ರಂಜಾನ್‌ನಲ್ಲಿ ಸಾಮೂಹಿಕ ಪ್ರಾರ್ಥನೆ, ಇಫ್ತಾರ್ ಕೂಟ ಬೇಡ: ವಕ್ಫ್ ಮಂಡಳಿಯಿಂದ ಮಾರ್ಗಸೂಚಿ

ಬೆಂಗಳೂರು, ಏ.16,ದರ್ಗಾ  ಮತ್ತು ಮಸೀದಿ ಹೋಗುವುದು ಮುಖ್ಯ ಅಲ್ಲ. ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ  ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ನಮಾಜ್ ಮಾಡದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ಸೂಚಿಸುವ ನಿಯಮವನ್ನು ಆದೇಶವನ್ನು ಮುಸ್ಲಿಂ‌ ಸಮುದಾಯದ ಬಾಂಧವರು ಕಟ್ಟುನಿಟ್ಟಾಗಿ  ಪಾಲಿಸಬೇಕು ಎಂದು ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಮುಹಮ್ಮದ್ ಯೂಸೂಫ್ ಕರೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಜಾನ್  ಸಮಯದಲ್ಲಿ ಬಡವರಿಗೆ ಸಹಾಯ ಮಾಡುವಾಗ ಜನ ಸೇರಿಸುವುದು ಬೇಡ. ಸಾಮೂಹಿಕವಾಗಿ ಸೇರಿ ಸಮಾಜಕ್ಕೆ  ಅನಾಹುತ ಸೃಷ್ಟಿಸುವುದು ಬೇಡ. ಪ್ರಸಕ್ತ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬರೀ ಮುಸ್ಲಿಂ  ಸಮುದಾಯದವರಿಗಷ್ಟೇ ಸಹಾಯ ಮಾಡದೇ ಇತರೆ ಸಮುದಾಯಗಳಿಗೂ ಸಹಾಯ ಮಾಡಬೇಕು. ಹೀಗೆ  ಮಾಡುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಸಲಹೆ ನೀಡಿದರು.
ರಮಝಾನ್‌ ಮಾಸದ ಉಪವಾಸಗಳನ್ನು ಸಕಾರಣವಿಲ್ಲದೆ ಬಿಡಬಾರದು. ಈಗಾಗಲೇ ತಿಳಿಸಿರುವಂತೆ ಮಸೀದಿಗಳಿಗೆ ತೆರಳದೆ ಪ್ರತಿ ದಿನದ ಐದು ಹೊತ್ತಿನ ನಮಾಜ್ ಅನ್ನು ಮನೆಯಲ್ಲಿ ನಿರ್ವಹಿಸಬೇಕು. ತರಾವೀಹ್‌ ನಮಾಜ್‌ ಅನ್ನು ಕುಟುಂಬ ಸದಸ್ಯರು ಸೇರಿ ಮನೆಯಲ್ಲಿಯೇ ಕನಿಷ್ಠ ಅವಧಿಯಲ್ಲಿ ಪೂರ್ಣಗೊಳಿಸಬೇಕು. ತರಾವೀಹ್‌ ನಮಾಝ್‌ಗಾಗಿ ನೆರೆ ಹೊರೆಯವರನ್ನು ಆಹ್ವಾನಿಸುವುದಾಗಲೀ ಅಥವಾ ಬೇರೆ ಕಡೆ ಅದರ ಆಯೋಜನೆ ಮಾಡುವುದಾಗಲೀ ಮಾಡಬಾರದು ಎಂದು ಹೇಳಿದರು. ರಮಝಾನ್‌ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ತಿರುಗಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು. ಲಾಕ್‌ ಡೌನ್‌ ಮುಗಿಯುವವರೆಗೆ ಯಾವುದೇ ಕಾರಣಕ್ಕೂ ಲೌಡ್ ಸ್ಪೀಕರ್ ಬಳಸಿ ಜನರನ್ನು ಸೆಹರಿಗಾಗಿ ಎಚ್ಚರಿಸುವುದನ್ನು ಕೈಬಿಡಬೇಕು. ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ ಹಾಗೂ ಮಾರಾಟದ ವಿಚಾರದಲ್ಲಿ ಸರ್ಕಾರ ನೀಡುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು. ಮನೆ ಅಥವಾ ಮುಸಲ್ಲಾದಲ್ಲಿ ಆರು ದಿನ ಅಥವಾ 10 ದಿನಗಳಲ್ಲಿ ತರಾವೀಹ್‌ ನಮಾಜ್‌ ನಲ್ಲಿ ಕುರ್‌ಆನ್‌ ಪೂರ್ಣಗೊಳಿಸುವಂತಹ ಯಾವುದೇ ಪ್ರಯತ್ನಗಳನ್ನು ಮಾಡಬಾರದು. ಮಸೀದಿಯ ಆವರಣದಲ್ಲಿ ವಾಸವಿರುವ ಮುಅಝ್ಝಿನ್ ಅಥವಾ ಇಮಾಮ್‌ ಈ ಹಿಂದಿನಂತೆ ಸೆಹರಿ ಸಮಯ ಮುಕ್ತಾಯಗೊಳ್ಳುವ ಹಾಗೂ ಇಫ್ತಾರ್ ಸಮಯ ಆರಂಭಗೊಳ್ಳುವ ಸೂಚನೆಯನ್ನು ನೀಡಬಹುದು. ಸೆಹರಿ ಹಾಗೂ ಇಫ್ತಾರ್ ಕೂಟವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಯೂಸುಫ್ ಹೇಳಿದರು.
