ಗಣಿತ ಯಾವಾಗಲೂ ಸತ್ಯವನ್ನೇ ಹೇಳುತ್ತದೆ: ಪ್ರೊ. ಕೊರಗಲ್ ವಿರೂಪಾಕ್ಷಪ್ಪ

ಗಣಿತ ಯಾವಾಗಲೂ ಸತ್ಯವನ್ನೇ ಹೇಳುತ್ತದೆ: ಪ್ರೊ. ಕೊರಗಲ್ ವಿರೂಪಾಕ್ಷಪ್ಪ  Mathematics always speaks the truth: Prof. Koragal Virupakshappa

ಲೋಕದರ್ಶನ ವರದಿ 

ಹಾವೇರಿ  01: “ಗಣಿತವು ಎಲ್ಲ ವಿಜ್ಞಾನಗಳ ತಾಯಿ. ಅದು ಎಂದಿಗೂ ಸುಳ್ಳು ಹೇಳುವುದಿಲ್ಲ, ಸತ್ಯವನ್ನೇ ಪ್ರತಿಪಾದಿಸುತ್ತದೆ” ಎಂದು ನಿವೃತ್ತ ಗಣಿತ ಪ್ರಾಧ್ಯಾಪಕ ಪ್ರೊ. ಕೊರಗಲ್ ವಿರೂಪಾಕ್ಷಪ್ಪ ಹೇಳಿದರು.  

ನಗರದ ಜಿಎಚ್ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳು ಹಾಗೂ ಕೇಳುಗರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.  

ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡ ಪ್ರೊ. ವಿರೂಪಾಕ್ಷಪ್ಪ, “ನಾನು ಗಣಿತ ಮಾಸ್ಟರ್‌. ನನ್ನ ಪತ್ನಿಯ ಹೆಸರು ರುದ್ರಮ್ಮ. ಗಣಿತದ ಮೇಲಿನ ಪ್ರೀತಿಯಿಂದಾಗಿ ಜಗತ್ತಿನ ಮೊದಲ ಗಣಿತಜ್ಞೆ ಲೀಲಾವತಿಯ ಹೆಸರನ್ನು ಲಗ್ನಪತ್ರಿಕೆಯಲ್ಲಿ ಸೇರಿಸಿ ವಿವಾಹವಾಗಿದ್ದೆ” ಎಂದು ಹೇಳಿದರು.  

“ವಿಜ್ಞಾನ ತರಗತಿಯಿಂದ ನನ್ನನ್ನು ಇಂಗ್ಲಿಷ್ ಬಾರದ ಕಾರಣ ಹೊರಗೆ ಕಳುಹಿಸಿದ ಸಂದರ್ಭದಲ್ಲೇ ಕನ್ನಡ ಕಲಿಯಲು ಆರಂಭಿಸಿದೆ. ನಂತರ ಕನ್ನಡದ ಬಗ್ಗೆ ಆಸಕ್ತಿ ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡೆ” ಎಂದು ತಮ್ಮ ಬದುಕಿನ ಪಯಣವನ್ನು ವಿವರಿಸಿದರು.  

15ನೇ ವಯಸ್ಸಿನಲ್ಲಿ ಕನ್ನಡ ಶಾಲೆಗೆ ಸೇರಿದ್ದೆ. ಅಲ್ಲಿಯವರೆಗೆ ದುಡಿಮೆಯೇ ನನ್ನ ಬದುಕಿನ ಭಾಗವಾಗಿತ್ತು. ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಕೆ.ಎಚ್‌. ಪಾಟೀಲರು ನನ್ನ ಬದುಕಿಗೆ ದಾರಿ ತೋರಿದರು. ಅವರ ಸಂದರ್ಶನದ ಮೂಲಕ ಗಣಿತ ಪ್ರಾಧ್ಯಾಪಕನಾಗುವ ಅವಕಾಶ ದೊರೆಯಿತು ಎಂದು ಅವರು ಸ್ಮರಿಸಿದರು.  

“ನಲವತ್ತು ವರ್ಷಗಳ ಹಿಂದೆ ಇದೇ ದಿನ (ಆಗಸ್ಟ್‌ 1) ನಾನು ಜಿಎಚ್ ಕಾಲೇಜಿಗೆ ಹಾಜರಾಗಿದ್ದೆ. ಇಂದು ಅದೇ ಕಾಲೇಜಿನಲ್ಲಿ ಮತ್ತೊಂದು ಸುಂದರ ಸಂವಾದ ನಡೆಯುತ್ತಿರುವುದು ಆತ್ಮತೃಪ್ತಿ ನೀಡಿದೆ” ಎಂದು ಪ್ರೊ. ವಿರೂಪಾಕ್ಷಪ್ಪ ಹೇಳಿದರು.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್‌. ಚನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಭಾಗದ ಮಟ್ಟದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಅವರೊಂದಿಗೆ ಸಂವಾದ ನಡೆಸುವ ಮೂಲಕ ಹೊಸ ಪೀಳಿಗೆಗೆ ಪ್ರೇರಣೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.