ಉಗಾರ ಖುರ್ದದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಉಗಾರ ಖುರ್ದದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ Mass Satyanarayana Puja at Ugara Khurda


ಕಾಗವಾಡ 05: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಮುಖಾಂತರ ರಾಜ್ಯಾದ್ಯಂತ ಹಳ್ಳಿ-ಹಳ್ಳಿಗಳಲ್ಲಿ ಎಲ್ಲ ಜಾತಿ- ಪಂಗಡಗಳ ಮಹಿಳೆಯರನ್ನು ಒಗ್ಗೂಡಿಸಿ, ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ಯಾವುದೇ ಸರ್ಕಾರಕ್ಕೆ ಸಾಧ್ಯವಾಗದ ಸೇವೆಯನ್ನು ಅವರು ನೀಡುತ್ತಿದ್ದಾರೆರಂದು ಶಾಸಕ ರಾಜು ಕಾಗೆ ಹೇಳಿದರು.   

ಅವರು ರವಿವಾರ ದಿ.4ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದ ವಿಹಾರ ಸಭಾಭವನದಲ್ಲಿ ತಾಲೂಕ ಮಟ್ಟದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸುಮಾರು 2000 ಮಹಿಳೆರನ್ನು ಒಂದುಗೂಡಿಸಿ, ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧರ್ಮಸಭೆಯ ಸಮಾರಂಭದ ಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಮೊದಲು ಮಹಿಳೆಯರು ಕೇವಲ ತಮ್ಮ ಮನೆಗೆ ಸೀಮಿತರಾಗಿದ್ದರು. ಈಗ ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವ-ಸಹಾಯ ಸಂಘದ ಮುಖಾಂತರ ಆರ್ಥಿಕ ನೆರವು ನೀಡುವ ಧರ್ಮಸ್ಥಳದ ಸೇವೆ ಅಭಿನಂದನೀಯವಾಗಿದೆ ಎಂದರು.   

ಝಂಜರವಾಡ ಮಠದ ಬಸವರಾಜೇಂದ್ರ ಶರಣರು ಸಾನಿಧ್ಯ ವಹಿಸಿ, ಮಾತನಾಡುತ್ತ, ಧರ್ಮಸ್ಥಳ ಯೋಜನೆಯವರು ಸಂಪೂರ್ಣ ರಾಜ್ಯದಲ್ಲಿ ಶಿಕ್ಷಣ, ಧಾರ್ಮಿಕ, ಕೃಷಿ, ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೆ ನೆರವು ನೀಡುತ್ತಿದ್ದಾರೆ. ಇಂದು ಎಲ್ಲ ಸದಸ್ಯರನ್ನು ಒಂದುಗೂಡಿಸಿ ಸತ್ಯನಾರಾಯಣ ಮಹಾಪೂಜೆಯ ಮುಖಾಂತರ ಪ್ರತಿಯೊಬ್ಬರ ಜೀವನ ಆನಂದಮಯವಾಗಲೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.  

ಉಗಾರದ ಮಹಿಳಾ ಮಂಡಳದ ಅಧ್ಯಕ್ಷೆ ರಾಧಿಕಾತಾಯಿ ಶಿರಗಾಂವಕರ ಅನಿಸಿಕೆ ಹಂಚಿಕೊಂಡರು. ತಾಲೂಕಾ ಯೋಜನಾಧಿಕಾರಿ ಸಂಜೀವ್ ಮರಾಠಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪುರಸಭೆ ಅಧ್ಯಕ್ಷೆ ಫಾತಿಮಾ ನದಾಫ, ಉಪಾಧ್ಯಕ್ಷ ಸತೀಶ ಜಗತಾಪ, ಕೃಷಿ ಮೇಲ್ವಿಚಾರಕ ಶಿವಪ್ಪ ಶಿಪರಮಟ್ಟಿ, ವಲಯ ಮೇಲ್ವಿಚಾರಕ ಸಾವಕ್ಕಾ ಅಂಬಲಿ, ಈಶ್ವರ ಕಾಂಬಳೆ, ರಾವಸಾಬ ಕಾಕಡೆ ಸೇರಿದಂತೆ ಸೇವಾ ಪ್ರತಿನಿಧಿಗಳು, ಮಹಿಳಾ ಸದಸ್ಯರು ಉಪಸ್ಥಿತರಿದ್ದರು.