ಇಷ್ಟರಲ್ಲಿಯೇ ಅಥಣಿ ಪುರಸಭೆ ನಗರ ಸಭೆಯಾಗಿ ಬಡ್ತಿ: ಶಾಸಕ ಲಕ್ಷ್ಮಣ ಸವದಿ

ಇಷ್ಟರಲ್ಲಿಯೇ ಅಥಣಿ ಪುರಸಭೆ ನಗರ ಸಭೆಯಾಗಿ ಬಡ್ತಿ: ಶಾಸಕ ಲಕ್ಷ್ಮಣ ಸವದಿ Meanwhile, Athani Municipality has been promoted to city council: MLA Lakshman Savadi

ಇಷ್ಟರಲ್ಲಿಯೇ ಅಥಣಿ ಪುರಸಭೆ ನಗರ ಸಭೆಯಾಗಿ ಬಡ್ತಿ: ಶಾಸಕ ಲಕ್ಷ್ಮಣ ಸವದಿ 

ಅಥಣಿ 13: ಪುರಸಭೆ ಇಷ್ಟರಲ್ಲಿಯೇ ನಗರ ಸಭೆಯಾಗಿ ಬಡ್ತಿ ಹೊಂದಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು.           

ಅವರು ಜಿಲ್ಲಾ ಪಂಚಾಯತ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ, ತಾಲೂಕಾ ಪಂಚಾಯತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನೂತನವಾಗಿ ಮಂಜೂರಾದ ಸರಕಾರಿ ಪ್ರೌಢ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  ಪುರಸಭೆಯಿಂದ ನಗರ ಸಭೆಯಾಗಿ ಬಡ್ಡಿ ಯಾದ ನಂತರ ಹೆಚ್ಚು ಹೆಚ್ಚು ಅನುದಾನ ಅಥಣಿಗೆ ಬರುವುದು ಮತ್ತು ಈ ಅನುದಾನದಲ್ಲಿ ಇನ್ನಷ್ಟು ಅಭಿವೃದ್ಧಿ ಮತ್ತು ಜನಪರ ಯೋಜನೆಗಳು ಅನುಷ್ಠಾನಗೊಂಡು ಅಥಣಿ ಪಟ್ಟಣ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.            

ಅಥಣಿ ತಾಲೂಕಿಗೆ 9 ಸರಕಾರಿ ಪ್ರೌಢ ಶಾಲೆಗಳು ಮಂಜೂರಾಗಿದ್ದು, ಇದು ಇಡೀ ರಾಜ್ಯದಲ್ಲಿಯೇ ಒಂದೇ ತಾಲೂಕಿಗೆ ಅತೀ ಹೆಚ್ಚು ಸರಕಾರಿ ಪ್ರೌಢ ಶಾಲೆಗಳು ಮಂಜೂರಾಗಿವೆ ಎಂದರು.  ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಅಥಣಿ ಪಟ್ಟಣದಲ್ಲಿ ಸರಕಾರಿ ಪ್ರೌಢ ಶಾಲೆ ಮಂಜೂರಾಗಿರುವುದು ಸಂತಸ ತಂದಿದ್ದು, ಇಲ್ಲಿ ಪ್ರೌಢ ಶಾಲೆ ಪ್ರಾರಂಭಕ್ಕೆ ಕಳೆದ 20 ವರ್ಷಗಳಿಂದ ನಾನು ಸತತ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ ಇದಕ್ಕೆ ಕೆಲ ತಾಂತ್ರಿಕ ಅಡಚಣೆಯ ಪರಿಣಾಮ ಇದು ಸಾಧ್ಯವಾಗಿರಲಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.         ನಮ್ಮ ರಾಜ್ಯದಲ್ಲಿ ದ್ವಿ ಭಾಷೆಗಿಂತ ತ್ರಿ ಭಾಷೆ ವ್ಯವಸ್ಥೆ ಜಾರಿಯಾಗಬೇಕು, ಮೊದಲನೆಯ ಭಾಷೆಯಾಗಿ ಮಾತೃ ಭಾಷೆ ಕನ್ನಡ, ಎರಡನೇ ಭಾಷೆ ರಾಷ್ಟ್ರಮಟ್ಟದಲ್ಲಿ ಬಳಕೆಯಲ್ಲಿರುವ ಹಿಂದಿ ಮತ್ತು ಅಂತಾರಾಷ್ಟ್ರೀಯ ಭಾಷೆಯಾಗಿ ಇಂಗ್ಲೀಷ ಭಾಷೆ ಈ ರೀತಿ ತ್ರಿ ಭಾಷಾ ಸೂತ್ರ ಜಾರಿಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಅವರು ಹಿಂದಿ ಭಾಷೆ ಕೊರತೆಯ ಪರಿಣಾಮ ದಕ್ಷಿಣ ಭಾರತದ ಯಾವ ನಾಯಕರೂ ಕೂಡ ರಾಷ್ಟ್ರ ಮಟ್ಟದ ಉನ್ನತ ಸ್ಥಾನಗಳನ್ನು ಅಲಂಕರಿಸಲಿಲ್ಲ ಹೀಗಾಗಿ ಮಾತೃ ಭಾಷೆಯ ಜೊತೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿಂದಿ ಹಾಗೂ ಇಂಗ್ಲೀಷ ಭಾಷೆಗೂ ಆದ್ಯತೆ ಕೊಡಬೇಕು ಎಂದರು.          

