ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಖಾಸಗಿ ಆಸ್ಪತ್ರೆಗಳ ಸಭೆ

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಖಾಸಗಿ ಆಸ್ಪತ್ರೆಗಳ ಸಭೆ Meeting of private hospitals held under the chairmanship of the District Collector

           ಧಾರವಾಡ   10: ಕೆಪಿಎಂಇ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳ ನೋಂದಣಿಗಾಗಿ ಹಾಗೂ ನೋಂದಣಿ ನವೀಕರಣಕ್ಕಾಗಿ ಯಾರಿಗೂ ವಿನಂತಿಸುವ ಅಗತ್ಯವಿಲ್ಲ. ಆನ್‌ಲೈನ್‌ದಲ್ಲಿ ಅರ್ಜಿ ಸಲ್ಲಿಸಿ. ಪರೀಶೀಲಿಸಿ, ಕೆಪಿಎಂಇ ನಿಯಮಾನುಸಾರ ಇದ್ದಲ್ಲಿ 90 ದಿನಗಳಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ಎಲ್ಲವನ್ನು ಪಾರದರ್ಶಕತೆಯಿಂದ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅವರು ಇಂದು (ಡಿ.10) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳ ಸಭೆ ಜರುಗಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಎಲ್ಲ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಅವಳಿನಗರದಲ್ಲಿ ಕೆಲವು ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ದರ ವಸೂಲು ಮಾಡುತ್ತಿರುವುದು, ಸಮರ​‍್ಕ ಚಿಕಿತ್ಸೆ ನೀಡದೆ ಕೊನೆಯ ಹಂತದಲ್ಲಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವುದು, ಇದರಿಂದ ರೋಗಿಗಳಿಗೆ ತೊಂದರೆ ಆಗುತ್ತಿದೆ ಎಂದು ದೂರು ಬಂದಿವೆ. ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕೆಪಿಎಂಇ ಕಾಯ್ದೆ ಅನುಸಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.  

ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ ಮುಖ್ಯವಾಗಿದೆ. ಕೆಪಿಎಂಇ ಕಾಯ್ದೆಯಡಿ ನೋಂದಣಿ ಆಗಿರುವ ಆಸ್ಪತ್ರೆಗಳ ಸಹಕಾರಬೇಕು. ನಕಲಿ ವೈದ್ಯರ, ನಕಲಿ ಆಸ್ಪತ್ರೆ, ನಕಲಿ ಜೌಷಧಿಗಳನ್ನು ತಡೆಗಟ್ಟಲು, ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಿ ಕ್ರಮಕೈಗೊಳ್ಳಲಾಗುತ್ತಿದೆ. ನಕಲಿ ವೈದ್ಯರು, ಆಸ್ಪತ್ರೆಗಳು ಇದ್ದಲ್ಲಿ ಸಾರ್ವಜನಿಕರು ಮತ್ತು ವೈದ್ಯರು ಆರೋಗ್ಯ ಇಲಾಖೆಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಬಹುದು ಎಂದು ಅವರು ತಿಳಿಸಿದರು.  

ಮುಖ್ಯವಾಗಿ ಎಲ್ಲ ಆಸ್ಪತ್ರೆಗಳು ಜನರಿಗೆ ಎದ್ದು ಕಾಣುವಂತೆ ಆಸ್ಪತ್ರೆಯ ಮುಖ್ಯಸ್ಥಳದಲ್ಲಿ ತಾವು ನೀಡುವ ಚಿಕಿತ್ಸೆಗಳ ದರಪಟ್ಟಿ ಪ್ರದರ್ಶಿಸಬೇಕು. ಬೈಯೊಮೆಡಿಕಲ್ ವೆಸ್ಟ ನಿರ್ವಹಣೆ, ಆಸ್ಪತ್ರೆ ವೈದ್ಯರು, ಡ್ಯೂಟಿ ಡಾಕ್ಟರ್, ಕನ್ಸಲಟೆಂಟ್ ಡಾಕ್ಟರ್, ಬೆಡ್‌ಗಳು, ಅಗ್ನಿಶಾಮಕ ಸುರಕ್ಷತಾ ಕ್ರಮ, ಎಸ್‌ಟಿಪಿ ಬಗ್ಗೆ ಮತ್ತು ಸಾಂಕ್ರಾಮಿಕ, ಅಧಿಸೂಚಿತ ರೋಗಿಗಳ ಮಾಹಿತಿ ನಿರ್ವಹಿಸಬೇಕು. ಕೆಪಿಎಂಇ ಕಾಯ್ದೆಯಲ್ಲಿ ಸುಸಜ್ಜಿತ ಮತ್ತು ಸುರಕ್ಷಿತ ಆಸ್ಪತ್ರೆಗೆ ಅಗತ್ಯವಿರುವ ನಿಯಮಗಳ ಉಲ್ಲೇಖವಿದ್ದು, ಅವುಗಳನ್ನು ಅಳವಡಿಸಿಕೊಂಡು ತಪ್ಪದೆ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.  