ರಮಝಾನ್ ಮಾಸದಲ್ಲಿ ಬಡವರು, ಅಶಕ್ತರಿಗೆ ನೆರವು ನೀಡುವುದನ್ನು ಮುಂದುವರಿಸಬೇಕು. ಝಕಾತ್, ಸದಖಾ ಮೂಲಕ  ಸಂಬಂಧಿಕರು, ನೆರೆಹೊರೆಯವರು ಹಾಗೂ ನೆರವಿನ ಅಗತ್ಯವಿರುವಂತಹ ಮುಸ್ಲಿಮೇತರರಿಗೂ ನೆರವು  ನೀಡಬೇಕು. ಕೊರೋನಾ ವೈರಾಣು ಮಹಾಮಾರಿಯಿಂದ ಎದುರಾಗುವ ಸಂಕಷ್ಟದಿಂದ ನಮ್ಮ ದೇಶ ಹಾಗೂ ಮಾನವ ಕುಲ ಹೊರಬರುವಂತೆ ಇಫ್ತಾರ್ ಹಾಗೂ ತಹಜ್ಜುದ್ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪ್ರಾರ್ಥಿಸಬೇಕು. ನಮ್ಮ ದೇಶ ಹಾಗೂ ಸಮುದಾಯಕ್ಕೆ ಸಮಸ್ಯೆಯನ್ನುಂಟು ಮಾಡುವಂತಹ ಯಾವುದೇ ಬಗೆಯ ಚಟುವಟಿಕೆಗಳನ್ನು ಮಕ್ಕಳು ಅಥವಾ ಯುವಕರು ಸೇರಿದಂತೆ ಯಾರೂ ಮಾಡದಂತೆ ಪೋಷಕರು, ಕುಟುಂಬದ ಜವಾಬ್ದಾರಿಯುತ ಸದಸ್ಯರು ಗಮನ ಹರಿಸಬೇಕು. ವಿಶೇಷವಾಗಿ ಯುವಕರು ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುವುದು, ಕಾರುಗಳು ಸೇರಿದಂತೆ ಇನ್ನಿತರ ವಾಹನಗಳಲ್ಲಿ ರಾತ್ರಿ ಹೊತ್ತು ಅನಗತ್ಯವಾಗಿ ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಲಿದ್ದಾರೆ ಎಂದು ಅವರು ಎಚ್ಚರಿಸಿದರು.
ಮದ್ರಸಾಗಳು ನಮ್ಮ ದೀನ್‌ ಹಾಗೂ ಸಮುದಾಯದ ಆಸ್ತಿ, ಅವುಗಳನ್ನು ಉಳಿಸಿ ಮುಂದುವರಿಸುವುದು ನಮ್ಮ ಜವಾಬ್ದಾರಿ. ಆದುದರಿಂದ ಈ ಹಿಂದೆ ನೀಡುತ್ತಿದ್ದಂತೆ ನಿಮ್ಮ ನೆರವನ್ನು ಮದ್ರಾಸಗಳಿಗೆ ನೀಡಿ ಎಂದು ಧಾರ್ಮಿಕ ವಿದ್ವಾಂಸ ಸಗೀರ್ ಅಹ್ಮದ್ ತಿಳಿಸಿದರು.
ಮಸ್ಜಿದ್ ಹಾಗೂ ಮದ್ರಸಾಗಳ ಮುಖ್ಯಸ್ಥರು, ತಮ್ಮ ಸಂಸ್ಥೆಗಳ ಇಮಾಮ್‌, ಮುಅಝ್ಝಿನ್, ಶಿಕ್ಷಕರು, ಸಹಾಯಕ ಸಿಬ್ಬಂದಿಗಳ ಹಿತವನ್ನು ಕಾಪಾಡಬೇಕು. ಈಗಾಲಗೇ ಅಮೀರೆ ಶರೀಅತ್‌ ಸೂಚಿಸಿದಂತೆ, ಇಮಾಮ್, ನಾಯಬ್ ಎ ಇಮಾಮ್, ಮುಅಝ್ಝಿನ್, ಖಾದಿಮ್ ಮಾತ್ರ ಮಸೀದಿಯಲ್ಲಿ ಐದು ಹೊತ್ತು ನಮಾಜ್‌ ನಿರ್ವಹಿಸಬೇಕು. ಉಳಿದವರಿಗೆ ಪ್ರವೇಶವಿಲ್ಲ. ಆಝಾನ್ ನೀಡುವಾಗ ಅತ್ಯಂತ ಲಘು ಧ್ವನಿಯಲ್ಲಿ ನೀಡಬೇಕು ಎಂದು ಹೇಳಿದರು.
