4000 ಚಾಲಕರಿಗೆ ಆಹಾರ ಕಿಟ್ ವಿತರಿಸಿದ ಸಚಿವ ಕೆ.ಗೋಪಾಲಯ್ಯ

ಬೆಂಗಳೂರು, ಮೇ  22, ರಾಜ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಯಾವುದೇ ಸಂದರ್ಭದಲ್ಲೂ ನಾವು ಚಾಲಕರ ಕೈ ಬಿಡುವುದಿಲ್ಲ. ನಿಮ್ಮ  ಜೊತೆಗೆ ನಾವು ಯಾವಾಗಲೂ ಇರುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.  ಗೋಪಾಲಯ್ಯ ಹೇಳಿದ್ದಾರೆ.ಮಹಾಲಕ್ಷ್ಮಿ ವಿಧಾನ ಸಭಾ ಕ್ಷೇತ್ರದ, ಕಮಲಮ್ಮನ ಗುಂಡಿ ಆಟದ  ಮೈದಾನದಲ್ಲಿ, ಸುಮಾರು 4000 ಸಾವಿರ ಆಟೋ, ಲಾರಿ, ಟೆಂಪೋ, ಮತ್ತು ಬಸ್  ಚಾಲಕರಿಗೆ ಆಹಾರ ಕಿಟ್  ಗಳನ್ನು ವಿತರಿಸಿ ಅವರು ಮಾತನಾಡಿದರು.
ಇಂದು ತಮ್ಮ ಕ್ಷೇತ್ರದ ಎಲ್ಲಾ ಚಾಲಕರಿಗೆ ಆಹಾರದ  ಕಿಟ್ ಗಳನ್ನು ವಿತರಿಸಲಾಗಿದೆ. ಇನ್ನು ಯಾರ ಹೆಸರು ಇದರಲ್ಲಿ ಬಿಟ್ಟು ಹೋಗಿದೆಯೋ ಅವರ  ಹೆಸರುಗಳನ್ನು ಸೇರಿಸಲಾಗುತ್ತಿದೆ. ಅವರಿಗೂ ತಮ್ಮ ಕಚೇರಿಯಲ್ಲಿ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಸುಧಾರಣೆಗಳು ಆಗಿವೆ. ಕೊರೋನ ವೈರಸ್ ತಡೆಯುವುದರಲ್ಲಿ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಹಾಗೇ ಕೊರೋನ ವಿಚಾರದಲ್ಲಿ ಏನೇ  ತೀರ್ಮಾನ ತೆಗೆದುಕೊಳ್ಳ ಬೇಕೆಂದರೂ ಸಚಿವ ಆರ್ ಅಶೋಕ್ ರವರು ಉಪಾಧ್ಯಕ್ಷರಾಗಿರುವ ಸಮಿತಿ ತೆಗೆದುಕೊಳ್ಳುತ್ತದೆ. ಇಡೀ  ರಾಜ್ಯದಲ್ಲಿ ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳ ಬೇಕಾದರೆ ಅವರ ನಾಯಕತ್ವದಲ್ಲಿ ತೆಗೆದುಕೊಳ್ಳಲಾಗುತ್ತದೆ. ಆರ್ ಅಶೋಕ್ ಈ ಕಾರ್ಯಕ್ರಮಕ್ಕೆ ಬಂದಿರುವುದು ತಮಗೆ ಖುಷಿ ತಂದಿದೆ ಎಂದರು.
