ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜನೆ

ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜನೆ  Media Cricket League organized to mark Press Day

ಗದಗ, ಜುಲೈ 31: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜಿಸಲಾಗಿದೆ. ಗುರುವಾರ ನಗರದ ಪತ್ರಿಕಾ ಭವನದಲ್ಲಿ ರೂರಲ್ ಕಿಂಗ್ಸ್‌ ತಂಡದ ಲೋಗೋ, ಪ್ರೋಮೋ ಹಾಗೂ ಜೆರ್ಸಿ ಅನಾವರಣ ಕಾರ್ಯಕ್ರಮ ನಡೆಯಿತು.  

ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, “ಪತ್ರಕರ್ತರು ಸದಾ ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಾರೆ. ಈ ಒತ್ತಡ ನಿವಾರಣೆಯ ಉದ್ದೇಶದಿಂದ ಜಿಲ್ಲಾ ಮಟ್ಟದ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜಿಸಿರುವುದು ಸಂತಸದ ಸಂಗತಿ. ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯಲಿ” ಎಂದು ಶುಭ ಹಾರೈಸಿದರು. ಆಟಗಾರರಿಗೆ ಊಟದ ವ್ಯವಸ್ಥೆ ಮಾಡುವುದಾಗಿ ಅವರು ಭರವಸೆ ನೀಡಿದರು.  

ಹಿರಿಯ ವರದಿಗಾರ ಹಾಗೂ ವಿನ್ನರ್ಸ್‌ ತಂಡದ ಮಾಲೀಕ ಅನಂತ ಕಾಕರಳ ಮಾತನಾಡಿ, “ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ ಅಗತ್ಯ. ಈ ನಿಟ್ಟಿನಲ್ಲಿ ಮಾಧ್ಯಮ ಕ್ರಿಕೆಟ್ ಲೀಗ್ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಜಿಲ್ಲೆಯಾದ್ಯಂತ ಇರುವ ಮಾಧ್ಯಮ ಸ್ನೇಹಿತರು ಒಂದೇ ವೇದಿಕೆಯಲ್ಲಿ ಆಟವಾಡುವುದರಿಂದ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ” ಎಂದರು.  

ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, “ಪತ್ರಿಕಾ ದಿನಾಚರಣೆ ಅಂಗವಾಗಿ ಪ್ರಸಕ್ತ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತಾಲೂಕು ಮಟ್ಟದಲ್ಲಿಯೂ ಪತ್ರಕರ್ತರು ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಗದಗ ನಗರದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಎಲ್ಲ ತಂಡಗಳ ಆಟಗಾರರು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸಬೇಕು” ಎಂದು ಹೇಳಿದರು.