ಬೆಳಗಾವಿ ಸುವರ್ಣಸೌಧ,ಡಿ.13: ಕಾಡಾನೆಗಳು ಹಿಂಡು ಹಿಂಡಾಗಿ ಜನವಸತಿ ಪ್ರದೇಶಗಳಿಗೆ ಬಂದು ರೈತರ ಬೆಳಗಳನ್ನು ನಾಶ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇದನ್ನು ತಡೆಯಲು ಆನೆ ಕಾರ್ಯ ಪಡೆ, ಕ್ಷಿಪ್ರ ಸ್ಪಂದನ ತಂಡ ಮತ್ತು ಹಿಮ್ಮೆಟಿಸುವ ಶಿಬಿರ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಅವರು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಶಾಸಕರುಗಳ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ತಡೆಯಲು ಪ್ರತಿ ಜಿಲ್ಲೆಗೆ ಒಂದರಂತೆ ಅಧಿಕಾರಿ ಹಾಗೂ ಸಿಬ್ಬಂದಿನ್ನೊಳಗೊಂಡ 8 ಆನೆ ಕಾರ್ಯಪಡೆ ರಚಿಸಲಾಗಿದೆ. ಇತರೆ ವನ್ಯಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ತಲಾ 04 ಜನರ ತಂಡದಂತೆ 95 ಹಿಮ್ಮೆಟ್ಟಿಸುವ ತಂಡ ಹಾಗೂ 33 ಕ್ಷಿಪ್ರ ಸ್ಪಂದನೆ ತಂಡಗಳು ರಚಿಸಲಾಗಿದೆ. ಈ ತಂಡಗಳು ರಾತ್ರಿ ಗಸ್ತು ಕಾರ್ಯಕೈಗೊಂಡು ಪ್ರತಿನಿತ್ಯ ಕಾಡಾನೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಸಾರ್ವಜನಿಕರನ್ನು ಸಂಪರ್ಕಿಸಿ, ಆನೆಗಳ ಚಲನ-ವಲನಗಳ ಮಾಹಿತಿಯನ್ನು ನೀಡಿ, ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತಂತ್ರಜ್ಞಾನ ಬಳಕೆ: ರೇಡಿಯೋ ಕಾಲರ್ ಅಳವಡಿಸಿರುವ ಕಾಡಾನೆಗಳ ಚಲನವಲನಗಳನ್ನು ಗಮನಿಸಲು ‘ಹೆಜ್ಜೆ’ ಎಂಬ ಡ್ಯಾಶ್ ಬೋರ್ಡ್ನ್ನು ಅರಣ್ಯ ಇಲಾಖೆ ರೂಪಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳು ಎಚ್ಚರಿಕೆ ಹಾಗೂ ಮಾಹಿತಿ ನೀಡಲು ಅಡ್ವಾನ್ಸ್ ಅಲರ್ಟ್ ಸಿಸ್ಟಂ ರಚಿಸಲಾಗಿದೆ. ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಡಿಜಿಟಲ್ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಅರಣ್ಯ ಅಂಚಿನ ಪ್ರದೇಶಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳನ್ನು ಹಾಗೂ ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಆಕಾಶವಾಣಿ ಮುಖಾಂತರ ಹಾಗೂ ವಾಟ್ಸಾಪ್ ಗ್ರೂಪ್ಗಳಲ್ಲಿ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎಂದು ಸಚಿವ ಈಶ್ವರ ಬಿ ಖಂಡ್ರೆ ಮಾಹಿತಿ ನೀಡಿದರು.
