ಮಂಗನಕಾಯಿಲೆ: ತಜ್ಞರ ತಂಡ ಮುಂದಿನ ವಾರ ಶಿವಮೊಗ್ಗ ಜಿಲ್ಲೆಗೆ ಭೇಟಿ- ಕೆ.ಎಸ್.ಈಶ್ವರಪ್ಪ

ಬೆಂಗಳೂರು, ಏ.  15, ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆ ಉಲ್ಭಣಗೊಳ್ಳುತ್ತಿದ್ದು,  ಮುಂದಿನ ವಾರ ಬೆಂಗಳೂರಿನ ಉನ್ನತ ಮಟ್ಟದ ವೈದ್ಯಾಧಿಕಾರಿಗಳು ಶಿವಮೊಗ್ಗ‌ ಜಿಲ್ಲೆಗೆ ಭೇಟಿ  ನೀಡುತ್ತಿರುವುದಾಗಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ  ಕೆ‌.ಎಸ್.ಈಶ್ವರಪ್ಪ ಹೇಳಿದ್ದಾರೆ.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಉಲ್ಬಣಗೊಂಡಿರುವ ಮಂಗನ‌ ಕಾಯಿಲೆ ಬಗ್ಗೆ ಇವತ್ತು  ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಶಿವಮೊಗ್ಗ, ಸಾಗರ, ಸೊರಬ,  ತೀರ್ಥಹಳ್ಳಿ ಭಾಗದಲ್ಲಿ ಮಂಗನ‌ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಲಾಗಿದೆ ಎಂದರು.ಈ  ಭಾಗದ ಜನಪ್ರತಿನಿಧಿಗಳಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಸೇರಿದಂತೆ ಶಿವಮೊಗ್ಗ  ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಮಂಗನ ಕಾಯಿಲೆಗೆ ಅಗತ್ಯ ಆಗಿರುವ ವೈದ್ಯಕೀಯ ಸೌಕರ್ಯಗಳನ್ನು ಶಿವಮೊಗ್ಗದ ಮೆಗ್ಗಾನ್ ಮತ್ತು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.ಮಂಗನ ಕಾಯಿಲೆ ಹರಡದಂತೆ ಹೆಚ್ಚಿನ ಗಮನ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ.ಮುಂದಿನ‌  ಸೋಮವಾರ ಬೆಂಗಳೂರಿನಿಂದ ಉನ್ನತ ಮಟ್ಟದ ವೈದ್ಯಾಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ  ಪರಿಸ್ಥಿತಿಯ ಅಧ್ಯಯನ ನಡೆಸಲಿದ್ದಾರೆ. ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ  ಈಶ್ವರಪ್ಪ‌ ಹೇಳಿದರು.