ಅಧಿಕಾರಿಗಳು ಕೇವಲ ಕಾಲಹರಣ ಮಾಡುತ್ತಿದ್ದಾರೆ ಸದಸ್ಯರ ಆರೋಪ

ಅಧಿಕಾರಿಗಳು ಕೇವಲ ಕಾಲಹರಣ ಮಾಡುತ್ತಿದ್ದಾರೆ ಸದಸ್ಯರ ಆರೋಪ Members allege that officials are just wasting time

ಶಿಗ್ಗಾವಿ 21 : ಪಟ್ಟಣದ ಶೇ. 60 ರಷ್ಟು ಕಾಲುವೆಗಳ ನೀರು ಪಟ್ಟಣದ ಸವಣೂರ ರಸ್ತೆಯ ಜಿಎಂಜಿ ಶಾಲೆಯ ಹತ್ತಿರ ಸಂಗ್ರಹ ಆಗುತ್ತದೆ. ಈ ಕುರಿತು ಕಳೆದ ನಾಲ್ಕು ಸಾಮಾನ್ಯ ಸಭೆಗಳಲ್ಲಿ ಚರ್ಚಿಸಿದರೂ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಹಾಗೂ ನಾಮನಿರ್ದೇಶಿತ ಸದಸ್ಯ ಚಂದ್ರು ಕೊಡ್ಲಿವಾಡ ಪುರಸಭೆ ಇಂಜನೀಯರ್‌ಗಳ ವಿರುದ್ಧ ಹರಿಹಾಯ್ದರು. 

ಪಟ್ಟಣದ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಕೇವಲ ಕಾಲಹರಣ ಮಾಡುತ್ತಿದ್ದಾರೆ ಎಂದು ಸದಸ್ಯರು ತಿಳಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಮಲ್ಲೇಶ ಅವರು ಸ್ಥಳಕ್ಕೆ ನಾನು ತೆರಳಿ ಪರೀಶೀಲಿಸಿದ್ದೇನೆ. ಸದ್ಯದಲ್ಲಿಯೇ ಆ ಕುರಿತು ಕ್ರಮ ಜರುಗಿಸುತ್ತೇವೆ  ಕಳೆದ ಅಧ್ಯಕ್ಷರ ಅವಧಿಯಲ್ಲಿ ಸಂತೆ ಮೈದಾನದ ಅಭಿವೃದ್ಧಿ ಹಣ ಬೇರೆ ವಿವಿಧ ವಾರ್ಡ್‌ಗಳಿಗೆ ಸದಸ್ಯರ ಗಮನಕ್ಕೂ ತರದೆ ಹಂಚಿಕೆ ಮಾಡಿರುವುದು ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಅಧ್ಯಕ್ಷೆ ರೂಪ ಬನ್ನಿಕೊಪ್ಪ ಪಟ್ಟಣದ ಅಭಿವೃದ್ಧಿಗೆ ಆ ಹಣ ಬಳಸಲಾಗಿದೆ. ಅದನ್ನು ಸಭೆಯಲ್ಲಿಯೂ ಚರ್ಚಿಸಲಾಗಿದೆ. ಅಧ್ಯಕ್ಷಳಿದ್ದಾಗ ಏಕಪಕ್ತಿಯವಾಗಿ ಆ ಹಣ ಬಳಸಿಲ್ಲ ಎಂದು ಪ್ರತಿಕ್ರಿಯಿಸಿದರು.  ಸಂತೆ ಮೈದಾನದ ಅಭಿವೃದ್ಧಿಗೆ ಇಟ್ಟಿದ್ದ ಒಂದುವರೆ ಕೋಟಿ ಹಣ ತೆಗೆದು ಕೇವಲ 15 ವಾರ್ಡ್‌ಗಳ ಸದಸ್ಯರಿಗೆ ಹಂಚಿಕೆ ಮಾಡಿರುವುದು ವೈಯಕ್ತಿಕವಾಗಿ ನನಗೂ ಬೇಸರ ತರಿಸಿತು. ಇದನ್ನು ಪುರಸಭೆಯ ಇಂಜನೀಯರಗಳೊಂದಿಗೆ ಅಂದೇ ಚರ್ಚಿಸಿದೆ ಎಂದು ಸಭೆಗೆ ಸದಸ್ಯ ಪರಶುರಾಮ ಸೊನ್ನದ ಮಾಹಿತಿ ನೀಡಿದರು. ಪಟ್ಟಣದಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಇಲ್ಲದೆ ಕೆಟ್ಟು ನಿಂತಿವೆ. 

