77ನೇ ಗಣರಾಜ್ಯೋತ್ಸ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದ ಸಚಿವ ಎಚ್‌.ಕೆ.ಪಾಟೀಲ

77ನೇ ಗಣರಾಜ್ಯೋತ್ಸ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದ ಸಚಿವ ಎಚ್‌.ಕೆ.ಪಾಟೀಲ Minister H.K. Patil performed the public flag hoisting ceremony on the 77th Republic Day


ಗದಗ  26: ಪ್ರಜಾಪ್ರಭುತ್ವದ ಮೌಲ್ಯಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿಗೌರವ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ದೃಢಸಂಕಲ್ಪ ಮಾಡಿ, ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸ್ವಿಯ ನವೆಂಬರ್ ತಿಂಗಳ 26ನೇ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ​‍್ಿಸಿಕೊಂಡು ಅಂಗೀಕರಿಸಿ ಶಾಸನವಾಗಿ ವಿಧಿಸಿಕೊಂಡಿದ್ದೇವೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ.ಪಾಟೀಲ ನುಡಿದರು.  

ನಗರದ ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರದಂದು ಜರುಗಿದ ಗಣರಾಜ್ಯೋತ್ಸ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾನದ ರಕ್ಷಕರಾಗಿರುವ ಉನ್ನತ ಹುದ್ದೆ ಅಲಂಕರಿಸಿ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ನಮ್ಮ ದೇಶದ ಜವಾಬ್ದಾರಿಯುತರು ಸಂವಿಧಾನದ ಉಲ್ಲಂಘನೆ ತಮ್ಮ ಮನಸೋ ಇಚ್ಛೆಯಂತೆ ಅದನ್ನು ಅರ್ಥೈಸಿ ಅಗೌರವಿಸುವ, ಸಂವಿಧಾನವನ್ನು ಉಲ್ಲಂಘಿಸುವ ಕೆಲಸ ನಡೆಯುತ್ತಿರುವುದು ಅತ್ಯಂತ ವಿಷಾದದ ಸಂಗತಿ. ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾದ ಮತ್ತು ಗಂಭೀರವಾದ ವಿಷಯಗಳನ್ನು ಶಾಸನಸಭೆಗಳಲ್ಲೂ ಸಹ ಗಮನಿಸದೇ ಕೇವಲ ರಾಜಕೀಯ ಕಾರಣಕ್ಕಾಗಿ ಮುಂದಾಲೋಚನೆ ಇಲ್ಲದೇ ಕೆಲವು ಅಂಶಗಳನ್ನು ತಮ್ಮ ರಾಜಕೀಯ ನಿಲುವುಗಳಿಗೆ ಪೂರಕವಾಗಿ ವ್ಯಾಖ್ಯಾನಿಸುತ್ತಿರುವುದು ಕಳವಳಕಾರಿಯಾಗಿದೆ ಎಂದರು.  

ರಾಜ್ಯದಿಂದ ಹೆಚ್ಚಿನ ತೆರಿಗೆ ಕೊಡುಗೆಯನ್ನು ಕೇಂದ್ರಕ್ಕೆ ನೀಡುತ್ತಿದ್ದರೂ ಅತ್ಯಂತ ಕನಿಷ್ಠ ನೆರವುನಮಗೆ ಹರಿದುಬರುತ್ತಿದೆ. ಇದರ ಹೊರತಾಗಿಯೂ ಕರ್ನಾಟಕವು ತನ್ನ ಸ್ವಂತ ಸಂಪನ್ಮೂಲಗಳಿಂದ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ 1.25 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಕರ್ನಾಟಕದ ತಲಾ ಆದಾಯವು ಜಿಲ್ಲಾವಾರು ಲೆಕ್ಕ ಹಾಕಿದಾಗ ಗಣನೀಯವಾಗಿ ಹೆಚ್ಚಾಗಿರುವುದು ನೆಮ್ಮದಿ ತಂದಿದೆ. ಗದಗನಂಥ ಜಿಲ್ಲೆಯಲ್ಲಿ ಅರ್ಥ ವ್ಯವಸ್ಥೆಯು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದ್ದು ತಲಾ ಆದಾಯವು ಕನಿಷ್ಠ ರೂ.22000 ಪ್ರತಿ ತಿಂಗಳಿಗೆ ತಲುಪಿರುವುದು ಸಂತಸದ ಸಂಗತಿಯಾಗಿದೆ. 

ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾದದ್ದು ನಮ್ಮ ಕರ್ತವ್ಯ. ಸಂವಿಧಾನದ ಅಣತಿಗಳನ್ನು ಮತ್ತು ನಿರ್ದೇಶನಗಳನ್ನು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಚಲನಶೀಲಗೊಳಿಸುವ ಸದುದ್ದೇಶದಿಂದ ಪಾಲನೆ ಮಾಡಬೇಕಾದುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಸಂವಿಧಾನವನ್ನು ಉಲ್ಲಂಘಿಸುವ ಸಣ್ಣ ಕ್ರಿಯೆಯನ್ನು ಸಹ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಮತ್ತು ಜವಾಬ್ದಾರಿ ಭಾರತೀಯ ನಾಗರೀಕನದ್ದಾಗಿದ್ದು ಈ ಜವಾಬ್ದಾರಿಯನ್ನು ನಾಗರೀಕರು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕು. ಸಂವಿಧಾನದ ಅಡಿಯಲ್ಲಿ ಮತ್ತು ಅದನ್ನು ಪಾಲಿಸಿ ನಡೆಸುವಂತೆ ಪರಿಪೂರ್ಣವಾದ ಸಂವಿಧಾನದ ಪಾಲನೆಯ ಕ್ರಮಗಳಿಗೆ ಮುಂದಾಗುವಂಥ ವ್ಯವಸ್ಥೆ ಈ ರಾಷ್ಟ್ರದಲ್ಲಿ ರೂಪುಗೊಳ್ಳಬೇಕು ಅದಕ್ಕಾಗಿ ಭಾರತೀಯ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಸಚಿವ ಎಚ್‌.ಕೆ.ಪಾಟೀಲ ಅವರು ಕರೇ ನೀಡಿದರು. 

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್‌.ವಿ.ಸಂಕನೂರ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್‌.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ,ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಉಪವಿಭಾಗಾಧಿಕಾರಿ, ಗಂಗಪ್ಪ ಎಂ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಸಿ.ಆರ್‌.ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.