ವೈದ್ಯ ವೃತ್ತಿ ಬಗ್ಗೆ ಅಪಾರ ಗೌರವವಿದ್ದು, ಸಾರ್ವಜನಿಕರಿಗೆ ತೊಂದರೆ, ಕೆಪಿಎಂಇ ನಿಯಮಗಳ ಉಲ್ಲಂಘನೆ ಸಹಿಸುವುದಿಲ್ಲ. ಸಾರ್ವಜನಿಕರ ದೂರುಗಳ ತನಿಖೆಯಲ್ಲಿ ಸಾಬಿತಾದರೆ, ಕಾಯ್ದೆ ಪ್ರಕಾರ ಆಸ್ಪತ್ರೆಯ ಪರವಾನಿಗೆ ರದ್ದು ಮಾಡಿ, ದಂಡ ವಿಧಿಸಲಾಗುವುದು. ವೈದ್ಯರು ದೇವರ ಸಮಾನ ಎಂಬ ನಂಬಿಕೆಯನ್ನು ಎಲ್ಲ ಆಸ್ಪತ್ರೆಗಳ ವೈದ್ಯರು ಉಳಿಸಬೇಕೆಂದು ಅವರು ಹೇಳಿದರು.   

ಆಸ್ಪತ್ರೆಗಳ ನೋಂದಣಿ, ನವೀಕರಣ ಹಾಗೂ ಸಾರ್ವಜನಿಕ ದೂರುಗಳ ಪರೀಶೀಲನೆಗೆ ಪ್ರತ್ಯೇಕ ತಪಾಸಣಾ ಸಮಿತಿಗಳನ್ನು ರಚಿಸಿ, ಆದೇಶಿಸಲಾಗಿದೆ. ದರ ಪರಿಷ್ಕರಣೆ, ಅನುದಾನ ಬಿಡುಗಡೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಭಾರತೀಯ ವೈಧ್ಯಕೀಯ ಸಂಘ ಹಾಗೂ ಇತರರು ಸಲ್ಲಿಸಿರುವ ಮನವಿಗಳನ್ನು ಪರೀಶೀಲಿಸಿ, ಸೂಕ್ತ ಶಿಫಾರಸ್ಸುಗಳೊಂದಿಗೆ ಸರಕಾರಕ್ಕೆ ರವಾನಿಸಲಾಗುತ್ತದೆ ಮತ್ತು ಆರೋಗ್ಯ ಹಾಗೂ ವೈಧ್ಯಕೀಯ ಸಚಿವರ ಗಮನಕ್ಕೆ ತಂದು ಬೇಡಿಕೆಗಳನ್ನು ಈಡೆರಿಸಲು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ನಿಯಮಾನುಸಾರ, ಉತ್ತಮ ರೀತಿಯಲ್ಲಿ ಆಸ್ಪತ್ರೆ ನಡೆಸಿ, ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು. ಚಿಕಿತ್ಸೆಗೆ ದಾಖಲಾಗುವವರ ಬಗ್ಗೆ ಕಾಳಜಿ, ಕರುಣೆ ಇರಲಿ ಎಂದು ಅವರು ಹೇಳಿದರು.  ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್‌.ಎಂ. ಹೊನಕೇರಿ ಅವರು ಸ್ವಾಗತಿಸಿ, ಸಭೆಯಲ್ಲಿ ಕೆಪಿಎಂಇ ಕಾಯ್ದೆಯ ಪ್ರಾತ್ಯಕ್ಷಿಕೆ ಪ್ರಸ್ತುತ ಪಡಿಸಿದರು.  

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡಿ, ಕೆಪಿಎಂಇ ನೋಂದಣಿ ಅರ್ಜಿ ಪರೀಶೀಲನೆ ಹಾಗೂ ಸ್ಥಳ ಪರೀವೀಕ್ಷಣಾ ಸಮಿತಿ ಸದಸ್ಯ ಡಾ. ದೇವರಾಜ ವಿರೂಪಾಕ್ಷಯ್ಯ ರಾಯಚೂರು ಅವರು ಇದ್ದರು. 

ಸಭೆಯಲ್ಲಿ ಶ್ರವ್ಯಾ ಆಸ್ಪತ್ರೆಯ ಡಾ.ಎಸ್‌.ಆರ್‌.ಜಂಬಗಿ, ಶ್ರೆಯಾ ಆಸ್ಪತ್ರೆಯ ಡಾ. ಸತೀಶ ಇರಕಲ್ಲ, ರೆಡಾನ್ ಆಸ್ಪತ್ರೆಯ ಡಾ. ಸಂಜಯ ಕುಲಗೋಡ, ಎಸ್‌.ಡಿ.ಎಂ. ಆಸ್ಪತ್ರೆಯ ಡಾ. ಕಿರಣ ಹೆಗಡೆ, ಡಾ. ಎಸ್‌.ಆರ್‌.ರಾಮನಗೌಡರ ಆಸ್ಪತ್ರೆಯ ಡಾ. ಶ್ರೀಕಂಠ ರಾಮನಗೌಡರ, ವೇದಿಕಾ ಆಸ್ಪತ್ರೆಯ ಡಾ. ಪ್ರಕಾಶ ಬಿರನೂರ, ಯುನಿಟಿ ಆಸ್ಪತ್ರೆಯ ಡಾ. ಜ್ಯೋತಿ ಪ್ರಕಾಶ ಸುಲ್ತಾನಪುರಿ, ಸುಶ್ರುತಾ ಆಸ್ಪತ್ರೆಯ ಡಾ. ದೇವರಾಜ ರಾಯಚೂರ, ಎಎಫ್‌ಐ ಅಧ್ಯಕ್ಷ ಡಾ. ರವೀಂದ್ರ ವೈ ಸೇರಿದಂತೆ ಧಾರವಾಡ ಮತ್ತು ಹುಬ್ಬಳ್ಳಿ ನಗರದ 50 ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರು, ಪ್ರತಿನಿಧಿಗಳು ಭಾಗವಹಿಸಿದ್ದರು.