ಈ ಪುರಸಭೆ ಮುಖ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಗಂಭೀರ ಆರೋಪ ಮಾಡಿದರು. ಈ ಕುರಿತು ಅದರ ನಿರ್ವಹಣೆಯ ಕುರಿತು ನಿಷ್ಕಾಳಜಿ ಮಾಡಲಾಗಿದೆ. ಆದರ ನಿರ್ವಹಣೆ ಖರ್ಚು-ವೆಚ್ಚ ಎಲ್ಲಿ ಹೋಗುತ್ತಿದೆ? ಎಂದು ಸದಸ್ಯ ಶ್ರೀಕಾಂತ ಬುಳ್ಳಕನವರ ಪ್ರಶ್ನಿಸಿದರು.ಆಮೃತ ಯೋಜನೆಯಲ್ಲಿ ಈಗಾಗಲೇ 28.24 ಕೋಟಿ ಕೇಂದ್ರ ಸರಕಾರದ್ದು, 2259 ಕೋಟಿ ರಾಜ್ಯ ಸರಕಾರದ್ದು, 5 ಕೋಟಿ ಪುರಸಭೆ ಹಣ ಭರಿಸುತ್ತಿದ್ದು, ಪಟ್ಟಣಕ್ಕೆ 24/7 ಕುಡಿಯುವ ನೀರು ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮುಖ್ಯಾಧಿಕಾರಿಗಳು ಮಾಹಿತಿ ನೀಡಿದರು. ಜೊತೆಗೆ ಶಾಸಕರ 361 ಕೋಟಿ ವೆಚ್ಚದ ಅನುದಾನ ಕುರಿತು ಶಾಶ್ವತ ಕುಡಿಯುವ ನೀರು ಯೋಜನೆ ಕುರಿತು ಸಭೆಯಲ್ಲಿ ಚರ್ಚಿಸಿ ಶಾಶ್ವತ ಕುಡಿಯುವ ನೀರು ಯೋಜನೆಯ ಅನುದಾನದ ಕುರಿತು ಮಾಹಿತಿ ತಿಳಿದು ಬರಬೇಕಿದೆ ಎಂದು ಸಭೆಗೆ ಮುಖ್ಯಾಧಿಕಾರಿ ಮಾಹಿತಿ ನೀಡಿದರು. 

ಕೆರೆ ಅಭಿವೃದ್ಧಿ ಕಾಮಗಾರಿಗೆ ಖಾಸಗಿ ಅವರಿಗೆ ಸರ್ವೆ, ಡಿಪಿಆರ್ ಹಾಗೂ ವಿವಿಧ ಎಪಿಮೆಂಟ್ ಮಾಡಲು ನೀಡಿದರೆ 5 ಲಕ್ಷದ ದರದಲ್ಲಿ ಆಗುತ್ತದೆ. ಆದರೆ ಕೆಡಬ್ಲ್ಯುಎಸ್‌ದವರು 38 ಲಕ್ಷಗಳ ಹೆಚ್ಚಿಗೆ ದರಕ್ಕೆ ಮಾಡುತ್ತಿದ್ದಾರೆ. ಇದರ ಕುರಿತು ಸಭೆಗೆ ಮಾಹಿತಿ ನೀಡುವಂತೆ ಸದಸ್ಯ ಶ್ರೀಕಾಂತ ಬುಳ್ಳಕ್ಕನರ ಮಾಹಿತಿ ಕೇಳಿದರು. ಸಭೆಯಲ್ಲಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್, ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ, ಉಪಾಧ್ಯಕ್ಷೆ ಶಾಂತಾಬಾಯಿ ಸುಬೇದಾರ ಸೇರಿದಂತೆ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.