ರಾಜ್ಯ ಛಲವಾದಿ ಮಹಾಸಭಾ ತಾಲೂಕಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ರಾಜ್ಯ ಛಲವಾದಿ ಮಹಾಸಭಾ ತಾಲೂಕಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ Massive protest by the State Chalavadi Mahasabha Taluka Union

ರಾಜ್ಯ ಛಲವಾದಿ ಮಹಾಸಭಾ ತಾಲೂಕಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ 

ರಾಯಬಾಗ, 11 ; ನ್ಯಾಯಮೂರ್ತಿ ಹೆಚ್‌.ಎನ್‌.ನಾಗಮೋಹನದಾಸ ರವರು ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರದಿ ಅವೈಜ್ಞಾನಿಕವಾಗಿದ್ದು, ವರದಿಯಲ್ಲಿ ಬಲಗೈ ಸಂಬಂಧಿತ ಹೊಲೆಯ ಜಾತಿಗೆ ಮಾಡಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರೇಡ್‌-2 ತಹಶೀಲ್ದಾರ ಡಿ.ಎಸ್‌.ಜಮಾದಾರ ಮೂಲಕ ಸೋಮವಾರ ಮನವಿ ಸಲ್ಲಿಸಲಾಯಿತು.   

ಪಟ್ಟಣದ ತಹಶೀಲದಾರ ಕಚೇರಿ ಮುಖ್ಯದ್ವಾರವನ್ನು ಬಂದ ಮಾಡಿ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲೂಕಾ ಒಕ್ಕೂಟದಿಂದ ನ್ಯಾಯಮೂರ್ತಿ ಹೆಚ್‌.ಎಸ್‌.ನಾಗಮೋಹನದಾಸ ಅವರು ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ಅವರ ವಿರುದ್ಧ ಘೋಷಣೆಯನ್ನು ಕೂಗಿದರು.  

ಮುಖಂಡ ನಾಮದೇವ ಕಾಂಬಳೆ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನದಾಸರವರ ಅಧ್ಯಕ್ಷತೆಯ ಒಳಮೀಸಲಾತಿ ಏಕಸದಸ್ಯ ವಿಚಾರಣಾ ಆಯೋಗವು ಆ.4 ರಂದು ಸರ್ಕಾರಕ್ಕೆ ಸಲ್ಲಿಸಿರುವ ಬಲಗೈ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ ಪರವನ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುದಲ್ಲದೇ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ  ಸಮುದಾಯದ ಜನ ಸಂಖ್ಯೆಯನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿರುದಲ್ಲದೇ, ಜಾತಿಯೇ ಅಲ್ಲದ ಆದಿಕರ್ನಾಟಕ, ಆದಿದ್ರಾವಿಡ, ಆದಿಆಂದ್ರ ಸಮೂಹಕ್ಕೆ ಶೇಕಡ 1ರಷ್ಟು ಮೀಸಲಾತಿ ನಿಗಡಿಪಡಿಸಿರುದುನ್ನು ರದ್ದುಪಡಿಸಿ, ಸದರಿ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.  

ಏಕಪಕ್ಷೀಯವಾಗಿ ಒಂದು ಸಮುದಾಯವನ್ನು ಒಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿ ನ್ಯಾಯಮೂರ್ತಿ ನಾಗಮೋಹನದಾಸ್ ರವರು ವರದಿ ಸಲ್ಲಿಸಿದ್ದು, ಈ ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿದರು. ಬಲಗೈ ಸಂಬಂಧಿತ ಹೊಲೆಯ ಜಾತಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ, ಸರ್ಕಾರದ ವಿರುದ್ಧ ಬೃಹತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.  

ಪ್ರತಿಭಟನೆಯಲ್ಲಿ ಶ್ರಾವಣ ಕಾಂಬಳೆ, ರಾಘವೇಂದ್ರ ಸಿಂಪಿ, ದೀಲೀಪ ಪಾಯನ್ನವರ, ಶಶಿಕಾಂತ ಕಾಂಬಳೆ, ರಾಜು ಕಾಂಬಳೆ, ಉತ್ತಮ ಕಾಂಬಳೆ, ಮೇಘರಾಜ ಮಾಳಗೆ, ಮಹಾದೇವ ಕಾಂಬಳೆ, ಕೃಷ್ಣಾ ಗಸ್ತಿ, ಮಂಜುನಾಥ ಮಾನೆ, ನಿಜಲಿಂಗ ಕಾಂಬಳೆ ಸೇರಿ ಅನೇಕರು ಪಾಲ್ಗೊಂಡಿದ್ದರು.