ಉತ್ತರ ಕರ್ನಾಟಕದಲ್ಲಿಯೇ ಅಥಣಿ ಶೈಕ್ಷಣಿಕ ಕೇಂದ್ರವಾಗಿ ಹೊರ ಹೊಮ್ಮಿದ್ದು, ಈಗಾಗಲೇ ಪಶು ವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಗೊಂಡಿದೆ ಮುಂದಿನ ಕೆಲವೇ ದಿನಗಳಲ್ಲಿ ಕೇಂದ್ರಿಯ ವಿದ್ಯಾಲಯ, ಕೃಷಿ ವಿದ್ಯಾಲಯ, ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ, ಅಲ್ಪ ಸಂಖ್ಯಾತ ಮಕ್ಕಳಿಗಾಗಿ ಮೌಲಾನಾ ಆಝಾದ ವಸತಿ ಶಾಲೆ, ಮೋರಾರ್ಜಿ ವಸತಿ ಶಾಲೆ ಮಂಜೂರಾಗಿವೆ ಜೊತೆಗೆ 11 ಗ್ರಾಮಗಳ ಸರಕಾರಿ ಶಾಲೆಗಳಲ್ಲಿ ಮೊದಲ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಲಾಗುವುದು ಎಂದರು.       

ಪುರಸಭಾ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ ಮಾತನಾಡಿದರು. ಸ್ಥಾಯಿ ಸಮೀತಿ ಅಧ್ಯಕ್ಷ ದತ್ತಾ ವಾಸ್ಟರ್, ಸದಸ್ಯರಾದ ರಾಜಶೇಖರ ಗುಡೋಡಗಿ, ರಿಯಾಜ ಸನದಿ, ಮಲ್ಲೇಶ ಸವದಿ, ವೀಲೀನ ಯಳಮೇಲಿ, ರವಿ ಬಡಕಂಬಿ, ಕಲ್ಲೇಶ ಮಡ್ಡಿ, ನರಸು ಬಡಕಂಬಿ, ರಾಮನಗೌಡ ಪಾಟೀಲ, ಬಸವರಾಜ ನಾಯಿಕ, ಆಸೀಫ ತಾಂಬೋಳಿ, ಎಸ್‌.ಡಿ.ಎಮ್‌.ಸಿ ಅಧ್ಯಕ್ಷ ರಾಕೇಶ ಮೈಗೂರ,  ಧುರೀಣರಾದ ಅಮರ ದುರ್ಗಣ್ಣವರ, ರಾಜು ಚೌಗಲಾ, ಅರುಣ ಯಲಗುದ್ರಿ, ಶ್ರೀರಂಗ ಜೋಶಿ, ಶಿವರುದ್ರ ಘೂಳಪ್ಪನವರ, ಮಂಜು ಹೋಳಿಕಟ್ಟಿ, ಮಹಾಂತೇಶ ಬಾಡಗಿ, ಮಹಾಂತೇಶ ಠಕ್ಕಣ್ಣವರ, ಶಿವು ಹಂಜಿ, ರಾಜು ಮದಭಾವಿ, ಪ್ರಶಾಂತ ತೋಡಕರ, ಡಾ.ಸಂಜಯ ದರೂರ,  ಕ್ಷೇತ್ರ ಶಿಕ್ಷಣಾಧಿಕಾರಿ ಎಮ್‌.ಆರ್‌.ಮುಂಜೆ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಅಕ್ಷರ ದಾಸೋಹ ಅಧಿಕಾರಿ ಮಲ್ಲಿಕಾರ್ಜುನ ನಾಮದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕ ಎಮ್‌.ಎ.ಚೌಗಲಾ ಸರ್ವರನ್ನು ಸ್ವಾಗತಿಸಿದರು. ಶಿಕ್ಷಕಿ ಜಿ.ಎನ್‌.ಕುಂಬಾರ ನಿರೂಪಿಸಿ, ವಂದಿಸಿದರು.