ಮಸೀದಿಯ ಆವರಣದಲ್ಲಿ ವಾಸವಿರುವ ಇಮಾಮ್, ನಾಯಬ್ ಎ ಇಮಾಮ್, ಮುಅಝ್ಝಿನ್‌ ಯಾವುದೇ ಪ್ರವಚನವಿಲ್ಲದೆ ಕನಿಷ್ಠ ಅವಧಿಯಲ್ಲಿ ಮಸೀದಿಯಲ್ಲಿ ತರಾವೀಹ್ ನಮಾಜ್ ನಿರ್ವಹಿಸಬೇಕು. ಉಪವಾಸ ವೃತ ಆಚರಿಸುವವರಿಗಾಗಿ ಹಂಚಲು ಮಸೀದಿ ಆವರಣದಲ್ಲಿ ಗಂಜಿಯನ್ನು ಸಿದ್ಧಪಡಿಸುವುದನ್ನು ನಿರ್ಬಧಿಸಲಾಗಿದೆ ಎಂದು ಯೂಸುಫ್ ತಿಳಿಸಿದರು.
ವಕ್ಫ್‌ಬೋರ್ಡ್  ಕಾರ್ಯದರ್ಶಿ ಇಬ್ರಾಹಿಂ ಮಾತನಾಡಿ, ಸರ್ಕಾರದ ಆದೇಶ ಕಟ್ಟುನಿಟ್ಟಾಗಿ  ಪಾಲಿಸಬೇಕು. ಕೊರೊನಾ  ಬಗ್ಗೆ ಜಾಗೃತಿ ಮೂಡಿಸಲು ಮಸೀದಿಯಲ್ಲಿ ಮೈಕ್ ಬಳಸಬಹುದು. ನಾಲ್ಕು  ಬಾರಿ ಮಾತ್ರ ಘೋಷಣೆ  ಕೂಗಲು ಅವಕಾಶವಿದೆ. ಆದರೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ  ಮಾಡಬಾರದು ಎಂದು ಸೂಚಿಸಿದರು.
ರಾಜ್ಯದಿಂದ ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆಗೆ 698 ತಬ್ಲಿಘ್‌ಗಳು ಹೋಗಿದ್ದಾರೆ.
ಎಲ್ಲರೂ  ತಪಾಸಣೆ ಗೆ ಹೋಗಿದ್ದಾರೆ‌. ನಿಜಾಮುದ್ದೀನ್ ಸಭೆಗೆ ಹೋಗಿ ಬಂದವರಿಗೆ 8 ಮಂದಿಗೆ ಮಾತ್ರ  ಪಾಸಿಟಿವ್ ಬಂದಿದೆ. ಉಳಿದೆಲ್ಲರಿಗೂ ನೆಗಟಿವ್ ಬಂದಿದೆ. ತಪ್ಪು ಸಂದೇಶ ರವಾನೆ ಮಾಡಬೇಡಿ.  ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂಬ ಭೇದ ಭಾವ ಬೇಡ ಎಂದರು.ಮೇ  3 ಬಳಿಕ ಸರ್ಕಾರದ ನಿರ್ಧಾರ  ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.  ತಬ್ಲಿಘ್ ಜಮಾತ್ ಬಗ್ಗೆ ತಪ್ಪು ಸಂದೇಶ ರವಾನೆ ಮಾಡಬೇಡಿ. 2015ರಲ್ಲಿ  ನಿಜಾಮುದ್ದಿನ್  ವಿಭಾಗವಾಗಿದೆ. ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಮಾವೇಶ ಮಾಡಿದ್ದರೋ  ಅವರ  ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ನಮ್ಮ ರಾಜ್ಯ ಸರ್ಕಾರಕ್ಕೂ   ಅದಕ್ಕೂ ಸಂಬಂಧ ಇಲ್ಲ. ದೆಹಲಿ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ಯೂಸುಫ್  ಹೇಳಿದರು.ಈ ಬಾರಿ ರಂಜಾನ್ ತಿಂಗಳಲ್ಲಿ ಮಸೀದಿಗೆ ಹೋಗುವಂತೆ ಇಲ್ಲ. ಸಾಮೂಹಿಕ   ಪ್ರಾರ್ಥನೆ ಮಾಡುವಂತೆ ಇಲ್ಲ. ಇಫ್ತಾರ್ ಕೂಟ ಆಯೋಜಿಸುವಂತೆ ಇಲ್ಲ. ಇದಕ್ಕೆ  ಮುಖ್ಯಮಂತ್ರಿ  ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಧರ್ಮ ಗುರುಗಳು  ಒಪ್ಪಿಕೊಂಡಿದ್ದಾರೆ  ಎಂದರು.