ಆಟೋ ಚಾಲಕರ  ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದ್ದು ಅವರಿಗೆ 5000 ಸಾವಿರ ಪರಿಹಾರ ಹಣ ಘೋಷಣೆ  ಮಾಡಿದೆ. ಆಟೋ ಚಾಲಕರು ಹಣ ಪಡೆಯುವುದಕ್ಕೆ ಅಗತ್ಯ ದಾಖಲೆಗಳನ್ನು ಕೊಡಬೇಕು. ದಾಖಲೆಗಳನ್ನು ತಮ್ಮ ಕಚೇರಿಯಲ್ಲಿ ಪಡೆಯಲು ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.ಬಡ ವಲಸೆ ಕಾರ್ಮಿಕರಿಗೆ ಆಹಾರದ ಕೊರತೆಯಾಗಬಾರದೆಂದು ನಮ್ಮ ಸರ್ಕಾರ ರೇಷನ್  ಕಾರ್ಡ್ ಇಲ್ಲದವರಿಗೂ ಉಚಿತ ಆಹಾರ ಧಾನ್ಯಗಳನ್ನು ಕೊಡಲು ನಿರ್ಧರಿಸಿದೆ. ಯಾರ ಬಳಿ ರೇಷನ್ ಕಾರ್ಡ್ ಇಲ್ಲವೋ ಅವರು ನಿಮ್ಮ ಆಧಾರ್ ಕಾರ್ಡ್ ತೋರಿಸಿ  ನ್ಯಾಯಬೆಲೆ ಅಂಗಡಿಗಳಲ್ಲಿ ಮೇ 26 ರಿಂದ ರೇಷನ್ ಪಡೆಯಬಹುದು. ಇದೇ ತಿಂಗಳ 26 ರಿಂದ  31ರವರೆಗೆ ಪ್ರತಿ ವ್ಯಕ್ತಿಗೆ  5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ನಿರ್ಧರಿಸಿದ್ದು  ಮುಂದಿನ ತಿಂಗಳು ಜೂನ್ 1 ರಿಂದ 10ರವರೆಗೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ  ಮತ್ತು ಪ್ರತಿ ಕುಟುಂಬಕ್ಕೆ 2 ಕೆಜಿ ಕಡಲೆಕಾಳು ಉಚಿತವಾಗಿ ನೀಡಲಾಗುತ್ತದೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.
ಸಚಿವ ಆರ್. ಅಶೋಕ್ ಮಾತನಾಡಿ, ಇಂದು ಇಡೀ ದೇಶ ಕೊರೋನ ಮಹಾಮಾರಿಯನ್ನು  ದೇಶದಿಂದ ಹೊರಗಾಕಬೇಕೆಂದು ನಿರಂತರವಾಗಿ ಕೆಲಸ ಮಾಡುತ್ತಿದೆ. ವಿಶೇಷವಾಗಿ ನಾವೆಲ್ಲರು ಈ  ಸಂದರ್ಭದಲ್ಲಿ ವೈದ್ಯರಿಗೆ, ನರ್ಸ್, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಬೇಕು. ಕೊರೋನ ಬಂದರೆ ಎಲ್ಲರೂ ನಮ್ಮನ್ನು ಹೊರಹಾಕುತ್ತಾರೆ. ಆದರೆ ಇವರು  ಧೈರ್ಯದಿಂದ ನಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೊರೋನ ರೋಗಿಗಳು ಇದ್ದಲ್ಲೇ  ಹೋಗಿ ಆಶಾ  ಕಾರ್ಯಕರ್ತೆಯರು ಔಷಧಿಗಳನ್ನು ಕೊಡುತ್ತಿದ್ದಾರೆ ಎಂದು ತಿಳಿಸಿದರು.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸೋಂಕಿತರ ಪ್ರಮಾಣ ಬಹಳಷ್ಟು  ಕಡಿಮೆ ಇದೆ. ಬೇರೆ ದೇಶದಲ್ಲಿ ಜನ ಸಾಯುವ ಮುಂಚೆಯೇ ಗುಂಡಿಗಳನ್ನು ತೋಡುತ್ತಿದ್ದಾರೆ.  ಆದರೆ ನಮ್ಮ ದೇಶದಲ್ಲಿ ನಮ್ಮ ಪ್ರಧಾನಿ ಜನರ ಪ್ರಾಣವನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂದು ಕರ್ನಾಟಕದಲ್ಲಿ ಕೊರೋನ ಸಾಕಷ್ಟು  ನಿಯಂತ್ರಣವಾಗಿದ್ದು ಅದಕ್ಕೆ ನಮ್ಮ ನಾಯಕರಾದ ಯಡಿಯೂರಪ್ಪ ನವರು ಕಾರಣ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಮುನಿರಾಜು , ನರೇಂದ್ರಬಾಬು, ಮಾಜಿ ಉಪಮೇಯರ್  ಎಸ್ ಹರೀಶ್, ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಕ್ಷೇತ್ರದ ಮಂಡಲ ಅಧ್ಯಕ್ಷ ರಾಘವೇಂದ್ರ  ಶೆಟ್ಟಿ, ಬೆಂಗಳೂರು ಉತ್ತರ ಜಿಲ್ಲೆ ಉಪಾದ್ಯಕ್ಷ ಜಯರಾಮಯ್ಯ, ಮುಖಂಡರಾದ  ಶ್ರೀನಿವಾಸ್,  ನಿಸರ್ಗ ಜಗದೀಶ್, ಮುಂತಾದವರು ಪಾಲ್ಗೊಂಡಿದ್ದರು.