ಪಂಚಮಸಾಲಿ ಸಮಾಜದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಆಗಸ್ಟ್‌ 9ರಂದು

ಪಂಚಮಸಾಲಿ ಸಮಾಜದಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಆಗಸ್ಟ್‌ 9ರಂದು  Merit awards and felicitation of achievers by the Panchamasali community on August 9

ಲೋಕದರ್ಶನ ವರದಿ

ಜಮಖಂಡಿ 5: ನಗರದ ರಾಣಿಚನ್ನಮ್ಮ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಗಸ್ಟ್‌ 9ರಂದು ಆಯೋಜಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಪ್ರಕಾಶ ಪಾಟೀಲ ತಿಳಿಸಿದರು.  

ನಗರದ ರಾಣಿಚನ್ನಮ್ಮ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ 90 ಶೇಕಡಾ ಹಾಗೂ ಪಿಯುಸಿಯಲ್ಲಿ 85 ಶೇಕಡಾ ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದರು.  

ಇದೇ ವೇಳೆ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ 15 ಸಾವಿರ, 10 ಸಾವಿರ ಹಾಗೂ 5 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.  

ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳನ್ನು ಜುಲೈ 25ರೊಳಗೆ ರಾಣಿಚನ್ನಮ್ಮ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಸಲ್ಲಿಸುವಂತೆ ಅವರು ಮನವಿ ಮಾಡಿದರು.  

ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಪಿ.ಎನ್‌. ಪಾಟೀಲ ಮಾತನಾಡಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಸಮಾಜದ ಮುಖಂಡರು ಹಾಗೂ ಮಠಾಧೀಶರು ಭಾಗವಹಿಸಲಿದ್ದು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.  

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಕಾರ್ಯದರ್ಶಿ ಪಿ.ಎಂ. ಜುಲ್ಪಿ, ರಾಜಶೇಖರ ಕೋವಳ್ಳಿ, ಎನ್‌.ಬಿ. ಬಿರಾದಾರ, ಸಿ.ಎಂ. ನ್ಯಾಮಗೌಡ, ಬಿ.ಎಂ. ಪಾಟೀಲ, ಶಂಕರ ಸಂತೋರ್, ಸಂಗಮೇಶ ಕೌಜಲಗಿ, ಈಶ್ವರ ನ್ಯಾಮಗೌಡ, ಬಸವರಾಜ ಬಳಗಾರ ಹಾಗೂ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಸಂಗಮೇಶ ಐನಾಪುರ ಉಪಸ್ಥಿತರಿದ್ದರು.