ಧಾರವಾಡ 24: ದಿಮಿತ್ರಿ ಮೆಂಡಲೀವ್ರವರು ರಷ್ಯದ ರಸಾಯನಶಾಸ್ತ್ರಜ್ಞ. ಅವರು ಆವರ್ತ ಕೋಷ್ಟಕವನ್ನು ಕಂಡುಹಿಡಿದರು ಮತ್ತು ಅವರ ಜೀವನವನ್ನೇ ರಸಾಯನಾಸ್ತ್ರದ ಸಂಶೋಧನೆಗಾಗಿ ಮುಡುಪಾಗಿಟ್ಟರು. ರಸಾಯನ ಶಾಸ್ತ್ರದಲ್ಲಿ ಅತ್ಯಂತ ಆಸಕ್ತಿಯಿದ್ದ ಮೆಂಡಲೀವ್ ತಮ್ಮ 21ನೇ ವಯಸ್ಸನಲ್ಲೇ 500ಕ್ಕಿಂತಲು ಹೆಚ್ಚು ಪುಟಗಳನ್ನೊಳಗೊಂಡು ಪುಸ್ತಕವನ್ನು 64 ದಿನದಲ್ಲೇ ಹಗಲು ರಾತ್ರಿ ಬರೆದರು ಎಂದು ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ಯ ಕಾರ್ಯದರ್ಶಿ ಕೆ.ಎಸ್ ರಜಿನಿಯವರು ಹೇಳಿದರು.
ಅವರು ನಗರದ ಸಾಯಿ ಪಿ.ಯು ಕಾಲೇಜಿನಲ್ಲಿ ಇಂಟರ್ನ್ಯಾಷನಲ್ ಇಯರ್ ಆಫ್ ಪಿರಿಯಾಡಿಕ್ ಟೇಬಲ್ ಅಂಗವಾಗಿ ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ಧಾರವಾಡ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜ್ಞಾನದ ಸಮುದ್ರ ತುಂಬಾ ಸುಂದರವಾಗಿದೆ, ಈ ಸಮುದ್ರಕ್ಕೆ ಎಲ್ಲಾ ಜನತೆ ಸೇರಿ ಅದರ ಸಂತೋಷವನ್ನು ಸವಿಯಬೇಕು ಹಾಗಾಗಿ ಈ ಸಮುದ್ರಕ್ಕೆ ಎಲ್ಲರನ್ನು ಕರೆತರುವ ಕೆಲಸವನ್ನು ಮಾಡಲು ತುಂಬಾ ಸಂತೋಷವೆಂದು ಮೆಂಡಲಿವ್ ನಂಬಿದ್ದರು ಹಾಗೇ ಜೀವನ ನಡೆಸಿದರು. ಇದರ ಸ್ಫೂರ್ತಿಯನ್ನು ನಾವೂ ಪಡೆದು ವಿಜ್ಞಾನವನ್ನು ಪಸರಿಸಲು ಮುಂಬರಬೇಕೆಂದು ವಿದ್ಯಾರ್ಥಿಗಳಿಗೆ ಕೆ.ಎಸ್ ರಜಿನಿ ಕರೆನೀಡಿದರು.
ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ಯ ರಾಜ್ಯಾಧ್ಯಕ್ಷರ ಕೆ.ಜಿ.ಸತೀಶ್ ಕುಮಾರ್ ರವರು ಹೇಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಉದಾಹರಣೆಗಾಗಿ ಇಂದು ವಾಟ್ಸಾಪ್ ಮೆಸೇಜ್ಗಳಲ್ಲಿ ಸುಳ್ಳು ಸುದ್ದಿ, ಅವೈಜ್ಞಾನಿಕ ಸುದ್ದಿಗಳನ್ನು ನಮ್ಮ ತರ್ಕಬದ್ದವಾದ ಚಿಂತನೆಯಿಂದ ಸತ್ಯವೋ,ಮಿತ್ಯವೋ ಎಂದು ಪರೀಕ್ಷಿಸುವುದು ಕೂಡ ನಮ್ಮಲ್ಲಿ ಮಾನಸಿಕ ಬೆಳವಣಿಗೆಗೆೆ ಮತ್ತು ಸಮಾಜದಲ್ಲಿ ಮೌಢ್ಯತೆಯನ್ನು ಹೋಗಲಾಡಿಸಿ ಸತ್ಯವನ್ನು ಸ್ಥಾಪಿಸಲು ಸಹಾಯವಾಗುತ್ತದೆ. ಇದು ವಿಜ್ಞಾನ ವಿಧ್ಯಾರ್ಥಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇಂಟರ್ನ್ಯಾಷನಲ್ ಇಯರ್ ಆಫ್ ಪಿರಿಯಾಡಿಕ್ ಟೇಬಲ್ನ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ದೇಯಲ್ಲಿ ಸುಮಾರು ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಸಾಯಿ ಪಿ.ಯು ಕಾಲೇಜಿನ ಪ್ರಾಂಶುಪಾಲ ವೀಣಾ ಬಿರಾದರ್ರವರು ನೀಡಿದರು. ಬಾಸೆಲ್ ಮಿಷನ್ ಕಾಲೇಜಿನ ಡಾ. ರೀಟಾ ಉಪಸ್ಥಿತರಿದ್ದರು. ಬ್ರೇಕ್ಥ್ರೂ ಸೈನ್ಸ್ ಸೊಸೈಟಿ ಯ ಧಾರವಾಡ ಜಿಲ್ಲಾ ಘಟಕದ ಸಂಚಾಲಕಿ ದೀಪಾರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.