ಸಾಲೋಟಗಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಸೆಂಟ್ರಲ್ ಬ್ಯಾಂಕ್ ಇಂಡಿಯಾದಿಂದ ಸನ್ಮಾನ

ಸಾಲೋಟಗಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಸೆಂಟ್ರಲ್ ಬ್ಯಾಂಕ್ ಇಂಡಿಯಾದಿಂದ ಸನ್ಮಾನ Merit awards for students in Salotagi: Felicitation by Central Bank of India

ಲೋಕದರ್ಶನ ವರದಿ 

ಇಂಡಿ 07 : ತಾಲೂಕಿನ ಸಾಲೋಟಗಿ ಗ್ರಾಮದ ಎಸ್‌.ವೈ. ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ’ಪ್ರತಿಭಾ ಪುರಸ್ಕಾರ’ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. 2026ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಶಾಖಾ ಪ್ರಬಂಧಕರಾದ ರಾಜು ತಿವಾರಿ ಅವರು, "ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ಗುರಿಯ ಮೂಲಕ ಸಾಧನೆ ಮಾಡಬೇಕು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿದ್ದು, ಇಂತಹ ಪ್ರೋತ್ಸಾಹಕ ಕಾರ್ಯಕ್ರಮಗಳು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ" ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಎಸ್‌.ಡಿ. ಕಲ್ಯಾಣಿ ಹಾಗೂ ಮುಖ್ಯ ಗುರುಗಳಾದ ಢಾನೆ ಅವರು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಬ್ಯಾಂಕ್ ವತಿಯಿಂದ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ಪ್ರಬಂಧಕರಾದ ಕುಮಾರಿ ಶ್ರುತಿ ಸುರೇಶ್ ಅರಸಗೊಂಡ್, ಗ್ರಾಹಕ ಸೇವಾ ಸಹಾಯಕಿ ಕುಮಾರಿ ಅನಗ ರಮೇಶ್ ಹಾಗೂ ಕಾಲೇಜಿನ ನಿರ್ದೇಶಕರಾದ ವಿಜು ಗೊಂಡ ಸೇರಿದಂತೆ ಶಾಲಾ-ಕಾಲೇಜಿನ ಸಿಬ್ಬಂದಿ ವರ್ಗದವರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.