ಬೆಂಕಿ ಪೊಟ್ಟಣವನ್ನು ಕಿಸೆಯಲ್ಲಿ ಇಟ್ಟುಕೊಂಡು ಕಂಡ ಕಂಡಲ್ಲಿ ಜಾತಿ, ಮತ, ದ್ವೇಷದ ಮೂಲಕ ಬೆಂಕಿ ಹಚ್ಚುವ ಇವರು, ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಪ್ರಚಾರಕ್ಕಾಗಿ ಭಾಷಣ ಮಾಡುವ ಇವರು ಎಲ್ಲ ರಂಗಗಳಲ್ಲಿ ವಿಫಲರಾಗಿದ್ದಾರೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ತಿಳಿಸಿದ್ದರು. ಮೋದಿ ಅವರು ಅಧಿಕಾರಕ್ಕೆ ಬಂದು 12ವರ್ಷ ಆಯಿತು. 24 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ? ತಿಳಿದುಕೊಳ್ಳಿ.  

ರೈತರ ಸಾಲ ಮನ್ನಾ ಮಾಡದೇ, ಅಂಬಾನಿ, ಅದಾನಿ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿ ಈ ಧೋರಣೆಯನ್ನುಕಂಡ ಯುವಕರಿಗೆ ಈ ಭರವಸೆಗಳು ಭ್ರಮನೀರಸವಾಗಿದೆ ಎಂದರು.ಕಾಂಗ್ರೆಸ್ ಮುಖಂಡ ಗೀರೀಶ ನಾಡಗೌಡ ಕೆರಕಲಮಟ್ಟಿ ಮಾತನಾಡಿ, ಮೇಟಿ ಅವರು ಸರ್ವ ಜನಾಂಗದ ನಾಯಕರು. ಎಲ್ಲರೂ ಅವರ ಮನೆಗೆ ನೇರವಾಗಿ ಹೋಗಬಹುದು. ಸಾಮಾನ್ಯರು ಯಾರು ವೀರಣ್ಣ ಚರಂತಿಮಠ ರ ಮನೆಗೆ ಕಾಲಿಡಲು ಆಗುವುದಿಲ್ಲ. ಜನ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದರು. ವೇದಿಕೆಯಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಬ್ದುಲ ಹಮೀದ ಮುಶ್ರಿಫ್, ಸುರೇಶ ಗೂಳಪ್ಪ ರಕರೆಡ್ಡಿ, ಕಲಬಸಪ್ಪ ಹಳ್ಳೂರ, ಸಿದ್ದಣ್ಣ ರಕರೆಡ್ಡಿ, ಶರಣಪ್ಪ ಗುಳೇದ, ಬಿ. ಜಿ. ಪಾಟೀಲ ವಕೀಲರು.  

ಚನ್ನಪ್ಪ ಕಲ್ಲೋಳ, ಸಂಗಪ್ಪ ಪೈಲದ, ಆದರ್ಷ ಹೊಸಮನಿ, ಪ್ರಭು ಪಾಟೀಲ ಕಂದಗಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಭಗವತಿ ಗ್ರಾಮದ ನಂತರ ಕಿರಸೂರ, ಮುಗಳೊಳ್ಳಿ , ಬೆಣ್ಣೂರ ಗ್ರಾಮಗಳಲ್ಲಿ ಸಚಿವ ಎಂ ಬಿ ಪಾಟೀಲ ಬಿಜೆಪಿ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರ ಪರವಾಗಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ತಿಕೋಟಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಗುರು ದಾಶ್ಯಾಳ ಸೇರಿದಂತೆ ಹಲವು ಕಾಂಗ್ರೆಸ್ ಪದಾಧಿಕಾರಿಗಳು ಮನೆ ಮನೆಗೆ ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ನಡೆಸಿದರು.