ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಮಿನಿ ಉದ್ಯೋಗ ಮೇಳ

ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಮಿನಿ ಉದ್ಯೋಗ ಮೇಳ  Mini job fair to provide employment opportunities for persons with disabilities


ಹೂವಿನಹಡಗಲಿ, ಆ.25: ಇಲ್ಲಿನ ಜಿಪಿಜಿ ಬಾಲಕರ ಪೌಢಶಾಲೆಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಎಪಿಡಿ ಸಂಸ್ಥೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಕಲಚೇತನರಿಗಾಗಿ ಮಿನಿ ಉದ್ಯೋಗ ಮೇಳ ನಡೆಯಿತು.  

ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ತಾ.ಪಂ. ಇಒ ಪರಮೇಶಪ್ಪ ಮಾತನಾಡಿ, ಗ್ರಾಮೀಣ ಭಾಗದ ಅರ್ಹ ವಿಕಲಚೇತನರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.  

ಪುರಸಭೆಯ ವ್ಯವಸ್ಥಾಪಕ ಉಮೇಶ್ ರಾವ್ ಮಾತನಾಡಿ, ವಿಕಲಚೇತನರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರಾಗಲು ಇಂತಹ ಉದ್ಯೋಗ ಮೇಳಗಳು ಸಹಕಾರಿಯಾಗಲಿವೆ ಎಂದರು.  

ತರಬೇತಿ ಹಾಗೂ ಉದ್ಯೋಗಾವಕಾಶಗಳ ಕುರಿತು ಎಪಿಡಿ ಸಂಸ್ಥೆಯ ವ್ಯವಸ್ಥಾಪಕ ವಿಜಯಕುಮಾರಿ, ಸಂಯೋಜಕ ಸಂತೋಷ್ ಹಾಗೂ ತರಬೇತುದಾರ ಸುರೇಶ್ ಸಿಬಿ ಮಾಹಿತಿ ನೀಡಿದರು.  ಉದ್ಯೋಗ ಮೇಳದಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ವಿವಿಧ ಹುದ್ದೆಗಳಿಗೆ 22 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.  ಕಾರ್ಯಕ್ರಮದಲ್ಲಿ ಹಡಗಲಿ ತಾಲ್ಲೂಕಿನ ವಿಕಲಚೇತನರ ಕಲ್ಯಾಣ ಹಾಗೂ ಸಬಲೀಕರಣ ಇಲಾಖೆಯ ಸಿಬ್ಬಂದಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.