ಪರಿಹಾರ ಧನ ವಿತರಣೆ: ಕಾಡಾನೆ ದಾಳಿ ಸೇರಿದಂತೆ ಯಾವುದೇ ವನ್ಯಪ್ರಾಣಿ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಈ ಹಿಂದೆ ಸರ್ಕಾರ ನೀಡುತ್ತಿದ್ದ ಪರಿಹಾರ ಧನವನ್ನು ರೂ.7.5 ಲಕ್ಷದಿಂದ 15 ಲಕ್ಷಕ್ಕೆ ಏರಿಸಲಾಗಿದೆ. ಇದರೊಂದಿಗೆ ಮೃತಪಟ್ಟ ಹಾಗೂ ಶಾಶ್ವತ ಅಂಗವಿಕಲತೆ ಹೊಂದಿದ ಕುಟುಂಬದವರಿಗೆ 5 ವರ್ಷಗಳವರೆಗೆ ಪ್ರತಿಗಳು ರೂ.4 ಸಾವಿರ ಮಾಸಾಶನ ನೀಡಲಾಗುವುದು. ಶಾಶ್ವತ ಅಂಗವಿಕಲತೆ ಉಂಟಾದರೆ ರೂ.10 ಲಕ್ಷ, ಭಾಗಶಃ ಅಂಗವಿಕಲತೆಗೆ ರೂ.5 ಲಕ್ಷ, ಗಾಯಗೊಂಡರೆ ರೂ.60 ಸಾವಿರ, ಆಸ್ತಿ ನಷ್ಟಕ್ಕೆ ರೂ.20 ಸಾವಿರ ಪರಿಹಾರ ಧನ ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಬೆಳೆಹಾನಿಯಾದರೆ ನಿಯಾಮನುಸಾರ ಪರಿಹಾರ ವಿತರಿಸಲಾಗುವುದು ಎಂದು ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.
ಬೇಲೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ 4 ಜನರು ಬಳಿಯಾಗಿದ್ದು, ಸರ್ಕಾರದ ಆದೇಶದಂತೆ 2021-22ನೇ ಸಾಲಿನ ಪ್ರಕರಣಗಳಿಗೆ ರೂ.7.5 ಲಕ್ಷ ಹಾಗೂ 2023-24ನೇ ಸಾಲಿನ ಪ್ರಕರಣಗಳಿಗೆ ರೂ.15 ಲಕ್ಷದಂತೆ ಒಟ್ಟು ರೂ.45 ಲಕ್ಷ ಪರಿಹಾರ ವಿತರಿಸಲಾಗಿದೆ. ಇದೇ ಅವಧಿಯಲ್ಲಿ ಘಟಿಸಿದ 1468 ಬೆಳೆ ಹಾನಿ ಪ್ರಕರಣದಲ್ಲಿ ಒಟ್ಟು ರೂ.2.10 ಕೋಟಿ ಪರಿಹಾರ ನೀಡಲಾಗಿದೆ ಎಂದು ಶಾಸಕ ಸುರೇಶ್ ಹೆಚ್.ಕೆ. ಅವರ ಚುಕ್ಕೆ ಗುರುತಿನ ಪ್ರಶ್ನೆ 1098ಕ್ಕೆ ಸಚಿವರು ಸದನದಲ್ಲಿ ಸಚಿವ ಈಶ್ವರ ಖಂಡ್ರೆ ಉತ್ತರಿಸಿದರು.
ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 500 ಕೋಟಿ ರೂ. ಪ್ರಸ್ತಾವ : ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗದಂತೆ ತಡೆಯಲು ರೈಲ್ವೇ ಹಳಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. 08-ಆನೆಕಾರ್ಯಪಡೆ ರಚಿಸಿ, ಆನೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಆನೆಗಳನ್ನು ಹಿಮ್ಮೆಟ್ಟಿಸಲು ಎಸ್ಒಪಿ ರೂಪಿಸಿ, ಅದರನ್ವಯವೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಈಗಾಗಲೆ ರಾಜ್ಯದಲ್ಲಿ 369 ಕಿ.ಮೀ. ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಿಸಿದ್ದು, 60 ಕಿ.ಮೀ. ನಿರ್ಮಾಣ ಪ್ರಗತಿಯಲ್ಲಿದೆ. ಇನ್ನೂ 350 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕಿದ್ದು, ಇದಕ್ಕಾಗಿ 500 ಕೋಟಿ ರೂ. ಗಳ ಬಿಡುಗಡೆಗೆ ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ಆನೆಗಳ ಚಲನ-ವಲನದ ಬಗ್ಗೆ ಅಧ್ಯಯನ ಕೈಗೊಂಡು ವರದಿ ಸಲ್ಲಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ವರದಿಯ ಆಧಾರದಲ್ಲಿ ಸರ್ಕಾರ ಮುಂಬರುವ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ಸದನಕ್ಕೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಕಲ್ಲುಕ್ವಾರಿಗಳಿಗೆ ಯಾವುದೇ ತೊಂದರೆ ನೀಡಿಲ್ಲ: ಮೀಸಲಿಟ್ಟ ಅರಣ್ಯ ಪ್ರದೇಶದಲ್ಲಿ ಕಲ್ಲು ಕ್ವಾರಿಗಳನ್ನು ನಡೆಸಲು ವನ ಸಂರಕ್ಷಣಾ ಮತ್ತು ಸಂವರ್ಧನೆ ಅಧಿನಿಯಮ-1980 ಹಾಗೂ 2023ರ ನಿಯಮಾನಸಾರ ತಿತಿತಿ.ಠಿಚಿಡಿತ.ಟಿಛಿ ವೆಬ್ ಪೋರ್ಟಲ್ ಮೂಲಕ ಪ್ರಸ್ತಾವನೆಯನ್ನು ಅಗತ್ಯ ದಾಖಲೆಗಳ ಮೂಲಕ ಸಲ್ಲಿಸಬೇಕು. ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ಅವಕಾಶವಿಲ್ಲ. ಒಂದು ವೇಳೆ ಪರವಾನಿಗೆ ಪರ್ಯಾಯವಾಗಿ ಬೇರೆ ಭೂಮಿಯನ್ನು ಅರಣ್ಯ ಮೀಸಲು ಇಡಬೇಕು. ಈ ನಿಯಮಗಳ ಅನುಸಾರ ಪ್ರಸ್ತಾವನೆ ಸಲ್ಲಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಕಲ್ಲುಕ್ವಾರಿಗಳನ್ನು ನಡೆಸುತ್ತಿರುವವರಿಗೆ ಯಾವುದೇ ತೊಂದರೆ ನೀಡಿಲ್ಲ ಎಂದು ಬದಾಮಿ ಶಾಸಕ ಚಿಮ್ಮನಕಟ್ಟಿ.ಬಿ.ಬಿ ಅವರ ಚುಕ್ಕೆ ಗುರುತಿನ ಪ್ರಶ್ನೆ 1450ಕ್ಕೆ ಸಚಿವ ಈಶ್ವರ ಖಂಡ್ರೆ ಉತ್ತರಿಸಿದರು.
2 ಸಾವಿರ ಹೆ. ನಲ್ಲಿ ಆನೆಗಳ ವಿಹಾರಧಾಮ : ಕೊಡಗು ಮತ್ತು ಹಾಸನದಲ್ಲಿ ಕಾಡಾನೆಗಳ ಕಾಟ ನಿಯಂತ್ರಿಸಲು ಕೊಡಗು ಮತ್ತು ಹಾಸನ ಬಳಿ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆನೆಗಳ ವಿಹಾರಧಾಮ (ಎಲಿಫೆಂಟ್ ಸಾಫ್ಟ್ ರೀಲೀಸ್ ಸೆಂಟರ್) ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗೆ ತಿಳಿಸಿದರು. ಬೇಲೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿಯಿಂದ ಹಾನಿಗೊಳಗಾದ ಮಾನವ ಪ್ರಾಣಹಾನಿ ಮತ್ತು ಮಾನವ ಗಾಯ ಪ್ರಕರಣಗಳಿಗೆ ಪರಿಹಾರ ಧನ ನೀಡಲಾಗುತ್ತಿದೆ ಎಂದರು. ಹಾಸನ ಜಿಲ್ಲಾ ವ್ಯಾಪ್ತಿಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಗ್ರಾಮಗಳಲ್ಲಿ ಕಳೆದ 03 ತಿಂಗಳಿನಿಂದ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ, ಈ ಕಾಡಾನೆಗಳನ್ನು ಅರಣ್ಯ ಪ್ರದೇಶಗಳ ಕಡೆಗೆ ಹಿಮ್ಮೆಟಿಸಲು ಇಲಾಖಾ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಶಾಸಕರ ಹೇಳಿಕೆ ದುರದೃಷ್ಟಕರ : ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆ ಆಗುತ್ತಿದ್ದು, ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ನೀಡಿದ ಹೇಳಿಕೆ ದುರದೃಷ್ಟಕರ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು. ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು. ರಾಜ್ಯ ಸರ್ಕಾರ ಆನೆಗಳ ಹಾವಳಿ ತಡೆಗೆ ಕಳೆದ 2 ವರ್ಷಗಳಲ್ಲಿ 489.46 ಮೀ. ಸೌರಬೇಲಿ, 284.82 ಆನೆ ತಡೆ ಕಂದಕ ನಿರ್ಮಾಣ ಮತ್ತು ನಿರ್ವಹಣೆ ಮಾಡಲಾಗುತ್ತಿದೆ, ಜೊತೆಗೆ ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8 ಆನೆ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.